ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜಧಾನಿಯ ಬಹುತೇಕ ರಸ್ತೆಗಳ ಸ್ಥಿತಿ ಹದಗೆಟ್ಟು ಜನರು ಓಡಾಟ ನಡೆಸುವುದು ಕಷ್ಟವಾಗಿದೆ. ಈ ನಡುವೆ ಬಿಬಿಎಂಪಿಯು ನಗರದ ಹಲವು ರಸ್ತೆಗಳಲ್ಲಿ ಏಕಕಾಲಕ್ಕೆ ವೈಟ್‌ಟಾಪಿಂಗ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದಕ್ಕೆ ಮುಂದಾಗಿದೆ. ಇದರಿಂದ ವಾಹನ ಸವಾರರು ಮತ್ತು ಸ್ಥಳೀಯ ನಿವಾಸಿಗಳು ಅಕ್ಷರಶಃ ನಕರ ಅನುಭವಿಸುವಂತಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 1,800 ಕೋಟಿ ರು. ವೆಚ್ಚದಲ್ಲಿ 147.97 ಕಿ.ಮೀ. ಉದ್ದದ ರಸ್ತೆಗೆ ವೈಟ್‌ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಒಟ್ಟು 14 ಪ್ಯಾಕೇಜ್‌ಗಳನ್ನು ವಿಂಗಡಿಸಿ ಗುತ್ತಿಗೆಗೆ ನೀಡಲಾಗಿದೆ. ಈಗಾಗಲೇ ಟೌನ್‌ಹಾಲ್ ಬಳಿಯ ಜೆ.ಸಿ.ರಸ್ತೆ, ಎಸ್.ಪಿ ರಸ್ತೆ, ಗೋವಿಂದರಾಜ ನಗರ, ಚಿಕ್ಕಪೇಟೆ, ವಿಜಯನಗರ, ರಾಜರಾಜೇಶ್ವರಿ ನಗರ, ರಾಜಾಜಿನಗರ ಸೇರಿದಂತೆ ಮೊದಲಾದ ಕಡೆ ಏಕ ಕಾಲಕ್ಕೆ ಕಾಮಗಾರಿ ಆರಂಭಿಸಲಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು, ವರ್ತಕರು, ವಾಹನ ಸವಾರರು ತೀವ್ರವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾಮಗಾರಿಯೂ ವೇಗವಾಗಿ ನಡೆಸುತ್ತಿಲ್ಲ ಎಂಬ ಆರೋಪಗಳು ಎಲ್ಲೆಡೆ ಕೇಳಿ ಬರುತ್ತಿವೆ.ಅರ್ಧದಷ್ಟು ಮುಗಿಯದ ಜೆ.ಸಿ.ರಸ್ತೆ ಕಾಮಗಾರಿ:ಕಳೆದ ನವೆಂಬರ್ ತಿಂಗಳಿನಲ್ಲಿಯೇ ಜೆ.ಸಿ.ರಸ್ತೆ ವೈಟ್‌ಟಾಪಿಂಗ್ ಕಾಮಗಾರಿ ಆರಂಭಿಸಲಾಗಿತ್ತು. 3 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೂ ಶೇ.50 ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ದಕ್ಷಿಣ ಬೆಂಗಳೂರಿನ ಜನರು ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿವುದರಿಂದ ದಿನ ನಿತ್ಯ ವಾಹನ ಸವಾರರು ಪರದಾಡುತ್ತಿದ್ದಾರೆ. ಪರ್ಯಾಯ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಅಲ್ಲಿಯೂ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ.
