ಪ್ರಕರಣವೊಂದರ ಸಂಬಂಧ ಬಿ ರಿಪೋರ್ಟ್‌ ಸಲ್ಲಿಸಲು ₹2 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಚಿಕ್ಕಜಾಲ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಕರಣವೊಂದರ ಸಂಬಂಧ ಬಿ ರಿಪೋರ್ಟ್‌ ಸಲ್ಲಿಸಲು ₹2 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಚಿಕ್ಕಜಾಲ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಚಿಕ್ಕಜಾಲ ಪೊಲೀಸ್‌ ಠಾಣೆಯ ಪಿಎಸ್‌ಐ ಶಿವಣ್ಣ ಬಂಧಿತ ಆರೋಪಿ. ರವಿಕುಮಾರ್‌ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಟ್ರ್ಯಾಪ್‌ ಕಾರ್ಯಾಚರಣೆ ನಡೆಸಿ ಲಂಚದ ಹಣ ಸ್ವೀಕರಿಸುವಾಗ ರೆಡ್‌ ಹ್ಯಾಂಡ್‌ ಆಗಿ ಚಿಕ್ಕಜಾಲ ಪೊಲೀಸ್‌ ಠಾಣೆಯ ಪಿಎಸ್‌ಐ ಶಿವಣ್ಣ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ಚಿಕ್ಕಜಾಲ ನಿವಾಸಿಯಾದ ರವಿಕುಮಾರ್‌ ಎಂಬುವರ ವಿರುದ್ಧ ಚಿಕ್ಕಜಾಲ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಿ ರಿಪೋರ್ಟ್‌ ಸಲ್ಲಿಸಬೇಕಾದರೆ 3 ಲಕ್ಷ ರು. ನೀಡುವಂತೆ ಪಿಎಸ್‌ಐ ಶಿವಣ್ಣ ರವಿಕುಮಾರ್‌ ಅವರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಲಂಚ ನೀಡಲು ಇಷ್ಟವಿಲ್ಲದ ರವಿಕುಮಾರ್‌ ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಟ್ರ್ಯಾಪ್‌ ಕಾರ್ಯಾಚರಣೆ ನಡೆಸಿದ ಲೋಕಾಯಕ್ತ ಪೊಲೀಸರು, ಠಾಣೆಯ ಸಮೀಪ ಎರಡು ಲಕ್ಷ ರು. ಸ್ವೀಕರಿಸುವ ವೇಳೆ ಆರೋಪಿ ಶಿವಣ್ಣ ಅವರನ್ನು ಬಂಧಿಸಿದ್ದಾರೆ. ಶಿವಣ್ಣ ಹೇಳಿದಂತೆ ದೂರುದಾರರು ಎರಡು ಲಕ್ಷ ನಗದನ್ನು ಠಾಣೆ ಸಮೀಪದಲ್ಲಿದ್ದ ಶಿವಣ್ಣ ಅವರ ದ್ವಿಚಕ್ರ ವಾಹನಕ್ಕೆ ಸೋಮವಾರ ರಾತ್ರಿ 8.30 ರ ಸುಮಾರಿಗೆ ಇಟ್ಟು ಹೋಗಿದ್ದರು. ಹಣ ಇಟ್ಟು ಹೋಗುತ್ತಿದಂತೆ ಆ ಹಣ ಎತ್ತಿಕೊಳ್ಳಲು ಮುಂದಾದ ಸಂದರ್ಭದಲ್ಲಿ ಶಿವಣ್ಣ ಅವರನ್ನು ಸಾಕ್ಷಿ ಸಮೇತ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.