ಆ ಸಭೆಯಲ್ಲಿ ಸಚಿವ ಬಸವಂತಪ್ಪ ಹಾಜರಿದ್ದರು ಎನ್ನಲು ನನ್ನ ಬಳಿ ದಾಖಲೆಗಳಿವೆ

ಹೊಸಪೇಟೆ: ಇಲ್ಲಿನ ಆರ್‌ಬಿಎಸ್‌ಎಸ್‌ಎನ್‌ ಗಣಿ ಕಂಪನಿಗೆ 64.50 ಎಕರೆ ಜಮೀನು ನೀಡಿರುವ ವಿಚಾರ ನನ್ನ ಗಮನಕ್ಕೆ ಇಲ್ಲ, ನಾನು ಆ ಸಭೆಯಲ್ಲಿ ಭಾಗವಹಿಸಿಲ್ಲ ಎಂಬ ಜಿಲ್ಲಾ ಉಸ್ತವಾರಿ ಸಚಿವ ಕೆ.ಎಸ್.ಬಸವಂತಪ್ಪ ಹೇಳಿಕೆ ಸುಳ್ಳಾಗಿದ್ದು, ಅ.6ರಂದು ಸಚಿವರ ಸಮ್ಮುಖದಲ್ಲಿ ನಡೆದ ಸಂಪುಟ ಸಭೆಯಲ್ಲಿ ಭೂಮಿ ಲೀಸ್ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ. ಆದರೂ ಆ ಕ್ಯಾಬಿನೆಟ್‌ನಲ್ಲಿ ತಾವು ಭಾಗವಹಿಸಿರಲಿಲ್ಲ ಎಂದು ಸಚಿವರು ಸುಳ್ಳು ಹೇಳಲು ಕಾರಣವೇನು? ಎಂಬುದನ್ನು ಜಿಲ್ಲೆಯ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಮಾಜಿ ಸಚಿವ ಆನಂದ ಸಿಂಗ್ ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ನಗರಸಭೆ ವ್ಯಾಪ್ತಿಯ 5 ಕಿಮೀನಲ್ಲೇ ಅದು ಬರುವುದರಿಂದ ಲೀಸ್ ನವೀಕರಣ ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ, ಆರ್ಥಿಕ ಹಾಗೂ ಕಾನೂನು ಇಲಾಖೆ ಪ್ರಸ್ತಾವನೆ ತಿರಸ್ಕರಿಸಿವೆ. ಆದರೂ ಮುಖ್ಯಮಂತ್ರಿಗಳ ಅನುಮೋದನೆ ಮೇರೆಗೆ ಸಚಿವ ಸಂಪುಟ ಸಭೆಯಲ್ಲಿ ತರಲಾಗಿತ್ತು. ಆ ಸಭೆಯಲ್ಲಿ ಸಚಿವ ಬಸವಂತಪ್ಪ ಹಾಜರಿದ್ದರು ಎನ್ನಲು ನನ್ನ ಬಳಿ ದಾಖಲೆಗಳಿವೆ ಎಂದು ಸವಾಲು ಹಾಕಿದರು.

ಸಚಿವ ಬಸವಂತಪ್ಪ ಸಭೆಯಲ್ಲಿದ್ದಾಗಲೇ ಆರ್‌ಬಿಎಸ್‌ಎಸ್‌ಎನ್ ಪ್ರಸ್ತಾವನೆಗೆ ಅನುಮೋದನೆ ದೊರಕಿದೆ. ಆಗ ಜಿಲ್ಲೆಯ ಸಚಿವರಾಗಿ ಯಾಕೆ ಆಕ್ಷೇಪಿಸಲಿಲ್ಲ? ಯಾವುದಾದರೂ ಪ್ರಭಾವ, ಆಮಿಷಕ್ಕೆ ಒಳಗಾಗಿದ್ದರೇ? ಪ್ರಸ್ತಾವನೆಗೆ ಒಪ್ಪಿಗೆ ನೀಡಲು ಕಾಲಾವಕಾಶ ಕೇಳಬೇಕಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಬದಲಾವಣೆ ಮಾಡದಿದ್ದರೆ ತಾವು ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಬೆದರಿಕೆ ಹಾಕಿದ್ದ ಸ್ಥಳೀಯ ಶಾಸಕ ಎಚ್.ಆರ್. ಗವಿಯಪ್ಪ ಆರ್‌ಬಿಎಸ್‌ಎಸ್‌ಎನ್ ವಿಚಾರದಲ್ಲಿ ಅಂತಹ ದಿಟ್ಟ ನಿರ್ಧಾರ ತೋರಲಿಲ್ಲ ಎಂದೂ ಅವರು ಹೇಳಿದರು.

