ಹೊಸಪೇಟೆಯಲ್ಲಿ ಹೊಸ ಸಕ್ಕರೆ ಕಾರ್ಖಾನೆ ಭೂಮಿಪೂಜೆ ಯಾವಾಗ?

| Published : Jan 14 2024, 01:31 AM IST / Updated: Jan 14 2024, 02:39 PM IST

ಸಾರಾಂಶ

ಹಂಪಿ ಉತ್ಸವಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕ್ಕರೆ ಕಾರ್ಖಾನೆ ಆರಂಭಿಸಲು ಭೂಮಿಪೂಜೆ ನೆರವೇರಿಸುವರೇ ಎಂಬ ಕುತೂಹಲ ಜನರಲ್ಲಿ ಮೂಡಿದೆ. ವಿಧಾನಸಭೆ ಚುನಾವಣೆ ವೇಳೆ ಅವರು ಭರವಸೆ ನೀಡಿದ್ದರು.

ಕೃಷ್ಣ ಎನ್. ಲಮಾಣಿ

ಹೊಸಪೇಟೆ: ಹೊಸಪೇಟೆಗೆ ಸಕ್ಕರೆ ಕಾರ್ಖಾನೆ ನೀಡಲಾಗುವುದು ಎಂದು ವಿಧಾನಸಭೆ ಚುನಾವಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಈಗ ಹಂಪಿ ಉತ್ಸವಕ್ಕೆ ಸ್ವತಃ ಮುಖ್ಯಮಂತ್ರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ರೈತರ ಪ್ರಮುಖ ಬೇಡಿಕೆಯಾಗಿರುವ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸುವವರೇ ಎಂಬ ಪ್ರಶ್ನೆ ಈಗ ಮತ್ತೆ ಮುನ್ನಲೆಗೆ ಬಂದಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಬೆನಕಾಪುರ ಹಾಗೂ ಕಾಳಘಟ್ಟ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ೭೭ ಎಕರೆ ಜಾಗ ಗುರುತಿಸಲಾಗಿದೆ. ಹಿಂದಿನ ಸರ್ಕಾರ ಹಂಪಿ ಶುಗರ್ಸ್ ಕಾರ್ಖಾನೆ ಸ್ಥಾಪನೆಗೆ ಮುಂದಾಗಿತ್ತು. 

ಜಾಗ ವಿವಾದದಿಂದ ಕಾರ್ಖಾನೆ ಭೂಮಿಪೂಜೆ ನೆರವೇರಿಲ್ಲ. ಈಗ ಹೊಸ ಜಾಗ ಗುರುತಿಸಲಾಗಿದ್ದು, ಯಾರು ಕಾರ್ಖಾನೆ ಸ್ಥಾಪನೆ ಮಾಡಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಹಾಗಾಗಿ ಹಂಪಿ ಉತ್ಸವದರೊಳಗೆ ಎಲ್ಲವೂ ಸ್ಪಷ್ಟವಾಗಿ; ಈ ಭಾಗದ ರೈತರಿಗೆ ಸಿಹಿ ಸುದ್ದಿಯನ್ನು ಸರ್ಕಾರ ನೀಡಲಿದೆಯೇ ಎಂಬ ನಿರೀಕ್ಷೆ ಗರಿಗೆದರಿದೆ.

ಜಾಗ ಪರಿಶೀಲನೆ: ಸಕ್ಕರೆ ಕಾರ್ಖಾನೆ ಸ್ಥಾಪನೆ ಜಾಗವನ್ನು ಶಾಸಕ ಎಚ್.ಆರ್. ಗವಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹಲವು ಬಾರಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಗುರುತಿಸಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಕೂಡ ಬೆನಕಾಪುರ ಹಾಗೂ ಕಾಳಘಟ್ಟ ಪ್ರದೇಶದಲ್ಲಿ ಗುರುತಿಸಿರುವ ಜಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಆದರೆ, ಇನ್ನೂ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸಂಬಂಧಿಸಿ ಯಾವುದೇ ಪ್ರಗತಿ ಆಗದೇ ಇರುವುದು ಈ ಭಾಗದ ರೈತರಲ್ಲಿ ನಿರಾಸೆ ತಂದಿದೆ.

