ಹಿಂದೂಗಳ ಏಳಿಗೆಯ ಜಾತಿಗಣತಿಗೆ ಬಿಜೆಪಿ ವಿರೋಧ ಏಕೆ: ಕಾಂಗ್ರೆಸ್‌ ಸಂಸದ ಸಸಿಕಾಂತ್‌ ಸೆಂಥಿಲ್‌

| Published : Sep 04 2024, 02:02 AM IST / Updated: Sep 04 2024, 11:57 AM IST

ಹಿಂದೂಗಳ ಏಳಿಗೆಯ ಜಾತಿಗಣತಿಗೆ ಬಿಜೆಪಿ ವಿರೋಧ ಏಕೆ: ಕಾಂಗ್ರೆಸ್‌ ಸಂಸದ ಸಸಿಕಾಂತ್‌ ಸೆಂಥಿಲ್‌
Share this Article
  • FB
  • TW
  • Linkdin
  • Email

ಸಾರಾಂಶ

  ಜನರನ್ನು ಜನರ ಮೇಲೆ ಎತ್ತಿಕಟ್ಟುವ ಬಿಜೆಪಿಯ ದ್ವೇಷದ ಮನಸ್ಥಿತಿ ಸಹಿಸಲಾಗದೆ ರಾಜೀನಾಮೆ ನೀಡಿದೆ ಎಂದರು.

 ಮಂಗಳೂರು :  ಹಿಂದೂ ಸಮಾಜಕ್ಕೆ ಒಳಿತಾಗುವ ಜಾತಿ ಗಣತಿಯನ್ನು ಬಿಜೆಪಿಯವರು ಏಕೆ ವಿರೋಧಿಸುತ್ತಿದ್ದಾರೆ ಎಂದು ತಮಿಳುನಾಡು ತಿರುವಳ್ಳೂರು ಕ್ಷೇತ್ರದ ಕಾಂಗ್ರೆಸ್‌ ಸಂಸದ, ದ.ಕ. ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಪ್ರಶ್ನಿಸಿದ್ದಾರೆ.

ನಗರದಲ್ಲಿ ಮಂಗಳವಾರ ಕಾಂಗ್ರೆಸ್‌ ಕಾರ್ಯಕರ್ತರ ಜತೆ ಸಭೆ- ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ ಗಣತಿಯಿಂದ ಒಳಿತಾಗೋದು ಮುಸ್ಲಿಮರು, ಕ್ರಿಶ್ಚಿಯನ್ನರಿಗೆ ಅಲ್ಲ, ಬದಲಾಗಿ ಹಿಂದೂಗಳಿಗೆ ಮಾತ್ರ. ಹಿಂದೂಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಹಿಂದುಳಿದ ವರ್ಗ, ದಲಿತರಿಗೆ ಇದರಿಂದ ಅತೀ ಹೆಚ್ಚು ಉಪಯೋಗವಿದೆ. ಈ ವರ್ಗಗಳ ಏಳಿಗೆ ಆಗೋದು ಬಿಜೆಪಿಯವರಿಗೆ ಬೇಡ. ಹಾಗಾಗಿಯೇ ಜಾತಿ ಗಣತಿ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಯವರು ಸೃಷ್ಟಿ ಮಾಡಿರುವ ಹಿಂದೂ ವರ್ಸಸ್‌ ಮುಸ್ಲಿಂ ಎನ್ನುವುದು ಫೇಕ್‌ ಅಜೆಂಡಾ. ಅವರು ಮುಸ್ಲಿಮರನ್ನು ವಿರೋಧಿಸೋದು ಕೇವಲ ಓಟಿಗಾಗಿ ಮಾತ್ರ. ನಿಜವಾಗಿಯೂ ಅವರು ಹಿಂದೂ ಸಮಾಜದಲ್ಲಿರುವ ಸಮಾನತೆಯ ವಿರೋಧಿಗಳು. ಇದೀಗ ಮೀಸಲಾತಿಯನ್ನು ತೆಗೆಯಲು ಹೊರಟಿದ್ದಾರೆ. ಹಿಂದೂ ಸಮಾಜವನ್ನು ಮುಗಿಸಲೆಂದೇ ಬಂದವರು ಅವರು ಎಂದು ಸಸಿಕಾಂತ್‌ ಸೆಂಥಿಲ್‌ ಹೇಳಿದರು.

