ಪೆನ್‌ಡ್ರೈವ್‌ ಹಿನ್ನೆಲೆ ಏನೆಂದುನಾವು ಬಿಚ್ಚಿಡಬೇಕಾ?: ಡಿಕೆಶಿ

| Published : May 05 2024, 02:02 AM IST / Updated: May 05 2024, 08:18 AM IST

DK Shivakumar

ಸಾರಾಂಶ

ಹಾಸನ ಪೆನ್‌ಡ್ರೈವ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪದೇ ಪದೇ ನಿಲುವು ಬದಲಿಸುತ್ತಿರುವುದು ಯಾಕೆ? ಪೆನ್‌ಡ್ರೈವ್‌ ಹಿನ್ನೆಲೆ ಏನು ಎಂದು ನಾವು ಬಿಚ್ಚಿಡಬೇಕಾ? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

 ಬೆಂಗಳೂರು :  ಹಾಸನ ಪೆನ್‌ಡ್ರೈವ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪದೇ ಪದೇ ನಿಲುವು ಬದಲಿಸುತ್ತಿರುವುದು ಯಾಕೆ? ಪೆನ್‌ಡ್ರೈವ್‌ ಹಿನ್ನೆಲೆ ಏನು ಎಂದು ನಾವು ಬಿಚ್ಚಿಡಬೇಕಾ? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಅವರೇ ಮೇ 7 ರವರೆಗೆ ಯಾಕೆ ಕಾಯಬೇಕು? ಇದರ ಮೂಲ ಏನು? ಇದರ ಹಿನ್ನೆಲೆ ಏನು? ಇದರ ಹಿಂದೆ ಯಾರು ಯಾರು ಇದ್ದಾರೆ ಎಂದು ನಾವು ಬಿಚ್ಚಿ ಇಡಬೇಕಾ? ಇದು ಅವರ ಕುಟುಂಬದ ಆಂತರಿಕ ವಿಚಾರ. ಈ ಬಗ್ಗೆ ಮಾಧ್ಯಮದವರು ವಿಶ್ಲೇಷಣೆ ಮಾಡಿದ್ದಾರೆ. ಇದರ ಹಿಂದೆ ಏನೇನಾಗಿದೆ ಎಂದು ನಾವೂ ಬಿಚ್ಚಿಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 7ರ ನಂತರ ಈ ಪ್ರಕರಣ ಎಲ್ಲಿಗೆ ಹೋಗುತ್ತೆ ಎಂದು ಎಲ್ಲರಿಗೂ ಗೊತ್ತು ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಪೆನ್‌ಡ್ರೈವ್ ಅವರ ಕುಟುಂಬದ ವಿಚಾರ. ಆದರೆ ಕುಮಾರಸ್ವಾಮಿ ಮಾತು ಆಗಾಗ್ಗೆ ಬದಲಾಗುತ್ತಲೇ ಬಂದಿದೆ. ಬೇಕಿದ್ದರೆ ಕಳೆದ ವಿಧಾನಸಭೆ ಚುನಾವಣೆಯಿಂದ ಈಚೆಗೆ ಅವರ ಕುಟುಂಬ ಸದಸ್ಯರ ಹೇಳಿಕೆಗಳನ್ನು ನೋಡಿಕೊಂಡು ಬನ್ನಿ. ಈಗ ಪೆನ್ ಡ್ರೈವ್ ಪ್ರಕರಣದಲ್ಲೂ ಕುಮಾರಸ್ವಾಮಿ ಅವರು ಗಂಟೆಗೊಂದು, ಗಳಿಗೆಗೊಂದು ಹೇಳಿಕೆ ನೀಡುತ್ತಿದ್ದಾರೆ. ನಿಲುವು ಬದಲಿಸುತ್ತಿದ್ದಾರೆ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಅವರೇ ‘ಉಪ್ಪು ತಿಂದವರು ನೀರು ಕುಡಿಯಬೇಕು, ನಮ್ಮ ಕುಟುಂಬ ಬೇರೆ, ಅವರ ಕುಟುಂಬ ಬೇರೆ’ ಎಂದು ಹೇಳಿದ್ದಾರೆ. ಹಿಂದೆ ನಮ್ಮ ಕುಟುಂಬದವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದ್ದೂ ಅವರೇ. ಪ್ರಜ್ವಲ್‌ನಿಂದ ತಪ್ಪಾಗಿದೆ ಕ್ಷಮಿಸಿ ಎಂದು ಕ್ಷಮೆ ಕೇಳಿದ್ದು ಅವರೇ. ಆದರೆ ಕುಮಾರಸ್ವಾಮಿ ಈಗ ತಮ್ಮ ನಿಲುವು ಬದಲಿಸುತ್ತಿರುವುದೇಕೆ? ಎಂದು ಕಿಡಿಕಾರಿದ್ದಾರೆ.