ಭಾರತೀಯತೆ ಇರುವೆಡೆ ಶಾಂತಿಯೂ ನೆಲೆಸಿದೆ: ಶಾಸಕ ಆರಗ

| Published : Aug 24 2024, 01:28 AM IST

ಸಾರಾಂಶ

ತೀರ್ಥಹಳ್ಳಿಯ ಸುವರ್ಣ ಸಹಕಾರ ಭವನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ 12ನೇ ವರ್ಷದ ವರಮಹಾಲಕ್ಷ್ಮಿ ವ್ರತಾಚರಣೆ, ಧಾರ್ಮಿಕ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಭಾರತೀಯತೆ ಸರ್ವರ ಹಿತವನ್ನು ಬಯಸುವ ಶಾಂತಿಯ ಸಂಕೇತವಾಗಿದ್ದು, ಭಾರತೀಯತೆ ಇರುವ ಕಡೆಗಳಲ್ಲಿ ಶಾಂತಿಯೂ ನೆಲೆಸಿದೆ. ನಮ್ಮ ಪಾರಂಪರಿಕ ಸಂಸ್ಕೃತಿಗೆ ಧಕ್ಕೆಯಾದಲ್ಲಿ ದೇಶ ಶಿಥಿಲಗೊಳ್ಳುವ ಅಪಾಯವೂ ಇದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ಶುಕ್ರವಾರ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ದ 12 ನೇ ವರ್ಷದ ವರಮಹಾಲಕ್ಷ್ಮಿ ವೃತಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ತಾಯಂದಿರ ಪಾತ್ರವೇ ನಿರ್ಣಾಯಕವಾಗಿದೆ. ಮಾತೃಶಕ್ತಿಯನ್ನು ಒಗ್ಗೂಡಿಸಿದ ಪರಿಣಾಮ ಪಕ್ಷಕ್ಕೆ ರಾಜಕೀಯ ಶಕ್ತಿಯೂ ಬಂದಿದೆ. ರಾಜಕೀಯವಾಗಿ ಈ ಕ್ಷೇತ್ರದಲ್ಲಿ ನನ್ನ ಯಶಸ್ಸಿಗೂ ಮಹಿಳಾ ಮತದಾರರ ಬೆಂಬಲ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವ ಮಟ್ಟದಲ್ಲಿ ಭಾರತ ತಾಯಿ ಸ್ಥಾನದಲ್ಲಿ ನಿಲ್ಲುವ ನಿಟ್ಟಿನಲ್ಲಿ ಹಗಲಿರುಳೂ ಶ್ರಮಿಸುತ್ತಿದ್ದಾರೆ. ಈ ಪ್ರಯತ್ನಕ್ಕೆ ಭಾರತೀಯರಾದ ನಾವುಗಳೂ ಕೈ ಜೊಡಿಸುವ ಅಗತ್ಯವಿದೆ. ಇಂದಿಲ್ಲಿ ನಡೆದಿರುವ ಧಾರ್ಮಿಕ ಕಾರ್ಯಕ್ರಮ ಸರ್ವರ ಹಿತವನ್ನೂ ಬಯಸಿದೆ ಎಂದರು.

ಬಿಜೆಪಿ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್ಸಿಗರು ಆತಂಕಗೊಂಡಿದ್ದಾರೆ. ಬಿಜೆಪಿ ಏನು ಮಾಡುತ್ತದೆ ಎಂಬ ಬಗ್ಗೆ ನಿಮಗೆ ಆತಂಕ ಬೇಡ. ನೀವು ಟಿಪ್ಪು ಜಯಂತಿ ಆಚರಣೆ ಮಾಡುವುದೇ ಸೂಕ್ತ. ಸಾಧ್ಯವಾದರೆ ನೀವು ಕೂಡಾ ಇಂತಹ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಿ ಎಂದು ಸವಾಲೆಸೆದರು.

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಗಾಯತ್ರಿದೇವಿ ಮಾತನಾಡಿ, ಸನಾತನ ಧರ್ಮ ಶ್ರೇಷ್ಠವಾಗಿದ್ದು ಸಂಸ್ಕೃತಿ ಉಳಿಸುವ ಮಾರ್ಗವಾಗಿ ಇಂತಹ ಕಾರ್ಯಕ್ರಮಗಳು ಅಗತ್ಯ. ಯುವ ಪೀಳಿಗೆಗೆ ನಕಾರಾತ್ಮಕ ವಿಚಾರಗಳಲ್ಲಿ ಮಾರಕವೂ ಆಗಿರುವ ಮೊಬೈಲ್ ಬಳಕೆಯಿಂದ ನಮ್ಮ ಮಕ್ಕಳು ತಪ್ಪು ದಾರಿ ತುಳಿಯದಂತೆ ತಾಯಂದಿರು ಹದ್ದಿನ ಕಣ್ಣಿನ ಮೂಲಕ ನಿಗಾ ವಹಿಸುವ ಅಗತ್ಯವಿದೆ ಎಂದು ಹೇಳಿದರು.

ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಮಾತನಾಡಿ, ಬಿಜೆಪಿ ಕೇವಲ ರಾಜಕೀಯ ಚಟುವಟಿಕೆಗೆ ಸೀಮಿತವಾದ ಪಕ್ಷವಲ್ಲಾ. ದೇಶದ ಸಂಸ್ಕೃತಿ ಮತ್ತು ಧಾರ್ಮಿಕ ಭಾವನೆಯೊಂದಿಗೆ ದೇಶವನ್ನು ಜೋಡಿಸುವ ಆಶಯವನ್ನು ಹೊಂದಿದೆ. ಧರ್ಮ ಮತ್ತು ಭಾರತೀಯ ಪರಂಪರೆಯನ್ನು ಆಡಳಿತ ವ್ಯವಸ್ಥೆಯಲ್ಲೂ ಇದು ಜಾರಿಯಾಗಬೇಕಿದೆ ಎಂದರು.

ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಯಶೋದಾ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದು, ಕ್ಯಾದಿಗೆರೆ ಲೋಹಿತಾಶ್ವ ದಿಕ್ಸೂಚಿ ಭಾಷಣ ಮಾಡಿದರು. ಭಾರತಿ ಸುರೇಶ್ ವಂದಿಸಿ ಜ್ಯೋತಿ ಮೋಹನ್ ನಿರೂಪಿಸಿದರು.

.