ಅಯೋಧ್ಯೆ ಶ್ರೀರಾಮ ಮಂದಿರ ವಿಚಾರ ಮುಂದಿಟ್ಟುಕೊಂಡು ಓಟು ಪಡೆಯುತ್ತೇವೆ ಎಂದು ಬಿಜೆಪಿಯವರು ಅಂದುಕೊಂಡಿದ್ದರು. ಆದರೆ ಅಯೋಧ್ಯೆಯ ಜನರೇ ಅವರಿಗೆ ಓಟು ಹಾಕಿಲ್ಲ. ಅಯೋಧ್ಯೆಯಲ್ಲಿ ಸೋತ ನಂತರ ಬಿಜೆಪಿಗರು ಸಂಸತ್‌ನಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗೋಗು ನಿಲ್ಲಿಸಿದ್ದಾರೆ. ಅದಕ್ಕಾಗಿಯೇ ಅಯೋಧ್ಯೆ ಸಂಸದ ಅವದೇಶ್‌ ಪ್ರಸಾದ್‌ ಅವರನ್ನು ಸಂಸತ್ತಿನಲ್ಲಿ ರಾಹುಲ್‌ ಗಾಂಧಿ ಪಕ್ಕದಲ್ಲೇ ಕೂರಿಸಿದ್ದೇವೆ. ದಕ್ಷಿಣ ಕನ್ನಡದಲ್ಲೂ ಕೂಡ ಇದೇ ರೀತಿ ಹಿಂದೂ- ಮುಸ್ಲಿಂ ನಾಟಕ ಸೃಷ್ಟಿ ಮಾಡಿದ್ದಾರೆ. ಶೇ.20 ಜನರ ವಿರುದ್ಧ ಶೇ.80 ಜನರನ್ನು ಎತ್ತಿಕಟ್ಟಿದ್ದಾರೆ. ಅದೇ ಅವರ ಫುಟ್ಬಾಲ್‌ ಗೇಮ್‌. ಆದರೆ ಕಾಂಗ್ರೆಸಿಗರು ಅವರಂತೆ ಜನರಲ್ಲಿ ದ್ವೇಷ, ಭಯ ಹುಟ್ಟಿಸುವ ಫುಟ್ಬಾಲ್‌ ಆಡೋದು ಬೇಡ. ನಾವು ಜನರ ಕಷ್ಟಗಳಿಗೆ ಸ್ಪಂದಿಸುವ ಕ್ರಿಕೆಟ್‌ ಆಟವನ್ನೇ ಮುಂದುವರೆಸಬೇಕು. ಅದಕ್ಕಾಗಿ ಹಳ್ಳಿಗಳಿಂದ ಜನರ ಜತೆ ಬೆರೆಯಲು ಮರಳಿ ಆರಂಭಿಸಬೇಕು. ಅದೇ ಕಾಂಗ್ರೆಸ್‌ನ್ನು ಕೈ ಹಿಡಿದು ನಡೆಸಲಿದೆ, ಜನರಿಗೆ ಸಹಾಯ ಮಾಡುವ ಮೂಲಕ ಜನರ ನಂಬಿಕೆ ಗಳಿಸಬೇಕು ಎಂದು ಹೇಳಿದರು.

ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್‌, ಶಾಸಕ ಅಶೋಕ್‌ ಕುಮಾರ್‌ ರೈ, ಮಾಜಿ ಶಾಸಕರಾದ ಜೆ.ಆರ್‌. ಲೋಬೊ, ಶಕುಂತಳಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್‌ ಆರ್‌., ರಕ್ಷಿತ್‌ ಶಿವರಾಂ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಮಮತಾ ಗಟ್ಟಿ, ಸುರೇಶ್‌ ಬಲ್ಲಾಳ್‌, ಕಣಚೂರು ಮೋನು, ಪ್ರಕಾಶ್‌ ಸಾಲ್ಯಾನ್‌, ವಿಶ್ವಾಸ್‌ದಾಸ್‌, ಅಬ್ದುಲ್‌ ಸಲೀಂ, ಎಂ.ಜಿ. ಹೆಗಡೆ ಮತ್ತಿತರರಿದ್ದರು.ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದೇಕೆ?

ದ.ಕ. ಜಿಲ್ಲಾಧಿಕಾರಿ ಹುದ್ದೆಗೆ ಏಕೆ ರಾಜೀನಾಮೆ ನೀಡಿದೆ ಎಂದು ಎಲ್ಲೂ ಹೇಳಿಲ್ಲ. ಈಗ ಹೇಳುವ ಕಾಲ ಪಕ್ವವಾಗಿದೆ ಎಂದ ಸಸಿಕಾಂತ್ ಸೆಂಥಿಲ್‌, ಗೋಧ್ರಾ ಹತ್ಯಾಕಾಂಡ ಬಳಿಕ ದೇಶದ ರಾಜಕೀಯ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೆ. ಜನರನ್ನು ಜನರ ಮೇಲೆ ಎತ್ತಿಕಟ್ಟುವ ಬಿಜೆಪಿಯ ದ್ವೇಷದ ಮನಸ್ಥಿತಿ ಸಹಿಸಲಾಗದೆ ರಾಜೀನಾಮೆ ನೀಡಿದೆ. ಕಾಶ್ಮೀರದ ಮೇಲಿನ ಆರ್ಟಿಕಲ್‌ 370 ರದ್ದು ಮಾಡಿ ಇಡೀ ಸೈನ್ಯವನ್ನು ಕಾಶ್ಮೀರಕ್ಕೆ ಕೊಂಡೊಯ್ದು ಜನರನ್ನು ಒಂದು ತಿಂಗಳು ಹೊರಬರದಂತೆ ಮಾಡಿದರು. ಪತ್ನಿಗೆ ರಾಜೀನಾಮೆ ಕೊಡುತ್ತೇನೆ ಎಂದೆ, ಅದಾಗಿ ಮೂರನೇ ದಿನ ರಾಜೀನಾಮೆ ಸಲ್ಲಿಸಿದೆ. ಬಿಜೆಪಿಯವರ ರಾಜಕೀಯ ವಿರೋಧಿಸಲು ಸ್ವತಃ ರಾಜಕೀಯ ಸೇರಿದೆ. ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಿದೆ. ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆ ಪಕ್ಷವನ್ನು ಬಲಪಡಿಸಿತು. ಜನರಿಗೆ ವಾಸ್ತವತೆಯ ಅರಿವಾಯಿತು. ಇದರ ಪರಿಣಾಮವೇ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಕ್ಕೆ ಕುಸಿಯಲು ಕಾರಣವಾಯಿತು ಎಂದು ಹೇಳಿದರು.