ಸಾರಾಂಶ
ಪ್ರವೀಣ ಹೆಗಡೆ ಕರ್ಜಗಿ
ಶಿರಸಿ: ಅಡಕೆ ತೋಟದ ಭಾಗಾಯತಕ್ಕೆ ಬಿಟ್ಟಿದ್ದ ಸೊಪ್ಪಿನ ಬೆಟ್ಟ ಕಳೆದ ಕೆಲವು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ‘ಬ’ ಖರಾಬ್ ಪಟ್ಟಿಗೆ ಸೇರಿಕೊಂಡಿದ್ದು, ಇದರಿಂದ ರೈತರ ಕೃಷಿ ಕಾಯಕಕ್ಕೆ ಉಪಯೋಗಿಸಲು ಮೀಸಲಿಟ್ಟಿದ್ದ ಬೆಟ್ಟ ಕೈತಪ್ಪುವ ಆತಂಕ ಎದುರಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ನೀಡಿರುವ ಆಶ್ವಾಸನೆ ಈಡೇರುವುದು ಯಾವಾಗ ಎಂಬ ಪ್ರಶ್ನೆ ಮೂಡಿದೆ.ಜಿಲ್ಲೆಯಲ್ಲಿ ಸುಮಾರು ೫೦ ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರಮಾಣದಲ್ಲಿ ಸೊಪ್ಪಿನ ಬೆಟ್ಟ ಭೂಮಿ ಇದೆ. ಅದರಲ್ಲಿಯೂ ಅಡಕೆ ತೋಟವನ್ನೇ ನೆಚ್ಚಿಕೊಂಡಿರುವ ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೊಪ್ಪಿನ ಬೆಟ್ಟವಿದೆ. ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಮುಂಬೈ ಸರ್ಕಾರ ೬೬೧ರ ರೆಸಲ್ಯೂಶನ್‌ನಲ್ಲಿ ಸೊಪ್ಪಿನ ಬೆಟ್ಟ ಹಾಗೂ ಜಿಲ್ಲೆಯ ಕೃಷಿಯೊಂದಿಗೆ ಅವಿನಾಭಾವ ಸಂಬಂಧವಿದೆ. ಹೀಗಿರುವ ಸೊಪ್ಪಿನ ಬೆಟ್ಟ ಪಹಣಿಯಲ್ಲಿ ‘ಬ’ ಖರಾಬ್ ಸೇರಿಸಿದಷ್ಟೇ ವೇಗದಲ್ಲಿ ಹಿಂಪಡೆಯುವುದಕ್ಕೆ ತೊಂದರೆ ಏನು ಎಂಬ ಪ್ರಶ್ನೆ ರೈತರ ವಲಯದಿಂದ ಕೇಳಿ ಬಂದಿದೆ.ಶಿರಸಿ- ಸಿದ್ದಾಪುರ ಹಾಗೂ ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಾಸಕರು ಈ ಸಮಸ್ಯೆಯನ್ನು ಹತ್ತಿರದಿಂದ ಬಲ್ಲವರು. ಹಲವು ಬಾರಿ ರೈತರೆಲ್ಲರೂ ಸೇರಿ ಸಭೆ ನಡೆಸಿ, ಶಾಸಕರು ಹಾಗೂ ಸಚಿವರ ಬಳಿ ಮನವಿ ಸಲ್ಲಿಸಿ, ವಿಷಯ ಪ್ರಸ್ತಾಪಿಸಿದ್ದಾರೆ. ಅವರು ಇದು ಏಕೆ ಹೀಗಾಗಿದೆ ಎಂಬುದನ್ನು ಪರಿಶೀಲಿಸುತ್ತೇನೆ ಎಂದಿದ್ದಾರೆ. ಆದರೆ ಇದರ ಫಲಶ್ರುತಿ ಇನ್ನೂ ಬಹಿರಂಗವಾಗಿಲ್ಲ. ಹೀಗಾಗಿ ರೈತರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.
