ಸಾರಾಂಶ
ಶಿರಸಿ: ಮಳೆಗಾಲ ಆರಂಭಗೊಳ್ಳುವ ಮೊದಲು ನಗರದ ವ್ಯಾಪ್ತಿಯ ೩೧ ವಾರ್ಡ್‌ಗಳಲ್ಲಿಯೂ ಮಳೆಗಾಲದ ತಯಾರಿಯನ್ನು ನಡೆಸಬೇಕಾಗಿದ್ದ ನಗರಸಭೆಯು ಬರಸಾತ್ ಕಾಮಗಾರಿಯನ್ನು ಆರಂಭಿಸಿಲ್ಲ. ಇದರಿಂದ ಕಳೆದ ೨ ದಿನದಿಂದ ಸುರಿದ ಮಳೆಗೆ ನಗರದ ಮುಖ್ಯ ಚರಂಡಿಗಳಲ್ಲಿ ನೀರು ತುಂಬಿ ರಸ್ತೆಯ ಮೇಲೆ ಹರಿದು ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ನಗರಸಭೆಯು ಬರಸಾತ್ ಕಾಮಗಾರಿ ಕೈಗೊಳ್ಳದೇ ಇರುವುದಕ್ಕೆ ನಗರವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.
ಪ್ರತಿ ವರ್ಷ ಮೇ ತಿಂಗಳಿನಲ್ಲಿ ನಗರದ ವ್ಯಾಪ್ತಿಯಲ್ಲಿನ ಎಲ್ಲ ವಾರ್ಡ್‌ಗಳಲ್ಲಿಯೂ ಬರಸಾತ್ ಕಾಮಗಾರಿಯ ಮೂಲಕ ರಸ್ತೆಯ ಇಕ್ಕೆಲ, ಗಟಾರ, ರಾಜಕಾಲುವೆಗಳನ್ನು ಸ್ವಚ್ಛಗೊಳಿಸಬೇಕಿತ್ತು. ಕೆಲವು ಕಡೆ ಮನಸ್ಸಿಗೆ ಬಂದಂತೆ ಸ್ವಚ್ಛಗೊಳಿಸಿರುವ ಕಾರಣ ತ್ಯಾಜ್ಯ ಹಾಗೆಯೇ ತುಂಬಿಕೊಂಡಿರುವುದರಿಂದ ಮತ್ತು ಗಟಾರಗಳೆಲ್ಲ ಕಸ ಕಡ್ಡಿಯಿಂದ ಕಟ್ಟಿ ಹೋಗಿರುವುದರಿಂದ ಮಳೆ ನೀರು ಗಟಾರದಲ್ಲಿ ಸರಾಗವಾಗಿ ಹರಿಯಲು ಸಾಧ್ಯವಾಗದೇ ರಸ್ತೆಯ ಮೇಲೆ ಹರಿಯುತ್ತಿದೆ.ಶನಿವಾರ ಬೆಳಗ್ಗೆಯಿಂದ ಸುರಿದ ಮಳೆಗೆ ದುಂಡಶಿನಗರ, ಪ್ರಗತಿನಗರ, ಲಯನ್ಸ್ ನಗರದ ತಗ್ಗು, ಮಾರಿಕಾಂಬಾ ನಗರ, ಬನವಾಸಿ ರಸ್ತೆ, ಅಶ್ವಿನಿ ಸರ್ಕಲ್, ಯಲ್ಲಾಪುರ ನಾಕಾ, ಮರಾಠಿಕೊಪ್ಪ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಗಟಾರ ತುಂಬಿ ರಸ್ತೆಯ ಮೇಲೆ ನೀರು ಹರಿದ ಪರಿಣಾಮ ಜನ ಹಾಗೂ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯುಂಟಾಗಿತ್ತು. ನಗರಸಭೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶಗೊಳ್ಳುವಂತಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೧೫೦ ಕಿಮೀ ಗಟಾರ ಬರುತ್ತಿದ್ದು, ಪ್ರತಿವರ್ಷ ಇದರ ಸ್ವಚ್ಛತೆ ಕಾರ್ಯ ಮಾಡಿ ಬರಸಾತ್ ಕಾಮಗಾರಿಯ ಹೆಸರಿನಲ್ಲಿ ಸುಮಾರು ₹೧೫ರಿಂದ ₹೨೦ ಲಕ್ಷ ನಗರಸಭೆ ಅನುದಾನದಿಂದ ಖರ್ಚು ತೋರಿಸಲಾಗುತ್ತಿದೆ. ಆದರೆ ಮೇ ತಿಂಗಳು ಮುಗಿದು ಜೂನ್ ತಿಂಗಳು ಆರಂಭವಾಗಿ ಮಳೆ ಸುರಿಯುತ್ತಿದ್ದರೂ ಕೆಲವು ಕಡೆ ಇದುವರೆಗೂ ಯಾವುದೇ ಬರಸಾತ್ ಕಾಮಗಾರಿ ಪ್ರಾರಂಭಗೊಳ್ಳದಿರುವುದರಿಂದ ಇನ್ಯಾವಾಗ ಕಾಮಗಾರಿ ಮಾಡುತ್ತಾರೆ ಎಂಬುದೇ ಸಾರ್ವಜನಿಕರಿಗೆ ತಿಳಿಯದಾಗಿದೆ.ರಾಜಕಾಲುವೆ ಅತಿಕ್ರಮಣವಾಗಿರುವುದರಿಂದ ನಗರದ ಕೆಲವು ವಾರ್ಡ್‌ಗಳಲ್ಲಿ ಮುಖ್ಯ ಗಟಾರದಿಂದ ರಾಜಕಾಲುವೆಗೆ ನೀರು ಸೇರುತ್ತಿಲ್ಲ. ಇದರಿಂದ ನೀರು ರಸ್ತೆಯ ಮೇಲೆ ನಿಂತು ತಗ್ಗು ಪ್ರದೇಶಗಳಿಗೆ ನುಗ್ಗಿ ಜಲಾವೃತ್ತವಾಗುತ್ತಿದೆ.
ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವ ಶಿರಸಿ ನಗರದಲ್ಲಿ ಮೊದಲು ರಾಜಕಾಲುವೆ ಒತ್ತುವರಿ ತೆರುವುಗೊಳಿದರೆ ಮಾತ್ರ ಸಮಸ್ಯೆಗೆ ಪರಿಹಾರ ದೊರಕಿಸಬಹುದು. ಇಲ್ಲವಾದಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಕೆಲವು ವಾರ್ಡ್‌ಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸುತ್ತಿರುತ್ತದೆ. ನಗರಸಭೆಯ ಸದಸ್ಯರು ಇದರ ಕುರಿತು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎನ್ನುತ್ತಾರೆ ನಗರದ ಪ್ರಜ್ಞಾವಂತ ನಾಗರಿಕರು.ಶೀಘ್ರ ವಿಲೇವಾರಿ ಮಾಡಿ: ನಗರಸಭೆಯಿಂದ ಸ್ವಚ್ಛಗೊಳಿಸಿದ ಮಣ್ಣನ್ನು ಗಟಾರದ ಪಕ್ಕದಲ್ಲಿಯೇ ಹಾಕಿಡುತ್ತಿದ್ದಾರೆ. ಮಳೆ ನೀರಿಗೆ ಪುನಃ ಚರಂಡಿ ಸೇರುತ್ತದೆ. ಸ್ವಚ್ಛಗೊಳಿಸಿದ ತ್ಯಾಜ್ಯ ಮತ್ತು ಮಣ್ಣನ್ನು ಕೂಡಲೇ ವಿಲೇವಾರಿ ಮಾಡಿದರೆ ಮಾತ್ರ ನೀರು ಸರಾಗವಾಗಿ ಹರಿಯಲು ಸಾಧ್ಯ. ಒಂದು ವಾರದ ನಂತರ ಸ್ವಚ್ಛಗೊಳಿಸುವ ತ್ಯಾಜ್ಯ ವಿವೇವಾರಿಗೆ ಬರುತ್ತಾರೆ. ಅಷ್ಟರೊಳಗಡೆ ಚರಂಡಿಯನ್ನು ಸೇರಿರುತ್ತದೆ. ಇದಕ್ಕೆ ಅವಕಾಶ ನೀಡದೇ, ಸ್ವಚ್ಛಗೊಳಿಸಿದ ತ್ಯಾಜ್ಯವನ್ನು ಕೂಡಲೇ ವಿಲೇವಾರಿ ಮಾಡುವಂತಾಗಬೇಕು ಎಂದು ನಗರದ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.