ಭಾಷೆಯನ್ನು ಪ್ರೀತಿಸಿದಾಗ ಅದರ ಯಾತನೆ, ಒಳಗುದಿ ತಿಳಿಯುತ್ತದೆ: ಚಿಂತಕ ತೋಳ್ಪಾಡಿ

| Published : Nov 23 2024, 12:34 AM IST

ಭಾಷೆಯನ್ನು ಪ್ರೀತಿಸಿದಾಗ ಅದರ ಯಾತನೆ, ಒಳಗುದಿ ತಿಳಿಯುತ್ತದೆ: ಚಿಂತಕ ತೋಳ್ಪಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ವಿದ್ಯಾಸಂಸ್ಥೆಗಳ ಸಂಯೋಜನೆಯಲ್ಲಿ ಕಟೀಲು ಪದವಿ ಪೂರ್ವ ಕಾಲೇಜಿನ ಶ್ರೀವಿದ್ಯಾ ಸಭಾಭವನದಲ್ಲಿ ನಡೆದ ನಾಲ್ಕನೇ ವರ್ಷದ ಭ್ರಮರ ಇಂಚರ ನುಡಿಹಬ್ಬದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ ಭಾಷೆಯು ತನ್ನ ಗುಟ್ಟನ್ನು ಅಥವಾ ರಹಸ್ಯವನ್ನು ಬಿಟ್ಟುಕೊಡುವುದಿಲ್ಲ. ಭಾಷೆಯನ್ನು ನಿಜವಾಗಿ ಪ್ರೀತಿಸಿದರೆ ಗೊತ್ತಾಗುವುದು ಅದರ ಯಾತನೆ ಎಂದು ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ವಿದ್ಯಾಸಂಸ್ಥೆಗಳ ಸಂಯೋಜನೆಯಲ್ಲಿ ಕಟೀಲು ಪದವಿ ಪೂರ್ವ ಕಾಲೇಜಿನ ಶ್ರೀವಿದ್ಯಾ ಸಭಾಭವನದಲ್ಲಿ ನಡೆದ ನಾಲ್ಕನೇ ವರ್ಷದ ಭ್ರಮರ ಇಂಚರ ನುಡಿಹಬ್ಬದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾತು, ಚಿಂತನೆ, ಬರವಣಿಗೆ ಹೀಗೆ ಭಾಷೆಯಲ್ಲಿ ಕೆಲಸ ಮಾಡುವವನಾಗಿ ಅನಿಸಿದ್ದು, ಭಾಷೆಯನ್ನು ನಿಜವಾಗಿ ಪ್ರೀತಿಸಿದರೆ, ಭಾಷೆಯ ನೋವು ಗೊತ್ತಾಗುತ್ತದೆ. ಯಾತನೆ, ಒಳಗುದಿ ಗೊತ್ತಾಗುತ್ತದೆ. ಕೇವಲ ವ್ಯಾವಹಾರಿಕವಾಗಿ, ತಮ್ಮ ಅನುಕೂಲಕ್ಕೆ ತಕ್ಕಂತೆ ಭಾಷೆಯನ್ನು ಬಳಸುತ್ತಾರೆಯೇ ಹೊರತು ರಹಸ್ಯ ತಿಳಿಯುವ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ. ಕಣ್ಣು ನೋಡುವಂತಹದ್ದು. ಕಣ್ಣಿನ ಕಣ್ಣು ಎಂದರೆ ನೀನಲ್ಲ ನಿನ್ನೊಳಗಡೆ ಇನ್ನೊಂದು ಇದೆ ಎನ್ನುವ ರಹಸ್ಯ ಗೊತ್ತಾಗುತ್ತದೆ. ಮನಸ್ಸಿನ ಮನಸ್ಸು. ಪ್ರಾಣದ ಪ್ರಾಣ ಹೀಗೆ ಭಾಷೆಗೆ ತಿಳಿಸುವ ತುಡಿತ ಇದೆ.

ಭಾಷೆ ತನ್ನ ರಹಸ್ಯವನ್ನು ಬಿಟ್ಟುಕೊಡುವುದು ಹೇಗೆ? ಪದವನ್ನು ಇನ್ನೊಮ್ಮೆ ಬಳಸಬೇಕು. ಮತ್ತೆ ಮತ್ತೆ ಹೇಳಿದ್ದನ್ನೇ ಹೇಳಿದಾಗ ಮನಸ್ಸು ಅದಕ್ಕೆ ಸ್ಪಂದಿಸಿದಾಗ ಜಡವಾಗುತ್ತದೆ. ಆದರೆ ಮತ್ತೆ ಮತ್ತೆ ಹೇಳಿದೆ ವಿಧಿಯಿಲ್ಲ. ಮೊತ್ತಮೊದಲು ಕೇಳಿದಾಗ ಹೇಗೆ ಎಚ್ಚರದಲ್ಲಿ ಕೇಳಿದೆಯೋ ಹಾಗೆ ಎರಡನೆಯ ಬಾರಿಗೆ ಕೇಳಿದಾಗ ಆ ರಹಸ್ಯ ಗೊತ್ತಾಗುತ್ತದೆ. ದೇವರನ್ನು ಎಷ್ಟು ತಿಳಿದರೂ ದೇವರು ನಿನಗೆ ತಿಳಿದಷ್ಟು ಅಲ್ಲ. ಹಾಗೆಯೇ ಭಾಷೆಯೂ ಎಂದು ತೋಳ್ಪಾಡಿ ಹೇಳಿದರು.

ಖ್ಯಾತ ಕಥೆಗಾರ ಬಾಗಲೋಡಿ ದೇವರಾಯರು, ಕೆ.ಪಿ. ರಾಯರು, ಕುವೆಂಪು, ಮಾಸ್ತಿ, ಡಿವಿಜಿ ಹೀಗೆ ಖ್ಯಾತ ಸಾಹಿತಿಗಳೆಲ್ಲರೂ ಓದಿದ್ದು ಕನ್ನಡಶಾಲೆಯಲ್ಲಿ. ನೋಬೆಲ್ ಪ್ರಶಸ್ತಿಗೆ ಯೋಗ್ಯವಾದ ಮಹತ್ವದ ಗ್ರಂಥಗಳನ್ನು ಬರೆದವರು. ಕಟೀಲು ಪರಿಸರದಲ್ಲಿ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರು, ಶಿಮಂತೂರು ನಾರಾಯಣ ಶೆಟ್ಟಿ, ಪು. ಶ್ರೀನಿವಾಸ ಭಟ್, ಅಜಾರು ನಾಗರಾಜರಾಯರು, ಉದಯಕುಮಾರ ಹಬ್ಬು ಶ್ರೀಧರ ಡಿ.ಎಸ್. ಹೀಗೆ ಅನೇಕ ಸಾಹಿತಿಗಳು ಕಟೀಲು ಪರಿಸರದಲ್ಲಿ ಸಾಹಿತ್ಯ ಕೆಲಸ ಮಾಡಿದವರು ಎಂದು ತೋಳ್ಪಾಡಿ ಹೇಳಿದರು.

ಬೆಳಗ್ಗೆ ಕಟೀಲು ಪದವಿ ಕಾಲೇಜಿನಿಂದ ನಡೆದ ಮೆರವಣಿಗೆಗೆ ಉದ್ಯಮಿ ಎಕ್ಕಾರು ಶ್ರೀಕೃಷ್ಣ ಡಿ. ಶೆಟ್ಟಿ ಚಾಲನೆ ನೀಡಿದರು. ಎಂ ಆರ್‌ ಪಿ ಎಲ್‌ ಅಧಿಕಾರಿ ಸ್ಟೀವನ್ ಪಿಂಟೋ ಧ್ವಜಾರೋಹಣ ನೆರವೇರಿಸಿದರು. ವಿಸ್ತರಿತ ಶ್ರೀವಿದ್ಯಾ ಸಭಾಭವನ, ಒಳಾಂಗಣ ಕ್ರೀಡಾಂಗಣವನ್ನು ಮಂಗಳೂರಿನ ಲಕ್ಷ್ಮೀ ಮೆಮೋರಿಯಲ್‌ ಎಜುಕೇಶನ್ ಟ್ರಸ್ಟ್‌ ಅಧ್ಯಕ್ಷ ಎ.ಜೆ. ಶೆಟ್ಟಿ ಮತ್ತು ವಸ್ತು ಪ್ರದರ್ಶನವನ್ನು ವಿಧಾನ ಪರಿಷತ್‌ ಸದಸ್ಯ ಎಸ್.ಎಲ್. ಭೋಜೇ ಗೌಡ ಉದ್ಘಾಟಿಸಿದರು. ಸಮ್ಮೇಳನವನ್ನು ಮಾಜಿ ಸಂಸದ ನಳಿನ್‌ ಕುಮಾರ್ ಕಟೀಲು ಉದ್ಘಾಟಿಸಿದರು. ಇಚರ, ಭ್ರಮರವಾಣಿ ಬಿಡುಗಡೆಯನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ನೆರವೇರಿಸಿದರು. ಶ್ರೀ ಕ್ಷೇತ್ರ ಕಟೀಲಿನ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ಆನುವಂಶಿಕ ಮೊಕ್ತೇಸರ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಶುಭಾಶಂಸನೆ ಮಾಡಿದರು. ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅನುವಂಶಿಕ ಅರ್ಚಕರಾದ ವೆಂಕಟರಮಣ ಆಸ್ರಣ್ಣ , ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಾಡೋಜ ಕೆ.ಪಿ.ರಾವ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಬಳಿಕ ನಡೆದ ‘ಸಾಹಿತ್ಯ- ಸಂಸ್ಕಾರ’ ಗೋಷ್ಠಿಯಲ್ಲಿ ಸುವರ್ಣ ನ್ಯೂಸ್‌ ಸಂಪಾದಕ ಅಜಿತ್ ಹನುಮಕ್ಕನವರ್ ವಿಚಾರ ಮಂಡಿಸಿದರು. ಮಧ್ಯಾಹ್ನ ಜರಗಿದ ನುಡಿ ತೋರಣದಲ್ಲಿ ಸಾಧನೆಗಳೆಡೆಗೆ ಸಾಗುವ ಬಗೆ ವಿಷಯ ಕುರಿತು ಖ್ಯಾತ ನಿರೂಪಕಿ

ಅನುಶ್ರೀ ಮಾತನಾಡಿದರು.