ವಿಜಯನಗರ ಕ್ಷೇತ್ರದ ಕಬ್ಬು ಬೆಳೆಗಾರರ ಹಿತಕ್ಕಾಗಿ ಆರ್‌ಬಿಎಸ್‌ಎನ್‌ಎನ್ ಜಾಗದಲ್ಲಿ ಮತ್ತು ಹಂಪಿ ಸುಗರ್ಸ್‌ಗೆ ನೀಡಿದ್ದ ಜಾಗ ಎರಡು ಸೇರಿಸಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ನಾನು ಉದ್ದೇಶಿಸಿದ್ದೆ. ಆದರೆ, ಶಾಸಕ ಗವಿಯಪ್ಪ ಪ್ರತಿಷ್ಠೆಗೆ ಬಿದ್ದು, ಹಂಪಿ ಶುಗರ್ಸ್‌ ಗೆ ಅಡ್ಡಗಾಲು ಹಾಕಿದ್ದಾರೆ. ಆರ್‌ಬಿಎಸ್‌ಎಸ್‌ಎನ್ ಜಾಗದಲ್ಲಿ ವಸತಿ ರಹಿತರಿಗೆ ನಿವೇಶನ ಕಲ್ಪಿಸುವುದಾಗಿ ಹೇಳಿದ್ದರು. ಕಾಳಘಟ್ಟ ಭಾಗದಲ್ಲಿ ಶಾಸಕ ಗವಿಯಪ್ಪ ಗುರುತಿಸಿರುವ 70 ಎಕರೆ ಪ್ರದೇಶ ಸಂಪೂರ್ಣ ಕಲ್ಲು ಬಂಡೆಯಿಂದ ಕೂಡಿದೆ. ಇದು ಹಂಪಿ ಪೆರಿಫರಲ್ ವಲಯ ಹಾಗೂ ಅಳಿವಿನಂಚಿನಲ್ಲಿರುವ ನೀರು ನಾಯಿ ಸಂರಕ್ಷಿತ ಪ್ರದೇಶ (ತುಂಗಭದ್ರಾ ನದಿ)ಗೆ ಹೊಂದಿಕೊಂಡಿದ್ದರಿಂದ ಅಲ್ಲಿ ಕೈಗಾರಿಕೆ ಸ್ಥಾಪನೆ ಕನಸಿನ ಮಾತು ಎಂದರು.

ಆರ್‌ಬಿಎಸ್‌ಎಸ್‌ಎನ್ ವಿಚಾರದಲ್ಲಿ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಜನಾಂದೋಲನದ ರೂಪ ನೀಡಬೇಕಿದ್ದ ಹೋರಾಟಗಾರರು ಮೌನಕ್ಕೆ ಶರಣಾಗಿದ್ದಾರೆ. ಇತ್ತೀಚೆಗೆ ಸಕ್ಕರೆ ಕಾರ್ಖಾನೆಗೆ ಒತ್ತಾಯಿಸಿ ನಡೆದ ಹೋರಾಟಕ್ಕೆ 50ಕ್ಕೂ ಹೆಚ್ಚು ಸಂಘಟನೆ ಬೆಂಬಲಿಸಿದ್ದವು. ಆದರೆ 150 ಜನರು ಹೋರಾಟದಲ್ಲಿರಲಿಲ್ಲ ಎಂದು ಆನಂದ ಸಿಂಗ್‌ ವಿಷಾಧಿಸಿದರು.

ನೂತನ ಜಿಲ್ಲಾಸ್ಪತ್ರೆ ಕಟ್ಟಡ ಸಿದ್ಧಗೊಂಡು ಯಂತ್ರೋಪಕರಣ ಬಂದಿದ್ದರೂ ವೈದ್ಯರು, ವೈದ್ಯಕೀಯ ಸಿಬ್ಬಂದಿ ನೇಮಕಾತಿ ಮಾತೇ ಇಲ್ಲ. ಕೇವಲ ಗ್ರುಪ್ ಡಿ ಸಿಬ್ಬಂದಿ ನೇಮಕದಿಂದ ರೋಗಿಗಳಿಗೆ ಚಿಕಿತ್ಸೆ ನೀಡಲಾಗದು. ಸರ್ಕಾರದ ಆರ್ಥಿಕ ಪರಿಸ್ಥಿತಿ, ಶಾಸಕರ ನಿರುತ್ಸಾಹದಿಂದ ಈ ಅವಧಿಯಲ್ಲಿ ಆಸ್ಪತ್ರೆ ಉದ್ಘಾಟನೆಯಾಗದು. ಕ್ಷೇತ್ರಕ್ಕೆ ಒಳಿತು ಬಯಸುವ ಶಾಸಕರಾಗಿದ್ದರೆ ಗವಿಯಪ್ಪ ಈಗಾಗಲೇ ಸರ್ಕಾರದ ಮೇಲೆ ಒತ್ತಡ ತಂದು ಉದ್ಘಾಟಿಸಬೇಕಿತ್ತು ಎಂದರು.