ಸಾರಾಂಶ
ಮಂಜುನಾಥ ಕೆ.ಎಂ.
ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆಯ 23ನೇ ಅವಧಿಗೆ ಮೇಯರ್, ಉಪಮೇಯರ್ ಚುನಾವಣೆ ಜೂ.21ರಂದು ಪಾಲಿಕೆ ಸಭಾಂಗಣದಲ್ಲಿ ಜರುಗಲಿದೆ. ಮಧ್ಯಾಹ್ನದ ವೇಳೆಗೆ ನೂತನ ಮೇಯರ್, ಉಪ ಮೇಯರ್ ಪಾಲಿಕೆ ಪಟ್ಟ ಅಲಂಕರಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಕಲಬುರಗಿಯ ಪ್ರಾದೇಶಿಕ ಆಯುಕ್ತರ ಸಮಕ್ಷಮದಲ್ಲಿ ಚುನಾವಣೆ ನಡೆಯಲಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಗಳು ತೆರೆಮರೆಯಲ್ಲಿ ಕೊನೆಯ ಹಂತದ ಕಸರತ್ತು ನಡೆಸಿದ್ದಾರೆ.ಪಾಲಿಕೆಯಲ್ಲಿ ಪೂರ್ಣ ಬಹುಮತ ಹೊಂದಿದ ಕಾಂಗ್ರೆಸ್‌ನಲ್ಲಿ ಮೇಯರ್ ಸ್ಥಾನದ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಧಿಕಾರ ಹಂಚಿಕೆ ಪಕ್ಷದ ಹಿರಿಯ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಮೇಯರ್ ಹುದ್ದೆಗಾಗಿ ಕಳೆದ ಹಲವು ತಿಂಗಳಿನಿಂದ ತೆರೆಮರೆಯ ಪ್ರಯತ್ನದಲ್ಲಿರುವ ಕೈ ಪಕ್ಷದ ಪಾಲಿಕೆ ಸದಸ್ಯರು, ಅಧಿಕಾರದ ಪಟ್ಟಕ್ಕಾಗಿ ಪ್ರಭಾವಿಗಳ ಬೆನ್ನುಬಿದ್ದಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಮೇಯರ್ ಆಯ್ಕೆಯ ಜವಾಬ್ದಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರಗೆ ನೀಡಲಾಗಿದೆ ಎನ್ನಲಾಗುತ್ತಿದೆ. ಶಾಸಕ ನಾಗೇಂದ್ರ ಈ ಬಾರಿ ಯಾರನ್ನು ಮೇಯರ್ ಸ್ಥಾನಕ್ಕೆ ಸೂಚಿಸುತ್ತಾರೋ ಎಂಬ ಕುತೂಹಲವಿದೆ.
ಮೇಯರ್ ಸ್ಥಾನದ ಆಕಾಂಕ್ಷಿಗಳು: ಕಾಂಗ್ರೆಸ್‌ನ ಹಿರಿಯ ಮುಖಂಡ, ಪಾಲಿಕೆ ಸದಸ್ಯ 23ನೇ ವಾರ್ಡ್‌ನ ಪಿ.ಗಾದೆಪ್ಪ, 18ನೇ ವಾರ್ಡ್‌ನ ಮುಲ್ಲಂಗಿ ನಂದೀಶ್, 3ನೇ ವಾರ್ಡ್‌ನ ಪ್ರಭಂಜನಕುಮಾರ್, 20ನೇ ವಾರ್ಡ್‌ನ ವಿವೇಕ್ ಮೇಯರ್ ಸ್ಥಾನದ ರೇಸ್‌ನಲ್ಲಿದ್ದಾರೆ. ಪಕ್ಷನಿಷ್ಠೆ, ಹಿರಿತನ, ಹಿಂದುಳಿದ ವರ್ಗಕ್ಕೆ ಸೇರಿದ ಪಿ.ಗಾದೆಪ್ಪ ಅವರನ್ನು ಮೇಯರ್ ಹುದ್ದೆಗೆ ಪರಿಗಣಿಸಬೇಕು ಎಂಬ ಒತ್ತಾಯ ಪಕ್ಷದೊಳಗೆ ಬಲವಾಗಿ ಕೇಳಿ ಬರುತ್ತಿದೆ.ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ಸಿಗದೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಪಡೆದಿದ್ದ ಕಾಂಗ್ರೆಸ್‌ನ ಪ್ರಭಂಜನಕುಮಾರ್ ಸೇರಿದಂತೆ ರೇಸ್‌ನಲ್ಲಿರುವ ನಾಲ್ವರು ಮೇಯರ್ ಸ್ಥಾನಕ್ಕೆ ತೆರೆಮರೆಯಲ್ಲಿ ಕಸರತ್ತು
