ಸಾರಾಂಶ
ರಾಜ್ಯದ ಗಮನ ಸೆಳೆದು ಭಾರೀ ಸದ್ದು ಮಾಡಿದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ- ಉಪಾಧ್ಯಕ್ಷ ಹುದ್ದೆಗಳ ಆಯ್ಕೆಗೆ ಮುಹೂರ್ತ ನಿಗದಿಯಾಗಿದೆ. ಅ.8 ರಂದು 2 ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದರೊಂದಿಗೆ ಪೂರ್ಣಪ್ರಮಾಣದಲ್ಲಿ ಆಡಳಿತ ಮಂಡಳಿ ರಚನೆಯಾಗಲಿದೆ.
ರವಿ ಕಾಂಬಳೆ
ಕನ್ನಡಪ್ರಭ ವಾರ್ತೆ ಹುಕ್ಕೇರಿರಾಜ್ಯದ ಗಮನ ಸೆಳೆದು ಭಾರೀ ಸದ್ದು ಮಾಡಿದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ- ಉಪಾಧ್ಯಕ್ಷ ಹುದ್ದೆಗಳ ಆಯ್ಕೆಗೆ ಮುಹೂರ್ತ ನಿಗದಿಯಾಗಿದೆ. ಅ.8 ರಂದು 2 ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದರೊಂದಿಗೆ ಪೂರ್ಣಪ್ರಮಾಣದಲ್ಲಿ ಆಡಳಿತ ಮಂಡಳಿ ರಚನೆಯಾಗಲಿದೆ.
ಈ ಸಂಸ್ಥೆಯು ಒಟ್ಟು 15 ಜನ ನಿರ್ದೇಶಕರ ಸಂಖ್ಯಾಬಲ ಹೊಂದಿದ್ದು, ಮೀಸಲಾತಿ ಇಲ್ಲದ ಕಾರಣ ಹೊಸದಾಗಿ ಚುನಾಯಿತರಾದ 15 ಜನ ನಿರ್ದೇಶಕರೂ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಆಕಾಂಕ್ಷಿಯಾಗಿದ್ದಾರೆ. ಆದರೆ, ಮಾಜಿ ಸಂಸದ ರಮೇಶ ಕತ್ತಿ ಮತ್ತು ಮಾಜಿ ಸಚಿವ ಎ.ಬಿ.ಪಾಟೀಲ ಕೈಗೊಳ್ಳುವ ನಿರ್ಣಯವೇ ಅಂತಿಮವಾಗಿದೆ.ಸಹಕಾರಿ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಈ ಸಂಘದ ಚುನಾವಣೆಯಲ್ಲಿ ಚಾರಿತ್ರಿಕ ದಿಗ್ವಿಜಯ ಸಾಧಿಸಿದ ಕತ್ತಿ-ಪಾಟೀಲ ನೇತೃತ್ವದ ಸ್ವಾಭಿಮಾನಿ ಪೆನಲ್‌ಗೆ ಏಕಪಕ್ಷೀಯವಾಗಿ ಫಲಿತಾಂಶ ಲಭಿಸಿದೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಯಾಗುತ್ತಿದ್ದಂತೆ ಕೆಲ ಆಕಾಂಕ್ಷಿಗಳು ಹುದ್ದೆಗೇರಲು ಕಸರತ್ತು ನಡೆಸಿದ್ದು ಕತ್ತಿ-ಪಾಟೀಲ ಮನವೊಲಿಕೆ ಯತ್ನದಲ್ಲಿದ್ದಾರೆ. ಅಧ್ಯಕ್ಷ ಹುದ್ದೆಗೆ ಹುಕ್ಕೇರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ನಿರ್ದೇಶಕನನ್ನು ಆಯ್ಕೆ ಮಾಡಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ನಿರ್ದೇಶಕರೊಬ್ಬರು ಆಯ್ಕೆಯಾಗುವ ಸಾಧ್ಯತೆಗಳಿವೆ.