ಅಡಕೆ ತೋಟಗಳ ಕೃಷಿಗೆ ಆಗಿನ ಬ್ರಿಟಿಷ್ ಸರ್ಕಾರವು ಕೆನರಾ ಪ್ರಿವಿಲೇಜ್ ಆ್ಯಕ್ಟ್‌ನಲ್ಲಿ ಸೊಪ್ಪಿನ ಬೆಟ್ಟವನ್ನು ಬಳಕೆಗಾಗಿ ರೈತರಿಗೆ ಬಿಟ್ಟುಕೊಟ್ಟಿದೆ. ಅಡಕೆ ಕೃಷಿಗೆ ಅಗತ್ಯವಾದ ದರಕೆಲೆ, ಹುಲ್ಲು, ಮರಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಬೆಟ್ಟದಲ್ಲಿರುವ ಹಸಿ ಸೊಪ್ಪು ಸಂಗ್ರಹಿಸುವ ಸಲುವಾಗಿ ಪ್ರತಿ ಎಕರೆ ಅಡಕೆ ತೋಟಕ್ಕೆ ೯ ಎಕರೆಯಂತೆ ಸೊಪ್ಪಿನ ಬೆಟ್ಟ ಭೂಮಿಯನ್ನು ರೈತರಿಗೆ ಬ್ರಿಟಿಷರೇ ನೀಡಿದ್ದರು. ಸೊಪ್ಪಿನ ಬೆಟ್ಟದ ಪಹಣಿ ಪತ್ರಿಕೆಯಲ್ಲಿ ಸಹ ಅಡಕೆ ತೋಟಕ್ಕೆ ಲಾಗೂ ಎಂದು ದಾಖಲಿಸಲಾಗಿದೆ.ಮೊದಲು ಸೊಪ್ಪಿನ ಬೆಟ್ಟ ಪಹಣಿ ಪತ್ರಿಕೆಯ ‘ಅ’ ಕಾಲಂನಲ್ಲಿ ಖರಾಬ್ ಎಂದು ನಮೂದಿಸಲಾಗಿತ್ತು. ಸೊಪ್ಪಿನ ಬೆಟ್ಟಗಳು ಕೃಷಿ ಕಾರ್ಯಕ್ಕೆ ಯೋಗ್ಯವಲ್ಲ ಎಂಬ ಅರ್ಥ ಇದು ಸೂಚಿಸುತ್ತಿತ್ತು. ಆದರೆ ೨೦೧೬ರ ವೇಳೆ ಪಹಣಿ ಪತ್ರಿಕೆಯ ‘ಬ’ ಕಾಲಂನಲ್ಲಿ ಖರಾಬ್ ಎಂದು ನಮೂದಿಸಲಾಗಿದೆ. ‘ಬ’ ಖರಾಬ್ ಭೂಮಿ ಎಂದರೆ ಅದು ಸಾರ್ವಜನಿಕ ಆಸ್ತಿ ಎಂದು ಪರಿಗಣಿಸಲ್ಪಡುತ್ತದೆ. ಅಂದರೆ, ಸಾರ್ವಜನಿಕರಿಗೆ ಓಡಾಡಲು ರಸ್ತೆ, ದನಗಳು ಓಡಾಡುವ ದಾರಿ ಹಾಗೂ ಸಾರ್ವಜನಿಕರಿಗೆ ಸೇರಿದ ಸ್ವತ್ತು ಎಂಬ ಅರ್ಥ ಮೂಡಿಸುತ್ತದೆ. ಇದು ರೈತರನ್ನು ತೊಳಲಾಟಕ್ಕೆ ತಳ್ಳುವಂತೆ ಮಾಡಿದೆ.
‘ಬ’ ಖರಾಬ್ ತೆಗೆದು ಹಾಕಲು ಪ್ರಾಥಮಿಕವಾಗಿ ಬೆಟ್ಟ ಬಳಕೆದಾರರೆಲ್ಲರೂ ಸೇರಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಭಾಗದಲ್ಲಿ ಹೆಚ್ಚು ಸೊಪ್ಪಿನ ಬೆಟ್ಟ ಬಳಕೆದಾರರಿದ್ದಾರೆ. ಶಿರಸಿ ಶಾಸಕ ಭೀಮಣ್ಣ ನಾಯ್ಕ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಅವರನ್ನು ಭೇಟಿ ಮಾಡಿ, ಸರ್ಕಾರದ ಮೇಲೆ ಒತ್ತಡ ಹೇರಲು ವಿನಂತಿಸಲಾಗಿದೆ.ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ‘ಬ’ ಖರಾಬ್ ವಿಷಯವನ್ನು ಸರ್ಕಾರದ ಗಮನ ಸೆಳೆದಿದ್ದಾರಲ್ಲದೇ, ಕಂದಾಯ ಸಚಿವರನ್ನು ಭೇಟಿಯಾಗಿ ವಿಷಯ ಪ್ರಸ್ತಾಪಿಸಿದ್ದಾರೆ. ಕಂದಾಯ ಸಚಿವರು ಕಾರವಾರಕ್ಕೆ ಭೇಟಿ ನೀಡಿದಾಗಲೂ ‘ಬ’ ಖರಾಬ್ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಸಚಿವರಿಗೆ ಶಾಸಕ ಭೀಮಣ್ಣ ನಾಯ್ಕ ಮನವರಿಕೆ ಮಾಡಿದ್ದಾರೆ. ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿರುವುದರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಹಿರಿಯ ಸಹಕಾರಿ ಹಾಗೂ ಬೆಟ್ಟ ಬಳಕೆದಾರರ ಹೋರಾಟಗಾರ ಎಸ್.ಕೆ. ಭಾಗ್ವತ್ ತಿಳಿಸಿದರು.
ಬೆಟ್ಟ ‘ಬ’ ಖರಾಬ್ ಕೆಲ ದಾಖಲಾತಿಗಳು ಬ್ರಿಟಿಷರ ಕಾಲದ್ದಾಗಿರುವುದರಿಂದ ಕೆಲ ದಾಖಲೆಗಳನ್ನು ಮಾತ್ರ ಸಂಗ್ರಹಿಸಲಾಗಿದೆ. ಇನ್ನೂ ಹಲವು ದಾಖಲೆಗಳು ಪುಣೆಯಲ್ಲಿವೆ. ಅವುಗಳ ಸಂಗ್ರಹಣೆ ನಡೆಯುತ್ತಿದೆ. ಸದ್ಯದಲ್ಲಿಯೇ ನಿಯೋಗ ತೆರಳಿ, ಸರ್ಕಾರವನ್ನು ಆಗ್ರಹಿಸುವುದರ ಜತೆ ಸಮಸ್ಯೆಯ ಕುರಿತು ಮನವರಿಕೆ ಮಾಡಲಾಗುತ್ತದೆ ಎಂದು ಎಸ್.ಕೆ. ಭಾಗ್ವತ್, ಶಿರ್ಸಿಮಕ್ಕಿ ತಿಳಿಸಿದರು.