ಮುಂದುವರಿಸಿದ್ದಾರೆ.ಬಳ್ಳಾರಿ ನಗರ, ಗ್ರಾಮೀಣ ವಿಧಾನಸಭಾ ಕ್ಷೇತ್ರ ಹಂಚಿಕೊಂಡಿರುವ ಮಹಾನಗರ ಪಾಲಿಕೆಯ 39 ಸದಸ್ಯ ಬಲದಲ್ಲಿ 21 ಕಾಂಗ್ರೆಸ್, 13 ಬಿಜೆಪಿ, ಐವರು ಪಕ್ಷೇತರರಿದ್ದಾರೆ. ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ 26 ಸ್ಥಾನ ಹೆಚ್ಚಿಸಿಕೊಂಡು ಕಾಂಗ್ರೆಸ್, ಪಾಲಿಕೆಯ ಅಧಿಕಾರ ಗದ್ದುಗೆ ಹಿಡಿದಿದೆ.
ಎರಡು ವರ್ಷಗಳ ಅವಧಿಯಲ್ಲಿ ಮೂವರು ಮೇಯರ್‌ಗಳು ಅಧಿಕಾರ ಮಾಡಿದ್ದಾರೆ. ಈಗ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಉಪ ಮೇಯರ್ ಬಿಸಿಎ ಮಹಿಳೆಗೆ ಮೀಸಲಾಗಿದೆ.ಖಾಸಗಿ ಹೊಟೇಲ್‌ನಲ್ಲಿ ಸಭೆ:
ಮೇಯರ್-ಉಪ ಮೇಯರ್ ಚುನಾವಣೆ ಹಿನ್ನೆಲೆ ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಕಾಂಗ್ರೆಸ್ ನಾಯಕರು ಗುರುವಾರ ಸಭೆ ನಡೆಸಿದರು. ಪಕ್ಷದ ವೀಕ್ಷಕರಾದ ಕೆಪಿಸಿಸಿ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ, ಸೂರಜ್ ಹೆಗಡೆ, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಶಾಸಕರಾದ ನಾಗೇಂದ್ರ, ಭರತ್ ರೆಡ್ಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಲಿಡ್ಕರ್ ನಿಗಮ ಅಧ್ಯಕ್ಷ ಮುಂಡ್ರಗಿ ನಾಗರಾಜ್ ಸೇರಿದಂತೆ ಪಕ್ಷದ ಮುಖಂಡರು ಚರ್ಚಿಸಿದರು. ಪಕ್ಷದ ವರಿಷ್ಠರ ಸೂಚನೆಯಂತೆ ಶುಕ್ರವಾರ ಮಧ್ಯಾಹ್ನ ಜರುಗುವ ಚುನಾವಣೆ ವೇಳೆ ಡಿಸಿಸಿ ಅಧ್ಯಕ್ಷರು ಮೇಯರ್, ಉಪಮೇಯರ್ ಹೆಸರು ಪ್ರಕಟಿಸಲಿದ್ದಾರೆ.ಪಕ್ಷ ನಿಷ್ಠೆ ಕೈ ಹಿಡಿವ ವಿಶ್ವಾಸ:
ಮೇಯರ್ ಸ್ಥಾನದ ಆಕಾಂಕ್ಷಿಗಳ ಪೈಕಿ ನಾನು ಹಿರಿಕ. ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಎಂದೂ ಪಕ್ಷಾಂತರ ಮಾಡಿಲ್ಲ. ಸಮಾಜಸೇವೆಯಲ್ಲೂ ನಿರತನಾಗಿರುವೆ. ಪಕ್ಷದ ಹಿರಿಯರು ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಪಾಲಿಕೆ ಸದಸ್ಯ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಗಾದೆಪ್ಪ.