ಮೋದಿ ಪಟ ಯಾರೇ ಬಳಸಿದರೂ ಆಶೀರ್ವಾದ ಬಿಜೆಪಿ ಅಭ್ಯರ್ಥಿಗೆ: ಬಿ.ವೈ.ರಾಘವೇಂದ್ರ

| Published : Apr 15 2024, 01:21 AM IST

ಮೋದಿ ಪಟ ಯಾರೇ ಬಳಸಿದರೂ ಆಶೀರ್ವಾದ ಬಿಜೆಪಿ ಅಭ್ಯರ್ಥಿಗೆ: ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ತಾಲೂಕಿನ ಕ್ಯಾಸನೂರು ಗ್ರಾಮದ ಗುರುಬಸವ ದೇವರ ಸಂಸ್ಥಾನ ಮಠದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗುರುಬಸವ ದೇವರ ಕ್ರಿಯಾ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಕನ್ನಡಪ್ರಭ ವಾರ್ತೆ ಸೊರಬ

ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಬಳಸಿಕೊಂಡು ಯಾರು ಬೇಕಾದರೂ ಚುನಾವಣೆ ಎದುರಿಸಬಹುದು. ಆದರೆ ಮೋದಿ ಅವರ ಆಶೀರ್ವಾದ ಬಿಜೆಪಿ ಅಧಿಕೃತ ಅಭ್ಯರ್ಥಿಗಳಿಗೆ ಮಾತ್ರ ಇರುತ್ತದೆ. ಇದರ ಅರಿವು ಪ್ರಧಾನಿ ಫೋಟೊ ಬಳಸುವ ಅಭ್ಯರ್ಥಿಗೆ ಇರಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.ತಾಲೂಕು ಕ್ಯಾಸನೂರು ಮಠದ ಶ್ರೀ ಷಟ್ಕಾವ್ಯದ ಕರ್ತೃ ಖೇಚರಿಯೋಗಿ ಗುರುಬಸವ ದೇವರ ಸಂಸ್ಥಾನ ಮಠದಲ್ಲಿ ಶನಿವಾರ ಸಂಜೆ ಜರುಗಿದ ಶ್ರೀಶೈಲ ಮಹಾ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿ ಶ್ರೀಗಳ ಆಶೀರ್ವಾದ ಪಡೆದು ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.ಹಿಂದುತ್ವದ ಪರಿಭಾವನೆ ಎಂದರೆ ಅದು ನರೇಂದ್ರ ಮೋದಿ ಮತ್ತು ಬಿಜೆಪಿ. ಇದರ ಹೊರತಾಗಿ ಮತ್ತೊಬ್ಬರು ಹಿಂದುತ್ವದ ಹೆಸರು ಹೇಳಿ ಚುನಾವಣೆ ಪ್ರಚಾರ ನಡೆಸುವುದನ್ನು ಯಾರೂ ಒಪ್ಪುವುದಿಲ್ಲ. ಹಿಂದುತ್ವದ ಮತ್ತು ಬಿಜೆಪಿಯ ಯಾವುದೇ ಒಂದು ಮತ ಕೂಡಾ ಆಚೆ ಹೋಗುವುದಿಲ್ಲ. ವಿಶ್ವ ಮೆಚ್ಚಿದ ಮೋದಿ ಅವರ ಅಭಿವೃದ್ಧಿ ಕಾರ್ಯಗಳು ಮತ್ತು ದೇಶ ರಕ್ಷಣೆಗಾಗಿ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಎಂದು ದೇಶದ ಜನತೆಯ ಹೃದಯ ಮಿಡಿಯುತ್ತಿದೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರಿಗೆ ಟಾಂಗ್ ಕೊಟ್ಟರು.ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಮತ್ತು ಹಿಂದುತ್ವ ಮತಗಳು ತಮಗೆ ಚಲಾವಣೆಯಾಗುತ್ತವೆ ಎನ್ನುವ ಭ್ರಮೆಯಲ್ಲಿದ್ದಾರೆ. ಆದರೆ ಎಂದೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸದವರಿಗೆ ಚುನಾವಣಾ ಕಾಲಕ್ಕೆ ಒಬಿಸಿ ಮತದಾರರು ನೆನಪಾಗಿದ್ದಾರೆ. ಆದರೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಿಂದುಳಿದ ವರ್ಗಕ್ಕೆ ಹೆಚ್ಚಿನ ಮಹತ್ವ ನೀಡಿ ವಿವಿಧ ಯೋಜನೆಗಳನ್ನು ರೂಪಿಸಿದ್ದಾರೆ. ಇತ್ತೀಚೆಗೆ ಸಾಗರದಲ್ಲಿ ನಡೆದ ಸಮಾವೇಶದಲ್ಲಿ ಸುಮಾರು ೨೫ ರಿಂದ ೩೦ ಒಬಿಸಿ ಮತದಾರರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ರೀತಿ ಪ್ರತೀ ತಾಲೂಕಿನಲ್ಲಿಯೂ ನಡೆಯುತ್ತಿದೆ. ಈ ಕಾರಣದಿಂದ ತಾವು ಕನಿಷ್ಠ ೧ ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ದೇಶದ ಗಡಿ ಭಾಗಗಳಲ್ಲಿ ನಡೆಯುತ್ತಿದ್ದ ಭಯೋತ್ಪಾದನಾ ಚಟುವಟಿಕೆಗಳಿಗೆ ಮಲೆನಾಡು ಭಾಗದಲ್ಲಿ ಆಗಾಗ್ಗೆ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಘಟನೆ ಸಂಭವಿಸಿದ ನಂತರ ತನಿಖೆ ನಡೆಸುವುದಕ್ಕಿಂತ ಆತಂಕಕಾರಿ ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗುವಂತ ಸಂಘಟನೆಗಳಿಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಆಡಳಿತ ನಡೆಸುವುದರಿಂದ ದೇಶದ ಭದ್ರತೆ ಹೆಚ್ಚುತ್ತದೆ. ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದ ಆಂತರಿಕ ಭದ್ರತೆಯಲ್ಲಿ ಗಣನೀಯ ಸುಧಾರಣೆ ಕಂಡಿದ್ದು, ಉಗ್ರರ ದಾಳಿಯಂತಹ ದುಷ್ಕೃತ್ಯಗಳನ್ನು ತಡೆಯುವ ಹಾಗೂ ಶೀಘ್ರ ತನಿಖೆ ನಡೆಸುವ ವ್ಯವಸ್ಥೆ ಜಾರಿಗೆ ತಂದಿದ್ದಾರೆ ಎಂದರು.ಈ ಸಂದರ್ಭದಲ್ಲಿ ಸೊರಬ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ, ಮುಖಂಡರಾದ ಜಾನಕಪ್ಪ, ಶಿವಕುಮಾರ ಕಡಸೂರು, ದೇವೇಂದ್ರಪ್ಪ ಚನ್ನಾಪುರ ಮೊದಲಾದವರಿದ್ದರು.