ಇಟಗಿ ಮಹೇಶ್ವರ ಉತ್ಸವ ಯಾವಾಗ?

| Published : Mar 14 2024, 02:05 AM IST

ಸಾರಾಂಶ

ಸರ್ಕಾರವು ಪ್ರತೀ ವರ್ಷ ಇಟಗಿ ಉತ್ಸವವನ್ನು ತನ್ನದೇ ಉಸ್ತುವಾರಿಯಲ್ಲಿ ಆಚರಣೆಗೆ ಮುಂದಾಗಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಕನಕಗಿರಿ, ಆನೆಗೊಂದಿ ಉತ್ಸವದ ಬಳಿಕ ಇಟಗಿ ಉತ್ಸವಕ್ಕೂ ಬೇಕಿದೆ ಆದ್ಯತೆಅಮರೇಶ್ವರಸ್ವಾಮಿ ಕಂದಗಲ್ಲಮಠ

ಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನ ಇತಿಹಾಸ ಪ್ರಸಿದ್ಧ, ದೇವಾಲಯಗಳ ಚಕ್ರವರ್ತಿ ಎಂದು ಹೆಸರು ಪಡೆದಿರುವ ಇಟಗಿ ಮಹೇಶ್ವರ ದೇವಾಲಯ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ. ಆದರೆ ಈ ವೈಭವವನ್ನು ಸಾರಲು ಸರ್ಕಾರವು ಪ್ರತೀ ವರ್ಷ ಇಟಗಿ ಉತ್ಸವವನ್ನು ತನ್ನದೇ ಉಸ್ತುವಾರಿಯಲ್ಲಿ ಆಚರಣೆಗೆ ಮುಂದಾಗಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಜಿಲ್ಲೆಯ ಐತಿಹಾಸಿಕ ಸ್ಥಳಗಳಾದ ಕನಕಗಿರಿ, ಆನೆಗೊಂದಿ ಉತ್ಸವ ಈ ವರ್ಷ ಜರುಗಿದವು. ಅದರಂತೆ ಇಟಗಿ ಉತ್ಸವವೂ ಜರುಗಲಿ ಎಂಬ ಆಶಯ ಜನರದ್ದಾಗಿದೆ.

ಸುಮಾರು 900 ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿಯ ಇಟಗಿ ಮಹೇಶ್ವರ ದೇವಸ್ಥಾನ ಭಾರತೀಯ ಇತಿಹಾಸ ಚರಿತ್ರೆಯಲ್ಲಿ ಅಚ್ಚಳಿಯದ ಸ್ಥಾನ ಪಡೆದಿದೆ. ಇಟಗಿ ಮಹೇಶ್ವರ ದೇವಾಲಯ ಅಂದರೆ ಅದು ಕಲಾತ್ಮಕ, ರಚನಾತ್ಮಕ ಹಾಗೂ ಐತಿಹಾಸಿಕ ಸ್ಥಳವಾಗಿದೆ.

ಕಲೆಗಳಲ್ಲಿ ಅತ್ಯಂತ ಸೂಕ್ಷ್ಮಾತಿ ಸೂಕ್ಷ ಕೆತ್ತನೆಗಳಿಂದ ಈ ದೇವಾಲಯ ಕೂಡಿದೆ. ದೇವಾಲಯದ ಹಿಂದೆ ಕಿಲ್ಲೆದಬಾವಿ ಇದ್ದು, ಈಶ್ವರನ ಪೂಜೆಗೆ ಮಜ್ಜನ ನೀರನ್ನು ಇಲ್ಲಿಂದಲೇ ತರಲಾಗುತ್ತಿತ್ತು. ಈ ಮಹೇಶ್ವರ ದೇವಾಲಯ ನಿರ್ಮಾಣ ಕುರಿತು ದೇವಾಲಯದ ಸರಸ್ವತಿ ಗುಡಿಯಲ್ಲಿರುವ ಶಾಸನ ವಿವರವಾಗಿ ತಿಳಿಸುತ್ತದೆ.

ಯುಗಾದಿ ದಿನ ಸೂರ್ಯ ರಶ್ಮಿಗಳು ನೇರವಾಗಿ ಗರ್ಭಗುಡಿ ಪ್ರಾಂಗಣಕ್ಕೆ ಬಿದ್ದು ಅವುಗಳ ಪ್ರತಿಬಿಂಬ ಮಹೇಶ್ವರ ದೇವರ ವಿಗ್ರಹದ ಮೇಲಿರುತ್ತವೆ. ಏಷ್ಯಾದಲ್ಲಿಯೇ ಅತ್ಯಂತ ಎರಡನೇ ದೊಡ್ಡ ಪುಷ್ಕರಣಿ ಇಲ್ಲಿದ್ದು, ಇಟಗಿ ಪುಷ್ಕರಣಿ ಎಂಬ ಹೆಸರು ಪಡೆದಿದೆ.

ದೇವಾಲಯ ಚಕ್ರವರ್ತಿ ಮಹೇಶ್ವರ ದೇವಾಲಯ ೧೧೧೨ರಲ್ಲಿ ಸ್ಥಾಪನೆಯಾಗಿದೆ. ಯಜ್ಞಯಾಗಾದಿ ಮಾಡುವ ಇಗ್ಗಿಷ್ಟಿಕೆ ಹೆಸರು ರೂಪಾಂತರವಾಗಿ ಇಟ್ಟಿಗಿ, ಇಟಗಿ ಆಗಿದೆ. ಇಟಗಿ ಮಹಾದೇವ ದೇವಾಲಯವನ್ನು ಕಲ್ಯಾಣಿ ಚಾಲುಕ್ಯರ ೬ನೇ ವಿಕ್ರಮಾದಿತ್ಯನ ಪ್ರಧಾನ ದಂಡನಾಯಕನಾಗಿದ್ದ ಮಹಾದೇವ ನಿರ್ಮಿಸಿದ್ದಾನೆ. ಹಿಂದೆ ನಾಲ್ಕು ನೂರು ಬ್ರಾಹ್ಮಣರಿದ್ದ ಅಗ್ರಹಾರವಾಗಿತ್ತು ಎಂಬ ಪ್ರತೀತಿ ಇದೆ.

ಈ ದೇವಾಲಯ ನಿರ್ಮಾಣಗೊಂಡ ೪ ವರ್ಷದ ನಂತರ ಬೇಲೂರು ಚೆನ್ನಕೇಶವ ದೇವಾಲಯ ನಿರ್ಮಾಣಗೊಂಡಿದೆ. ಇಟಗಿಯಲ್ಲಿ ಸಣ್ಣ ಪ್ರಮಾಣದಲ್ಲಿ ಕೆತ್ತಿ ನಿಲ್ಲಿಸಿದ ಶಿಲಾ ಬಾಲಿಕೆಯರನ್ನು ದೊಡ್ಡದಾಗಿ ಬೇಲೂರು ಚೆನ್ನಕೇಶವ ದೇವಾಲಯದಲ್ಲಿ ಕೆತ್ತಲಾಗಿದೆ. ಮಲ್ಲೋಜ, ದಾಸೋಜ, ಬಮ್ಮೋಜ ಎಂಬ ಶಿಲ್ಪಿಗಳು ಕೆತ್ತಿದ್ದು ಬೇಲೂರಿಗೂ ಹೋಗಿ ಆ ದೇವಾಲಯವನ್ನು ನಿರ್ಮಿಸಿದರೆಂದು ಶಾಸನಗಳು ಹೇಳುತ್ತವೆ.

ಕಂಬಗಳು, ಜಾಲಂದುಗಳು ಅಂತರಾಳ, ಶುತನಾಶಿ ಕಂಬಗಳು ಬೋದಿಗೆ ದೇವಸ್ಥಾನದ ಅಷ್ಮಕೋನಾಕೃತಿ ವಿಶೇಷತೆಗಳಿಂದ ದೇವಾಲಯ ಕೂಡಿದೆ. ದೇವಸ್ಥಾನದಲ್ಲಿರುವ ೬೦ ಕಂಬಗಳ ಕೆತ್ತನೆ ಒಂದಕ್ಕೊಂದು ಭಿನ್ನವಾಗಿವೆ. ನೋಡಲು ಒಂದೇ ನೋಟದಂತೆ ಕಂಡರೂ ಸಹ ಒಂದು ಕಂಬ ಇನ್ನೊಂದು ಕಲೆಯನ್ನು ಹೋಲುವುದಿಲ್ಲ.

ಇಟಗಿ ಮಹೇಶ್ವರ ದೇವಾಲಯ ಸುಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿಯ ಕಲಾಕೆತ್ತನೆ ಇಡೀ ವಿಶ್ವಕ್ಕೆ ಮಾದರಿ. ಅಲ್ಲದೆ ಇದನ್ನು ಮಹಾದೇವ ದೇವಾಲಯ ಎಂದು ಕರೆಯಲಾಗುತ್ತದೆ. ಈ ದೇವಸ್ಥಾನಕ್ಕೆ ಅನೇಕ ಭಕ್ತರು ಬೇಡಿಕೊಳ್ಳುತ್ತಾರೆ. ಸರ್ಕಾರ ಮೊದಲು ಇಟಗಿ ಉತ್ಸವ ಆಚರಣೆ ಮಾಡುತ್ತಿತ್ತು. ಸಂಘ-ಸಂಸ್ಥೆಗಳಿಂದ ಪ್ರತಿವರ್ಷ ಇಟಗಿ ಉತ್ಸವ ಮಾಡುತ್ತಿವೆ.

ಒತ್ತಾಯ:

ಆನೆಗೊಂದಿ ಹಾಗೂ ಕನಕಗಿರಿ ಉತ್ಸವ ಆಚರಣೆ ಮಾಡಲಾಗಿದೆ. ಅದೇ ರೀತಿ ಇಟಗಿ ಗ್ರಾಮದ ದೇವಾಲಯ ಚಕ್ರವರ್ತಿ ಮಹೇಶ್ವರ ದೇವಾಲಯದ ಉತ್ಸವವು ಆಚರಣೆ ಆಗಬೇಕು. ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಗಮನ ಹರಿಸಬೇಕು ಎಂದು ಇಟಗಿ ಗ್ರಾಮಸ್ಥರಾದ ಅಂದಪ್ಪ ಹುಳ್ಳಿ, ಪ್ರಭುರಾಜ ಹಳ್ಳಿ, ಶ್ರೀಕಾಂತ ಪೂಜಾರ, ಶಾಂತಯ್ಯ ಕಂತಿ ಸೇರಿದಂತೆ ಇಟಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.