ಸಾರಾಂಶ
ಶರಣು ಸೊಲಗಿ ಮುಂಡರಗಿ
ತಾಲೂಕಿನ ಸಿಂಗಟಾಲೂರು ಸುಕ್ಷೇತ್ರದ ವೀರಭದ್ರೇಶ್ವರನ ಸನ್ನಿಧಿಯಲ್ಲಿ ಭಕ್ತರ ಅನುಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆ 2017-18ನೇ ಸಾಲಿನಲ್ಲಿ ತಲಾ ₹50 ಲಕ್ಷದಂತೆ ಎರಡು ಯಾತ್ರಿ ನಿವಾಸಗಳ ನಿರ್ಮಾಣ ಪ್ರಾರಂಭಿಸಿದ್ದು, ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ ಎನ್ನುವ ಪ್ರಶ್ನೆ ಕಾಡುತ್ತಿದೆ.ಸಿಂಗಟಾಲೂರು ಸುಕ್ಷೇತ್ರದಲ್ಲಿ ಜರುಗುವ ಜಾತ್ರಾ ಮಹೋತ್ಸವ, ಕಾರ್ತಿಕೋತ್ಸವ ಹಾಗೂ ಮಕರ ಸಂಕ್ರಾತಿ ಸಂದರ್ಭದಲ್ಲಿ ಸಾವಿರಾರು ಜನ ಸೇರುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಶರಣು ಗೋಗೇರಿ ಜಿಲ್ಲಾ ಪ್ರವಾಸೋಧ್ಯಮ ಇಲಾಖೆ ಅಧಿಕಾರಿಯಾಗಿದ್ದಾಗ ಈ ಯಾತ್ರಿ ನಿವಾಸಗಳನ್ನು ಮಂಜೂರು ಮಾಡಿಸಿದ್ದರು. ಈ ಕಾಮಗಾರಿಯನ್ನು ಕೆಆರ್‌ಡಿಎಲ್ ಗುತ್ತಿಗೆ ಪಡೆದಿದ್ದು, ಕಾಮಗಾರಿ ಮುಗಿಯುತ್ತಲೇ ಇಲ್ಲ.
ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಾದ ತಲಾ ₹50 ಲಕ್ಷಗಳ ಎರಡು ಯಾತ್ರಿ ನಿವಾಸದ ಕಟ್ಟಡಗಳಲ್ಲಿ ಒಂದು ಕಟ್ಟಡದ ಕಾಮಗಾರಿ ಪೇಂಟಿಂಗ್ ವರೆಗೆ ಬಂದು ನಿಂತಿದ್ದು, ಮತ್ತೊಂದು ಕಟ್ಟಡದ ಕಾಮಗಾರಿ ಪೇಂಟಿಂಗ್ ಆಗಿ ಉಳಿದ ಕಾಮಗಾರಿ ಬಾಕಿ ಉಳಿದಿವೆ. ಪ್ರವಾಸೋದ್ಯಮ ಇಲಾಖೆಯಿಂದ ಎರಡೂ ಕಟ್ಟಡಗಳ ತಲಾ ₹ 50 ಲಕ್ಷ ಗಳು ಬಿಡುಗಡೆಯಾಗಿದ್ದು, ಗುತ್ತಿಗೆ ಪಡೆದ ಕೆಆರ್‌ಡಿಎಲ್ ಮಾತ್ರ ಇನ್ನೂ ಕಾಮಗಾರಿ ಪೂರ್ಣಗೊಳಿಸಿಲ್ಲ.ಇಲ್ಲಿನ ದೇವಸ್ಥಾನ ಜೀರ್ಣೋದ್ಧಾರಗೊಂಡ ನಂತರ ಇದೀಗ ಗೋಟಗೋಡಿ ರಾಕ್ ಗಾರ್ಡನ್ ಮಾದರಿಯಲ್ಲಿ ವೀರಭದ್ರೇಶ್ವರ ಉದ್ಯಾನ ವನ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ನಿತ್ಯವೂ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಯಾತ್ರಿ ನಿವಾಸಗಳು ಪೂರ್ಣಗೊಂಡರೆ ಬರುವ ಪ್ರವಾಸಿಗರು ವಾಸ್ತವ್ಯ ಮಾಡಲು ಅನುಕೂಲವಾಗಲಿದೆ ಎನ್ನುವುದು ಪ್ರವಾಸಿಗರ ಅಭಿಪ್ರಾಯವಾಗಿದೆ.
ಕಳೆದ ವರ್ಷ ಜನವರಿಯಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಬಂದಾಗ ಈ ಕುರಿತು ಅವರ ಗಮನಕ್ಕೆ ತರಲಾಗಿತ್ತು. ಅವರು ಶೀಘ್ರದಲ್ಲಿಯೇ ಕಾಮಗಾರಿ ಮುಗಿಸುವಂತೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಸಂಬಂಧಪಟ್ಟ ಇಲಾಖೆಗೆ ತಿಳಿಸುವಂತೆ ಸೂಚಿಸಿದ್ದರು. ಆದರೆ ಗುತ್ತಿಗೆ ಪಡೆದ ಇಲಾಖೆ ಮಾತ್ರ ಇದುವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ.ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎನ್ನುವಂತೆ ಸಿಂಗಟಾಲೂರು ಸುಕ್ಷೇತ್ರದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ತಲಾ ₹50 ಲಕ್ಷಗಳ ಎರಡು ಯಾತ್ರಾ ನಿವಾಸ ಕಟ್ಟಡಗಳ ಕಾಮಗಾರಿ ಗುತ್ತಿಗೆ ಪಡೆದ ಕೆ.ಆರ್.ಡಿ.ಎಲ್.ನವರಿಂದ ಪೂರ್ಣಗೊಳ್ಳದೆ ಹಾಗೇ ನಿಂತಿದೆ ಎಂದು ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಹೇಳಿದರು.
ಸಿಂಗಟಾಲೂರು ಕ್ಷೇತ್ರದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ ಎರಡು ಯಾತ್ರಿ ನಿವಾಸಗಳಿಗೆ ಸಂಪೂರ್ಣವಾಗಿ ತಲಾ ₹50 ಲಕ್ಷದಂತೆ ₹ 1 ಕೋಟಿಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಸಾಕಷ್ಟು ವಿಳಂಬವಾಗಿರುವುದರಿಂದ ನಾವು ಕೆಆರ್ಡಿಎಲ್ ನವರಿಗೆ ತಿಳಿಸಿದರೂ ಸಹ ಅವರು ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿಕೆ.ವೈ. ವಿಭೂತಿ ಹೇಳಿದರು.