ಕಳೆದ ಬಾರಿ ಸಂಸ್ಥೆಯನ್ನು ಪ್ರತಿನಿಧಿಸಿ ಇದೀಗ ಮತ್ತೇ ಚುನಾಯಿತರಾದ ಪೃಥ್ವಿ ಕತ್ತಿ, ಹೊಸದಾಗಿ ಆಯ್ಕೆಯಾದ ವಿನಯ ಪಾಟೀಲ, ಮಹಾವೀರ ನಿಲಜಗಿ ಹೆಸರುಗಳು ಅಧ್ಯಕ್ಷ ಹುದ್ದೆಗೆ ಪ್ರಬಲವಾಗಿ ಕೇಳಿ ಬರುತ್ತಿದ್ದು ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ನೂತನ ನಿರ್ದೇಶಕರಾದ ಲಕ್ಷ್ಮಣ ಮುನ್ನೋಳಿ, ಬಸವಣ್ಣೆ ಲಂಕೆಪ್ಪಗೋಳ, ಮಂಗಲ ಮೂಡಲಗಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.ಈಗಾಗಲೇ ಕಳೆದ ಸಲ ನಿರ್ದೇಶಕರಾಗಿದ್ದ ಪೃಥ್ವಿ ಕತ್ತಿ ಮತ್ತೇ ಚುನಾಯಿತರಾಗಿದ್ದು ಸಂಸ್ಥೆಯ ಒಳ-ಹೊರ ನೋಟವನ್ನು ತೀಕ್ಷಣವಾಗಿ ಅರಿಯುವ ಚಾಕಚಕ್ಯತೆ ಹೊಂದಿದ್ದಾರೆ ಜೊತೆಗೆ ಆಡಳಿತ ನಡೆಸುವ ಸಾಕಷ್ಟು ಅನುಭವ ಕೂಡ ಅವರಲ್ಲಿರುವುದರಿಂದ ಅಧ್ಯಕ್ಷ ಹುದ್ದೆಗೆ ಪರಿಗಣಿಸಬಹುದು. ಇನ್ನು ವಿನಯ ಪಾಟೀಲ ಹೊಸದಾಗಿ ಆಯ್ಕೆಯಾಗಿದ್ದರೂ ಸಹ ಎ.ಬಿ.ಪಾಟೀಲ ಪುತ್ರ ಎನ್ನುವ ಕಾರಣ ಒಂದೆಡೆಯಾದರೆ, ಕಳೆದ ಎರಡು ದಶಕಗಳಿಂದ ಪಾಟೀಲ ಕುಟುಂಬಕ್ಕೆ ಯಾವುದೇ ಅಧಿಕಾರವಿಲ್ಲ ಎನ್ನುವ ವಿಚಾರ ಮತ್ತೊಂದೆಡೆಯಾಗಿದೆ. ಜೊತೆಗೆ ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಕೋನದಿಂದ ವಿನಯ ಪಾಟೀಲ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೂ ಅಚ್ಚರಿ ಎನಿಸದು.ಇನ್ನು ಸಹಕಾರಿ, ಶೈಕ್ಷಣಿಕ ಮತ್ತು ವಾಣಿಜ್ಯ ವಲಯದಲ್ಲಿ ಸಾಕಷ್ಟು ಹೆಸರು ಮಾಡಿರುವ ಜೈನ ಸಮಾಜದ ಪ್ರಬಲ ಮುಖಂಡ ಮಹಾವೀರ ನಿಲಜಗಿ ಹೆಸರು ಕೂಡ ಅಧ್ಯಕ್ಷ ಹುದ್ದೆಗೆ ಹರಿದಾಡುತ್ತಿದೆ. ಅನೇಕ ಮುಖಂಡರು ಕತ್ತಿ ಪಾಳಯದಿಂದ ಪಕ್ಷಾಂತರಗೊಂಡರೂ ನಿಲಜಗಿ ಅವರು ಈವರೆಗೂ ಪಕ್ಷ ಮತ್ತು ವ್ಯಕ್ತಿ ನಿಷ್ಠೆ ಬದಲಿಸಿಲ್ಲ. ಇದರೊಂದಿಗೆ ಕತ್ತಿ ಕುಟುಂಬದ ಸದಸ್ಯರಂತಿದ್ದಾರೆ. ಹಾಗೆಯೇ ಈ ಹಿಂದೆ ಮೂರು ಬಾರಿ ಹುಕ್ಕೇರಿ ಪುರಸಭೆ ಅಧ್ಯಕ್ಷ ಹುದ್ದೆಯ ಅವಕಾಶದಿಂದ ವಂಚಿತರಾದರೂ ಸಹ ಸ್ವಲ್ಪವೂ ಕೂಡ ಮುನಿಸಿಕೊಂಡಿಲ್ಲ. ಹಾಗಾಗಿ ಈ ಕಾರಣಕ್ಕಾದರೂ ನಿಲಜಗಿ ಅವರನ್ನು ಅಧ್ಯಕ್ಷ ಹುದ್ದೆಯಲ್ಲಿ ಪ್ರತಿಷ್ಠಾಪಿಸಬಹುದು.ಜಿಲ್ಲೆಯ ಎರಡು ಪ್ರಬಲ ಶಕ್ತಿಗಳೆನಿಸಿದ ಕತ್ತಿ ಮತ್ತು ಜಾರಕಿಹೊಳಿ ಕುಟುಂಬಗಳ ನಡುವಿನ ಜಿದ್ದಾಜಿದ್ದಿನ ಕಾಳಗಕ್ಕೆ ಸಾಕ್ಷಿಯಾಗಿದ್ದ ಈ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ, ಶಾಸಕ ನಿಖಿಲ್ ಕತ್ತಿ ನೇತೃತ್ವದ ಸ್ವಾಭಿಮಾನಿ ಪೆನಲ್ 15ಕ್ಕೆ 15 ಸ್ಥಾನಗಳನ್ನು ಕ್ಲೀನ್ ಸ್ವೀಪ್ ಮಾಡುವುದರೊಂದಿಗೆ ಪ್ರಚಂಡ ಜಯಭೇರಿ ಬಾರಿಸಿ ಸಂಸ್ಥೆಯಲ್ಲಿ ಮತ್ತೇ ಅಧಿಕಾರಕ್ಕೆ ಮರಳಿದೆ.