ಏತನ್ಮಧ್ಯೆ, ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಯಾರೂ ಮುಂದೆ ಬಾರದೇ ಹೋದಲ್ಲಿ ನಾನೇ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದ್ದರು. ಅಲ್ಲದೆ, ಸರ್ಕಾರ ಜಮೀನು ಒದಗಿಸಿದಲ್ಲಿ ನಾನೇ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವೆ ಎಂದು ಮಾಜಿ ಸಚಿವ ಆನಂದ ಸಿಂಗ್ ಹೇಳಿಕೆ ನೀಡಿದ್ದರು. ಹಾಗಾಗಿ ಸಕ್ಕರೆ ಕಾರ್ಖಾನೆ ಸ್ಥಾಪನೆ ವಿಷಯ ಬರೀ ಕಾಗದದಲ್ಲೇ ಉಳಿದಿದೆ. ಜತೆಗೆ ಹೇಳಿಕೆ, ಪ್ರತಿ ಹೇಳಿಕೆ ವಿಷಯವಾಗಿ ಮಾರ್ಪಟ್ಟಿರುವುದು ರೈತರಲ್ಲಿ ಬೇಸರ ತರಿಸಿದೆ.

ಮಾಜಿ ಸಚಿವ ಆನಂದ ಸಿಂಗ್ ಅವರು ನಗರದ ಜಂಬುನಾಥಹಳ್ಳಿ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಹಂಪಿ ಶುಗರ್ಸ್‌ಗೆ 81.86 ಎಕರೆ ಭೂಮಿ ಮಂಜೂರು ಮಾಡಿಸಿದ್ದರು. ಈ ನಿವೇಶನವನ್ನು ಬಡಜನರ ವಸತಿ ಸೌಲಭ್ಯಕ್ಕೆ ಮೀಸಲಿಟ್ಟು, ನಾಗೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರಿ ಜಾಗ ಗುರುತಿಸಲಾಗಿದೆ. 

ಆದರೆ ಈ ವರೆಗೂ ಕಾರ್ಖಾನೆ ಸ್ಥಾಪನೆಗೆ ಯಾವುದೇ ಬೆಳವಣಿಗೆ ನಡೆದಿಲ್ಲ. ಈ ನಡುವೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಹಂಪಿ ಶುಗರ್ಸ್‌ಗೆ ಸರ್ಕಾರ ನೀಡಿರುವ ಭೂಮಿಯನ್ನು ಪಡೆಯಲು ಕಾನೂನು ಹೋರಾಟ ನಡೆಸುವೆ ಎಂದೂ ಎಚ್ಚರಿಸಿದ್ದಾರೆ. ಈ ಹಿಂದಿನ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಮುಚ್ಚಿದ ಬಳಿಕ ಈ ಭಾಗದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಕ್ಕೂ ಪೆಟ್ಟು ಬಿದ್ದಿದೆ.

 ಹಾಗಾಗಿ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಹಂಪಿ ಉತ್ಸವದ ವೇಳೆ ಭೂಮಿಪೂಜೆ ನೆರವೇರಲಿದೆಯೇ ಎಂಬ ಪ್ರಶ್ನೆ ಮತ್ತೆ ಉದ್ಭವವಾಗಿದೆ.ಬೆನಕಾಪುರ ಹಾಗೂ ಕಾಳಘಟ್ಟ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಶಾಸಕ ಎಚ್.ಆರ್. ಗವಿಯಪ್ಪ, ಸಚಿವರಾದ ಜಮೀರ್ ಅಹಮದ್ ಖಾನ್, ಶಿವಾನಂದ ಪಾಟೀಲ್ ಅವರು ಜಾಗ ಪರಿಶೀಲಿಸಿದ್ದಾರೆ. 

ಈ ಭಾಗದಲ್ಲಿ ಕಬ್ಬು ಬೆಳೆಯುವ ರೈತರು ಬೇರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದಾರೆ. ಹಾಗಾಗಿ ಹಂಪಿ ಉತ್ಸವದ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆ ಭೂಮಿಪೂಜೆ ನೆರವೇರಿಸಲಿ ಎಂದು ರೈತ ಸಂಘ ಹಾಗೂ ಹಸಿರುಸೇನೆ (ವಾಸುದೇವ ಮೇಟಿ ಬಣ)ದ ವಿಜಯನಗರ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಹೇಳಿದ್ದಾರೆ.