ಸಾರಾಂಶ
ಆಮೆಗತಿಯಲ್ಲಿ ನಡೆಯುತ್ತಿರುವ `ಗಾಂಧಿ ಭವನ’ದ ಕೆಲಸ ಅವಲೋಕಿಸಿದರೆ ಅಧಿಕಾರಿಗಳ ಜಡತ್ವ, ಬೇಜವಾಬ್ದಾರಿ, ಬದ್ಧತೆ ಎದ್ದು ಕಾಣುತ್ತದೆ. ಎರಡು ವರ್ಷಗಳಿಂದ ಅಂತಿಮ ಹಂತಕ್ಕೆ ಬಂದರೂ ಪೂರ್ಣಗೊಳಿಸಿ ಉದ್ಘಾಟನೆ ಮಾಡುತ್ತಿಲ್ಲ.
ಧಾರವಾಡ:
ಬೆಳಗಾವಿಯಲ್ಲಿ 1924ರಲ್ಲಿ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ `ಬೆಳಗಾವಿ ಕಾಂಗ್ರೆಸ್ ಅಧಿವೇಶನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಡೀ ದೇಶದಲ್ಲಿ ಗಾಂಧಿ ಭಾರತ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಿತು. ಆದರೆ, ಧಾರವಾಡದಲ್ಲಿ ಗಾಂಧಿ ತತ್ವ, ಸಿದ್ಧಾಂತ, ಅವರ ಜೀವನ-ಸಾಧನೆ ಇತ್ಯಾದಿ ಚಟುವಟಿಕೆ ಹಮ್ಮಿಕೊಂಡು ಮುಂದಿನ ಪೀಳಿಗೆಗೆ ತಿಳಿಸಲು ಅನುಕೂಲವಾಗುವ ದಿಸೆಯಲ್ಲಿ ಸರ್ಕಾರಿ ಮಂಜೂರು ಮಾಡಿರುವ`ಗಾಂಧಿ ಭವನ’ ನಿರ್ಮಾಣ ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಜೆಡಿಯು ಜಿಲ್ಲಾಧ್ಯಕ್ಷ ಶ್ರಿಶೈಲ ಕಮತರ, ಈ ರೀತಿ ಕಾಲಮಿತಿ ಇಲ್ಲದೆ ಆಮೆಗತಿಯಲ್ಲಿ ನಡೆಯುತ್ತಿರುವ `ಗಾಂಧಿ ಭವನ’ದ ಕೆಲಸ ಅವಲೋಕಿಸಿದರೆ ಅಧಿಕಾರಿಗಳ ಜಡತ್ವ, ಬೇಜವಾಬ್ದಾರಿ, ಬದ್ಧತೆ ಎದ್ದು ಕಾಣುತ್ತದೆ. ಎರಡು ವರ್ಷಗಳಿಂದ ಅಂತಿಮ ಹಂತಕ್ಕೆ ಬಂದರೂ ಪೂರ್ಣಗೊಳಿಸಿ ಉದ್ಘಾಟನೆ ಮಾಡುತ್ತಿಲ್ಲ. ಇದು ಗಾಂಧಿ ತತ್ವ, ವಿಚಾರಗಳಿಗೆ ಮಾಡುವ ಅಪಮಾನವೂ ಹೌದು. ಕೇವಲ ಗಾಂಧಿ ತತ್ವ, ಸಿದ್ಧಾಂತ ಕುರಿತು ರಾಜ್ಯ ಸರ್ಕಾರ ಹತ್ತಾರು ಕೋಟಿ ವೆಚ್ಚ ಮಾಡಿ ಸಮಾವೇಶ ಮಾಡಿದರೆ ಸಾಲದು, ಅದು ಕೃತಿಯಲ್ಲಿಯೂ ಇರಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಜ. 30ರಂದು ಗಾಂಧೀಜಿ ಅವರ ಸ್ಮರಣೋತ್ಸವದಂದು ಈ `ಗಾಂಧಿ ಭವನ’ ಉದ್ಘಾಟನೆ ಮಾಡಬೇಕೆಂದು ಕಮತರ ಪತ್ರದಲ್ಲಿ ಆಗ್ರಹಿಸಿದ್ದಾರೆ. ಜತೆಗೆ ಇದೇ ನಿರ್ಲಕ್ಷ್ಯ ಮುಂದುವರಿದರೆ ಗಾಂಧಿವಾದಿಗಳು ಸಂಘ, ಸಂಸ್ಥೆಗಳು ಹಾಗೂ ನಾಗರಿಕರೊಂದಿಗೆ `ಗಾಂಧಿ ಭವನ’ ಉದ್ಘಾಟನೆಯಾಗುವ ವರೆಗೂ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.