ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ಕೇಂದ್ರ ಸರ್ಕಾರ 6 ಸಾವಿರ ಹಾಗೂ ಹಿಂದಿನ ಬಿಜೆಪಿ ಸರ್ಕಾರ 4 ಸಾವಿರ ಸೇರಿಸಿ ಒಟ್ಟು 10 ಸಾವಿರ ರು. ನೀಡುತ್ತಿತ್ತು. ಆದರೀಗ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆ 4 ಸಾವಿರ ರು. ಕೊಡುವುದನ್ನು ಸ್ಥಗಿತಗೊಳಿಸಿದೆ. ಯಾವ ಸರ್ಕಾರ ತಮ್ಮ ಪರವಾಗಿದೆ ಎಂಬುದನ್ನು ರೈತರು ನಿರ್ಧರಿಸಬೇಕು ಎಂದು ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಹೇಳಿದರು.ಶಿವಗಂಗೆಯ ಗಣಪತಿ ದೇವಾಲಯದಲ್ಲಿ ಪೂಜೆ ಮುಗಿಸಿ ಕುದೂರು ಗ್ರಾಮದಲ್ಲಿ ಏರ್ಪಡಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ರೈತರಿಗೆ 6 ಸಾವಿರ ರು. ನೀಡಲಾಗುತ್ತಿದೆ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು 4 ಸಾವಿರ ಸೇರಿಸಿ ಒಟ್ಟು 10 ಸಾವಿರ ರು.ಗಳನ್ನು ರೈತರ ಬ್ಯಾಂಕಿನ ಖಾತೆಗೆ ಜಮಾ ಮಾಡುತ್ತಿದ್ದರು. ಆದರೀಗ ಕೇಂದ್ರ ಸರ್ಕಾರದಿಂದ 6 ಸಾವಿರ ರು. ಮಾತ್ರ ಬರುತ್ತಿದೆ ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿರುವಂತೆ ಮತ ಮತ್ತು ಮತದಾನ ಮನೆಯ ಮಗಳಿದ್ದಂತೆ. ಯಾವುದೇ ಕಾರಣಕ್ಕೂ ನಾವು ಅದನ್ನು ಮಾರಿಕೊಳ್ಳಬಾರದು ಎಂದರು.ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಮಾತನಾಡಿ, ಕಾಂಗ್ರೆಸ್ಸಿಗೆ ಮತ ಹಾಕಿ ವ್ಯರ್ಥ ಮಾಡಿಕೊಳ್ಳಬೇಡಿ. ಮೋದಿಯವರ ಇಡೀ ಜಗತ್ತು ಬೆರಗಿನಿಂದ ಭಾರತವನ್ನು ನೋಡುವಂತೆ ಆಡಳಿತ ಮಾಡಿದ್ದಾರೆ. ಈ ಬಾರಿ ನೀವು ಹಾಕುವ ಮತ ಮುಂದಿನ ತಲೆಮಾರಿಗೆ ಸುಭದ್ರ ಭಾರತ ನಿರ್ಮಾಣ ಮಾಡುವ ಶಕ್ತಿಯುತವಾಗಿರುತ್ತದೆ ಎಂದು ಹೇಳಿದರು.
ರೈತರು ಟ್ರಾನ್ಸ್ ಫಾರ್ಮರ್ ಹಾಕಿಕೊಳ್ಳುವುದಕ್ಕೆ ಕೇವಚ 30 ಸಾವಿರ ಇತ್ತು. ಸಿದ್ದರಾಮಯ್ಯನವರ ಸರ್ಕಾರ ಬಂದ ಕೂಡಲೇ ಉಚಿತ ಕೊಡುಗೆಗಳನ್ನು ಸರಿದೂಗಿಸಲು ಮೂರು ಲಕ್ಷಕ್ಕೆ ಏರಿಸಿದರು. ಇದರಿಂದ ರೈತ ಕಂಗಾಲಾಗಿದ್ದಾನೆ. ಇಂತಹ ಸೂಕ್ಷ್ಮಗಳನ್ನು ರೈತರು ಅರಿಯಬೇಕಾಗಿದೆ ಎಂದರು.ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಕುದೂರು ಪಟ್ಟಣಕ್ಕೆ ಸಂಸದರ ಕೊಡುಗೆ ಶೂನ್ಯ, ನೀವು ನಿಜವಾಗಿಯೂ ಕೆಲಸ ಮಾಡಿದ್ದರೆ ಸೀರೆ, ಕುಕ್ಕರ್, ತವಾ ಏಕೆ ಹಂಚಬೇಕು. ಮತದಾರರೆ ಕಳೆದ ಬಾರಿ ಐದು ಸಾವಿರದ ಗಿಪ್ಟ್ ಕೊಡುತ್ತೇವೆ ಎಂದು ಕೂಪನ್ ಕೊಟ್ಟಿದ್ದರು. ಇದುವರೆಗೂ ಅದನ್ನು ಕೊಟ್ಟಿಲ್ಲ. ಈಗಲೂ ಪ್ರಿಡ್ಜ್ ಕೊಡ್ತೀವಿ, ಬೈಕ್ ಕೊಡ್ತೀವಿ ಎಂದು ಕೂಪನ್ ಹಂಚಬಹುದು. ದೇಶದ ಭದ್ರತೆಗೆ ಡಾ.ಮಂಜುನಾಥ್ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮುಖಂಡ ಬಿಸ್ಕೂರು ಸುಹೇಲ್, ಪ್ರಸಾದ್ ಗೌಡ ಮಾತನಾಡಿದರು. ಬಿಜೆಪಿ ಮಾಜಿ ಅಧ್ಯಕ್ಷ ರಂಗಧಾಮಯ್ಯ, ಸೋಮೇಶ್, ಕೆ.ಟಿ.ವೆಂಕಟೇಶ್, ಮಂಜುನಾಥ್, ಗಂಗಣ್ಣ, ಬಿಜೆಪಿ ಕುದೂರು ಅಧ್ಯಕ್ಷ ನಾಗರಾಜ್ ಮತ್ತಿತರರು ಹಾಜರಿದ್ದರು.