ಎಸ್.ಬಿ.ರೋಡ್‌ನಲ್ಲಿ ದುರ್ನಾತ:ನಗರದ ಅತಿ ಹೆಚ್ಚು ವ್ಯಾಪಾರ ವಹಿವಾಟು ನಡೆಯುವ ಚಿಕ್ಕಪೇಟೆ ವ್ಯಾಪ್ತಿಯ ಎಸ್.ಬಿ.ರೋಡ್ ನಲ್ಲಿಯೂ ಕಾಮಗಾರಿ ನಡೆಸಲಾಗುತ್ತಿದ್ದು, ಇಡೀ ರಸ್ತೆ ಬಂದ್ ಮಾಡಲಾಗಿದೆ. ರಸ್ತೆಯನ್ನು ಸಂಪೂರ್ಣವಾಗಿ ಅಗೆದು ಹಾಕಲಾಗಿದೆ. ಈ ವೇಳೆ ಕೊಳಚೆ ನೀರಿನ ಪೈಪ್‌ಗಳು ಒಪನ್ ಆಗಿದೆ. ಜತೆಗೆ ಗುಂಡಿಗಳಲ್ಲಿ ಮಲ-ಮೂತ್ರದ ನೀರು ನಿಂತುಕೊಂಡು ಕೆಟ್ಟ ವಾಸನೆ ಬರುತ್ತಿದೆ. ಕಳೆದ ಎರಡು ತಿಂಗಳಿನಿಂದ ಜನರ ಕೆಟ್ಟ ವಾಸನೆ, ದೂಳಿನ ನಡುವೆ ಬದುಕಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಇಲ್ಲಿನ ಕಾಮಗಾರಿ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.ದೂಳುಮಯವಾದ ಎನ್‌ಆರ್ ಕಾಲೋನಿ:
ನರಸಿಂಹರಾಜ ಕಾಲೋನಿ ವೃತ್ತದಿಂದ ನೆಟ್ಟಕಲ್ಲಪ್ಪ ರಸ್ತೆ ವರೆಗೆ ವೈಟ್ ಟಾಪಿಂಗ್ ಕಾಮಗಾರಿ ಮಾಡಲಾಗುತ್ತಿದೆ. ಜಲಮಂಡಳಿಯಿಂದ ಒಳಚರಂಡಿ ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ರಸ್ತೆ ಬದಿಯಲ್ಲಿ ಅಗೆದು ಪೈಪ್ ಹಾಕಿ ಮುಚ್ಚಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ನೆಲ ಅಗೆದು ಹಾಗೆ ಬಿಡಲಾಗಿದೆ. ರಸ್ತೆಯ ಎರಡೂ ಕಡೆ ಒಟ್ಟೊಟ್ಟಿಗೆ ಕಾಮಗಾರಿ ನಡೆಸುತ್ತಿರುವುದರಿಂದ ವಾಹನ ಪಾರ್ಕಿಂಗ್‌ಗೂ ಸಮಸ್ಯೆಯಾಗಿದೆ. ಈ ರಸ್ತೆಯಲ್ಲಿ ಬಸ್ ಸಂಚಾರವೇ ಸ್ಥಗಿತಗೊಂಡಿದೆ. ಕಟ್ಟೆ ಭವನ ರಸ್ತೆಯಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಇಲ್ಲಿನ ರಸ್ತೆ ಹಾಳಾಗಿರಲಿಲ್ಲ. ಆದರೂ, ಅಭಿವೃದ್ಧಿ ಹೆಸರಲ್ಲಿ ಅಗೆದು ಹಾಕಿದ್ದಾರೆ. ಅಂಗಡಿ, ಹೋಟೆಲ್, ಬೇಕರಿಗಳಿಗೆ ಹೋಗುವಂತಿಲ್ಲ. ಎಲ್ಲ ಕಡೆ ದೂಳು ತುಂಬಿದೆ. ಜತೆಗೆ ವಾಹನಗಳನ್ನು ಪಾರ್ಕಿಂಗ್ ಮಾಡಲು ಸಾಧ್ಯವಾಗದ ಕಾರಣ, ಜನಸಂಚಾರವೇ ಕಡಿಮೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.ರಾಜಾಜಿನಗರದಲ್ಲಿ ಕಾಮಗಾರಿ ಕಂಟಕ:
ರಾಜಾಜಿನಗರ 1 ಬ್ಲಾಕ್‌ನ ಪಶ್ಚಿಮ ಕಾರ್ಡ್ ರಸ್ತೆಯಿಂದ ರಾಜಕುಮಾರ್ ರಸ್ತೆ ವರೆಗಿನ ರಸ್ತೆಯನ್ನು ವೈಟ್ ಟಾಪಿಂಗ್ ಕಾಮಗಾರಿ ಮಾಡಲಾಗುತ್ತಿದೆ. ಕಳೆದ ಆರೇಳು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯಿಂದ ಇಲ್ಲಿನ ಜನ ರೋಸಿ ಹೋಗಿದ್ದಾರೆ. ಕಾಮಗಾರಿ ನಡುವೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಒಂದು ವಾಹನ ರಸ್ತೆಯಲ್ಲಿ ಹೋದರೆ ಅದರ ಹಿಂದೆ ದೊಡ್ಡ ಭೂತದಂತೆ ದೂಳು ಹಿಂಬಾಲಿಸಲಿದೆ. ಕಾಮಗಾರಿ ನಡೆಸುವವರು ನೆಪ ಮಾತ್ರಕ್ಕೆ ದಿನಕ್ಕೆ ಒಂದೆರಡು ಸಲ ರಸ್ತೆ ನೀರು ಹಾಕುವ ಕೆಲಸ ಮಾಡುತ್ತಾರೆ. ಆದರೆ, ಅದರಿಂದ ಹೆಚ್ಚೇನು ಉಪಯೋಗವಾಗುತ್ತಿಲ್ಲ.ಸುತ್ತಮುತ್ತಲು ಕಾಮಗಾರಿಗಳ ಅಬ್ಬರ:
ಗೋವಿಂದ ರಾಜನಗರ ವಿಧಾನಸಭಾ ಕ್ಷೇತ್ರದ ವಿವಿಧ ರಸ್ತೆಗಳಲ್ಲಿ ಬಿಬಿಎಂಪಿಯಿಂದ ಒಂದೇ ಬಾರಿಗೆ ಕಾಮಗಾರಿ ಆರಂಭಿಸಲಾಗಿದೆ. ಜತೆಗೆ, ಈ ಭಾಗದಲ್ಲಿ ನಮ್ಮ ಮೆಟ್ರೋದಿಂದ ಅಲ್ಲಲ್ಲಿ ಗುಂಡಿ ತೆಗೆದು ಪರೀಕ್ಷೆ ಕಾರ್ಯ ನಡೆಸಲಾಗುತ್ತಿದೆ. ಈ ನಡುವೆ ಸಂಚಾರಿ ಪೊಲೀಸರು ಹೊಸ ಸಿಗ್ನಲ್ ಲೈಟ್ ಅಳವಡಿಕೆ ಮಾಡುವುದಕ್ಕೆ ಪಾದಚಾರಿ ಮಾರ್ಗ ಹಾಗೂ ರಸ್ತೆಯನ್ನು ಅಗೆದು ಹಾಕಿದ್ದಾರೆ.ರೇಸ್ ಕೋರ್ಸ್ ರಸ್ತೆ ಅದ್ವಾನ:
ಮೆಜೆಸ್ಟಿಕ್‌ನಿಂದ ರೇಸ್ ಕೋರ್ಸ್ ರಸ್ತೆ ಸಂಪರ್ಕ ಕಲ್ಪಿಸುವ ಎಸ್‌ಜೆಆರ್‌ಸಿ ಕಾಲೇಜು ಮುಂಭಾಗದ ರಸ್ತೆಯನ್ನು ಕಳೆದ ನಾಲ್ಕೈದು ತಿಂಗಳ ಹಿಂದೆ ಅಗೆದು ಹಾಕಲಾಗಿದೆ. ನಿತ್ಯ ನೂರಾರು ಪ್ರಯಾಣಿಕರು ಈ ರಸ್ತೆಯಿಂದ ಖಾಸಗಿ ಬಸ್ ಹತ್ತಿ ಆಂಧ್ರಪ್ರದೇಶ, ತೆಲಗಾಣ, ದೊಡ್ಡ ಬಳ್ಳಾಪುರ, ಚಿಕ್ಕಬಳ್ಳಾಪುರ ಸೇರಿದಂತೆ ಮೊದಲಾದ ಕಡೆ ಪ್ರಯಾಣ ಮಾಡುತ್ತಾರೆ. ಕಳೆದ ನಾಲ್ಕೈ ದು ತಿಂಗಳಿನಿಂದ ನೀರು ಮತ್ತು ಸ್ಯಾನಿಟರಿ ಕೊಳವೆ ಅಳವಡಿಕೆ ಕಾಮಗಾರಿಯೂ ಸಹ ಪೂರ್ಣಗೊಂಡಿಲ್ಲ. ಇದರಿಂದ ನಿತ್ಯ ದೂಳು ಮತ್ತು ಟ್ರಾಫಿಕ್ ಸಮಸ್ಯೆಯನ್ನು ಸಾರ್ವಜನಿಕರು ಎದುರಿಸಬೇಕಾಗಿದೆ. ಪಾದಚಾರಿಗಳು ಓಡಾಡುವುದಕ್ಕೂ ಪರದಾಟ ನಡೆಬೇಕಾದ ಸ್ಥಿತಿ ಇದೆ.ಶಿವನಗರದ ಮುಖ್ಯ ರಸ್ತೆಯಲ್ಲಿ ಜನರು ಶಿವ ಶಿವ:
ರಾಜಾಜಿನಗರದ ಶಿವನಗರ ಮುಖ್ಯ ರಸ್ತೆಯಲ್ಲಿ ಇದೀಗ ಒಂದು ತಿಂಗಳಿನಿಂದ ಕೊಳವೆ ಅಳವಡಿಕೆ ಮಾಡುವುದಕ್ಕೆ ರಸ್ತೆಯ ಎರಡೂ ಕಡೆ ಜೆಸಿಬಿ ಬಳಸಿ ಅಗೆದು ಹಾಕಲಾಗುತ್ತಿದೆ. ಅಗೆದ ರಸ್ತೆಯನ್ನು ವ್ಯವಸ್ಥಿತವಾಗಿ ಮುಚ್ಚುತ್ತಿಲ್ಲ. ಇದರಿಂದ ದೂಳಿನ ಸಮಸ್ಯೆ ಹೆಚ್ಚಾಗಿದೆ. ಜತೆಗೆ, ಗುಂಡಿಗಳಲ್ಲಿ ವಾಹನ ಸಂಚಾರ ನಡೆಸಬೇಕಾಗಿದೆ.ಕಾಮಗಾರಿ ಆರಂಭಿಸಿಲ್ಲ, ಆದರೂ ರಸ್ತೆ ಬಂದ್‌ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿಕ ಸರ್ವೀಸ್ ರಸ್ತೆಯನ್ನು ವೈಟ್ ಟಾಪಿಂಗ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿ ಆರಂಭಿಸಲಾಗಿದೆ. ಮಾಗಡಿ ರಸ್ತೆಯಿಂದ ಹೊಸಹಳ್ಳಿ ಮೆಟ್ರೋ ನಿಲ್ದಾಣ ಕಡೆ ಸಾಗುವ ಸರ್ವೀಸ್ ಮಾರ್ಗದಲ್ಲಿ ಈಗಾಗಲೇ ಕಾಮಗಾರಿ ಮಾಡಲಾಗಿದೆ. ಆದರೆ, ಇನ್ನೂ ವಾಹನ ಸಂಚಾರಕ್ಕೆ ಅವಕಾಶ ನೀಡಿಲ್ಲ. ಆದರೆ, ಹೊಸಹಳ್ಳಿ ಮೆಟ್ರೋ ನಿಲ್ದಾಣದ ಕಡೆಯಿಂದ ಮಾಗಡಿ ರಸ್ತೆ ಸಾಗುವ ಸರ್ವೀಸ್ ರಸ್ತೆಯಲ್ಲಿ ಕಾಮಗಾರಿ ಆರಂಭಿಸಲ್ಲ. ಆದರೆ, ರಸ್ತೆ ಬಂದ್ ಮಾಡಲಾಗಿದ್ದು, ವಾಹನ ವಾಹನ ಸವಾರರು ವಿರೇಶ್ ಚಿತ್ರಮಂದಿರ ಜಂಕ್ಷನ್‌ನಲ್ಲಿ ಮಾಗಡಿ ರಸ್ತೆ ಮೂಲಕ ಮೆಜೆಸ್ಟಿಕ್ ಕಡೆ ತೆರಬೇಕಾಗಿದೆ. ಇದರಿಂದ ಈ ಭಾಗದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುತ್ತಿದೆ.ಸುರಕ್ಷತಾ ಕ್ರಮಗಳಿಲ್ಲ:ಜೆ.ಸಿ. ರಸ್ತೆಯಲ್ಲಿ ಜಲಮಂಡಳಿಯಿಂದ ಕಾವೇರಿ ನೀರು ಪೂರೈಕೆಯ ಕೊಳವೆ, ಸ್ಯಾನಿಟರಿ ಕೊಳವೆ ಹಾಗೂ ಮಳೆ ನೀರು ಕೊಳವೆ ಅಳವಡಿಕೆ ಕಾಮಗಾರಿ ಮಾಡಲಾಗುತ್ತಿದೆ. ಅದಕ್ಕಾಗಿ ಗುಂಡಿ ಅಗೆಯಲಾಗಿದೆ. ಗುಂಡಿಯ ಸುತ್ತಮುತ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಡಕ್ ನಿರ್ಮಾಣಕ್ಕೆ ಕಬ್ಬಿಣದ ಸರಳುಗಳನ್ನು ಅಳವಡಿಕೆ ಮಾಡಲಾಗಿದೆ. ಸುತ್ತಲು ಅಪಾಯಕಾರಿ ಸೂಚನೆ ನೀಡುವ ಸಣ್ಣ ಪಟ್ಟಿ ಕಟ್ಟಿಲ್ಲ.
ಆರೋಗ್ಯ ಸಮಸ್ಯೆ:ಕಳೆದ ಐದಾರು ತಿಂಗಳಿನಿಂದ ದೂಳು ಕುಡಿದು ಕುಡಿದು ಆರೋಗ್ಯ ಸಮಸ್ಯೆ ಉಂಟಾಗಿದೆ, ಶೀತಾ, ಕೆಮ್ಮು ಸಮಸ್ಯೆ ಉಂಟಾಗಿದೆ. ಅದರಲ್ಲೂ ಮಕ್ಕಳು ಮತ್ತು ಹಿರಿಯ ನಾಗರಿಕರು ನಿರಂತರವಾಗಿ ತೊಂದರೆ ಅನುಭವಿಸುವಂತಾಗಿದೆ. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ಕೆಲಸ ಮಾಡಬೇಕಾದ ಅಧಿಕಾರಿಗಳು ಆ ಬಗ್ಗೆ ತಲೆ ಗಮನ ನೀಡುತ್ತಿಲ್ಲ. ಕಾಮಗಾರಿ ನಡೆಯುತ್ತಿರುವ ರಸ್ತೆಯುದ್ದಕ್ಕೂ ಹೋಟೆಲ್ ಸೇರಿದಂತೆ ಮೊದಲಾದ ವ್ಯಾಪಾರಿ ಮಳಿಗೆಗಳಿದ್ದು, ಕಳೆದ ಆರೇಳು ತಿಂಗಳಿನಿಂದ ವ್ಯಾಪಾರ ವಹಿವಾಟು ಇಲ್ಲದರೆ ಪರದಾಡುತ್ತಿದ್ದಾರೆ.