ಕಸ ಎಸೆಯುವವರನ್ನು ಪತ್ತೆ ಹಚ್ಚಿ...ನಗರದ ಪ್ರದೇಶದ ಅಂಗಡಿ- ಮುಂಗಟ್ಟಿನ ನಿರುಪಯುಕ್ತ ತ್ಯಾಜ್ಯವಸ್ತುಗಳನ್ನು ನಗರದ ಅಂಚಿನ ರಸ್ತೆಯ ಪಕ್ಕದಲ್ಲಿ ರಾತ್ರಿ ವೇಳೆ ತಂದು ಸುರಿಯುತ್ತಿದ್ದಾರೆ. ಕೆಲವು ಕಡೆ ಮಾಂಸದ ವಸ್ತುಗಳನ್ನು ಎಸೆಯುತ್ತಿದ್ದಾರೆ. ಇದರಿಂದ ಸುತ್ತಮುತ್ತಲಿನ ಪ್ರದೇಶ ಮಲಿನಗೊಂಡು ಮೂಗು ಮುಚ್ಚಿಕೊಂಡು ತಿರುಗಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ಬಳಸಿದ ಬಟ್ಟೆ, ಪ್ಲಾಸ್ಟಿಕ್ ವಸ್ತುಗಳನ್ನು ನಗರದಂಚಿನ ಯಲ್ಲಾಪುರ ರಸ್ತೆ, ಸಿದ್ದಾಪುರ ರಸ್ತೆ, ಕುಮಟಾ ರಸ್ತೆ, ಹುಬ್ಬಳ್ಳಿ ರಸ್ತೆಯ ಇಕ್ಕೆಲಗಳ ಚರಂಡಿಯಲ್ಲಿ ಚೆಲ್ಲುತ್ತಿದ್ದಾರೆ. ಅವುಗಳೆಲ್ಲವೂ ಮಳೆ ನೀರಿಗೆ ಜಲಮೂಲಗಳನ್ನು ಸೇರುತ್ತಿದೆ. ನಗರದಂಚಿನ ಪ್ರದೇಶದಲ್ಲಿ ಕಸ ಎಸೆಯುವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲು ನಗರಸಭೆಯ ಅಧಿಕಾರಿಗಳು ಮುಂದಾಗಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಇಲ್ಲವಾದಲ್ಲಿ ನಗರದಂಚಿನ ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಪರಿಹರಿಸಲಿ: ನಗರಸಭೆಯ ಬೇಜವಾಬ್ದಾರಿಯಿಂದ ಬರಸಾತ್ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಕಂಡ ಕಂಡಲ್ಲಿ ಮಾತ್ರ ಚರಂಡಿ ಸ್ವಚ್ಛಗೊಳಿಸುತ್ತಾರೆ. ಸಂಪೂರ್ಣ ಗಟಾರ ಸ್ವಚ್ಛಗೊಳಿಸಿದರೆ ನೀರು ರಸ್ತೆಯ ಮೇಲೆ ಹರಿಯುವುದು ತಪ್ಪುತ್ತದೆ. ಇದರ ಕುರಿತು ಸ್ಥಳೀಯ ವಾರ್ಡ್ ಸದಸ್ಯರು ಹೆಚ್ಚಿನ ಗಮನ ವಹಿಸಬೇಕಾಗಿದೆ. ನಗರಸಭೆ ಸದಸ್ಯರು ಮತ್ತು ನಗರಸಭೆಯ ಸಿಬ್ಬಂದಿ ಒಂದು ವಾರ ನಗರದಲ್ಲಿ ಸಂಚಾರ ಮಾಡಿ, ಸಮಸ್ಯೆಯನ್ನು ಗುರುತಿಸಿ, ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ನಗರ ನಿವಾಸಿ ವೆಂಕಟೇಶ ಎಚ್. ತಿಳಿಸಿದರು.