ಸಾರಾಂಶ
ಧಾರವಾಡ: ಅಗ್ನಿಹೋತ್ರ ಸೇರಿದಂತೆ ಸನಾತನ, ಹಿಂದೂ ಪರಂಪರೆ ಪದ್ಧತಿ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಎಡ ಪಂಥೀಯರು ಬೇರೆ ಧರ್ಮದ ಬಗ್ಗೆ ಏತಕ್ಕೆ ಮಾತನಾಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿಹೋತ್ರ ನಮ್ಮ ಸನಾತನ ಪರಂಪರೆಯ ಪದ್ಧತಿ. ಇಂತಹ ಪದ್ಧತಿಗಳ ಬಗ್ಗೆ ಹೆಚ್ಚಿನ ಅಧ್ಯಯನ ಆಗಬೇಕು. ಎಲ್ಲ ಧರ್ಮದವರೂ ಅಗ್ನಿಹೋತ್ರದಲ್ಲಿ ಭಾಗವಹಿಸಬಹುದು. ದೇಶದಲ್ಲಿ ಕೆಲ ಎಡಪಂಥಿಯರು ಇದನ್ನು ಟೀಕೆ ಮಾಡುತ್ತಾರೆ. ಅದರಲ್ಲೂ ಹಿಂದೂ ಸಮಾಜದಲ್ಲಿ ಹುಟ್ಟಿದವರು ಟೀಕೆ ಮಾಡುತ್ತಿದ್ದು ಸರಿಯಲ್ಲ. ಅಯೋಧ್ಯೆ, ಕುಂಭಮೇಳದ ಬಗ್ಗೆ ಬಹಳ ಟೀಕೆ ಮಾಡಿದ್ದರು. ಬೇರೆ ಧರ್ಮಗಳ ಬಗ್ಗೆ ಹೀಗೆ ಮಾತನಾಡಲಿ ನೋಡೋಣ? ಎಂದು ಸವಾಲು ಹಾಕಿದರು.
ಹಿಂದೂಗಳು ಸಹಿಷ್ಣು ಗುಣ ಹೊಂದಿದವರು. ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಹೀಗಾಗಿ ಮಾತನಾಡುತ್ತಾರೆ. ಹಿಂದೂ ಜೀವನದ ಪದ್ಧತಿ. ಜಾತಿ, ಮತ, ಪಂಥದ ಪ್ರಶ್ನೆ ಬರುವುದಿಲ್ಲ. ದೇವರ ಪೂಜೆ ಮಾಡಿದರೂ ಸರಿ. ಮಾಡದಿದ್ದರೂ ಸರಿ. ಆದರೆ, ಅನವಶ್ಯಕ ಟೀಕೆ ಬೇಡ. ಇದು ಭಾರತೀಯ ಅಸ್ಮಿತೆ ದುರ್ಬಲಗೊಳಿಸುವ ಪ್ರಯತ್ನ ಎಂದು ಜೋಶಿ ಕಿಡಿಕಾರಿದರು.
ವಕ್ಫ್ ಕಾಯ್ದೆಗೆ ತಿದ್ದುಪಡಿಗೆ ದೇಶಾದ್ಯಂತ ಬೆಂಬಲ
ಧಾರವಾಡ: ವಕ್ಫ್ ಕಾಯ್ದೆಗೆ ಆಗಿರುವ ತಿದ್ದುಪಡಿಯನ್ನು ಪಶ್ಚಿಮ ಬಂಗಾಳ ಹೊರತುಪಡಿಸಿ ದೇಶಾದ್ಯಂತ ಒಪ್ಪಿಕೊಳ್ಳಲಾಗುತ್ತಿದೆ. ಇದು ಮುಸ್ಲಿಮರ ವಿರುದ್ಧ ಅಲ್ಲವೇ ಅಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾಯ್ದೆಯು ಮುಸ್ಲಿಂ ಸಮುದಾಯಕ್ಕೆ ಅನುಕೂಲವಾಗಲಿದೆ. ಅವರಿಗೆ ಇದರ ಅನುಕೂಲ ಗೊತ್ತಾದರೆ ತಮ್ಮನ್ನು ಕೈ ಬಿಡುತ್ತಾರೆ ಎಂಬ ಆತಂಕ ಕಾಂಗ್ರೆಸ್ಸಿಗೆ ಇದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಎಲ್ಲದರ ಬಗ್ಗೆ ಮಾತಾಡುತ್ತಾರೆ. ಈ ಬಗ್ಗೆ ಲೋಕಸಭೆಯಲ್ಲಿ ಏತಕ್ಕೆ ಮಾತನಾಡಲಿಲ್ಲ? ರಾಜ್ಯಸಭೆಯಲ್ಲೂ ಗಾಂಧಿ ಪರಿವಾರದವರು ಮಾತಾಡಲಿಲ್ಲ? ಎಂದು ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸುತ್ತಿರುವ ಕೈ ಮುಖಂಡರಿಗೆ ಜೋಶಿ ಪ್ರಶ್ನಿಸಿದರು.
ಕಾನೂನು ಸುವ್ಯವಸ್ಥೆ ಗಂಭೀರವಾಗಿ ಪರಿಗಣಿಸಲಿ: ಜೋಶಿ
ಧಾರವಾಡ: ಹುಬ್ಬಳ್ಳಿಯಲ್ಲಿ ಬಾಲಕಿ ಅತ್ಯಾಚಾರವೆಸಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ಕುರಿತು ರಾಜಕೀಯವಾಗಿ ಏನೂ ಮಾತನಾಡಲಾರೆ. ಆದರೆ, ಇಂತಹ ಕೃತ್ಯ ಎಸಗುವ ಮನಸ್ಸುಗಳಿಗೆ ಶಿಕ್ಷೆಯ ಭಯ ಇರಬೇಕು. ಅದಕ್ಕಾಗಿ ಕಾನೂನು-ಸುವ್ಯವಸ್ಥೆ ಕಟ್ಟುನಿಟ್ಟಾಗಿರಬೇಕು. ಎಲ್ಲ ರೀತಿಯ ಮುಂಜಾಗ್ರತೆ ತೆಗೆದುಕೊಳ್ಳಬೇಕು. ಈ ಕೃತ್ಯ ಮಾಡಿದವರಿಗೆ ಅತ್ಯುಗ್ರ ಶಿಕ್ಷೆಯಾಗಬೇಕು. ಇದಕ್ಕಾಗಿ ಪೊಲೀಸರು ಕಾರ್ಯಪ್ರವೃತ್ತರಾಗಬೇಕು ಎಂದು ಘಟನೆಯನ್ನು ತೀವ್ರವಾಗಿ ಖಂಡಿಸಿದರು.