ಸಾರಾಂಶ
ಸಂಡೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸರಣಿ ಹಗರಣದಲ್ಲಿ ಮುಳುಗಿದೆ. ಅಭಿವೃದ್ಧಿ ಮಾಡದ ಹಾಗೂ ಭ್ರಷ್ಟಾಚಾರದಿಂದ ಕೂಡಿರುವ ರಾಜ್ಯ ಸರ್ಕಾರಕ್ಕೆ ರಿನಿವಲ್ ಏಕೆ? ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣದ ಲೂಟಿಯಾಗಿದೆ. ಈ ನಿಗಮದ ಲೂಟಿ ಕೇಂದ್ರ ಬಳ್ಳಾರಿಯಾಗಿದೆ. ಇದರಲ್ಲಿ ಸಂಡೂರು ತಳಕು ಹಾಕಿಕೊಂಡಿದೆ. ಈ ನಿಗಮದ ಹಣವನ್ನು ಲೋಕಸಭಾ ಚುನಾವಣೆಗೂ ಬಳಕೆ ಮಾಡಿರುವುದಾಗಿ ಇ.ಡಿ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ರಾಜ್ಯದ ಆಡಳಿತ ನಿಂತ ನೀರಾಗಿದೆ. ರಾಜ್ಯ ಸರ್ಕಾರಕ್ಕೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎದುರಿಸುವ ಸಾಮರ್ಥ್ಯವಿಲ್ಲದಂತಾಗಿದೆ. ಹಿಂದುಳಿದ ವರ್ಗಗಳ ಹಲವು ನಿಗಮಗಳಿಗೆ ಬಿಡಿಗಾಸು ಅನುದಾನವಿಲ್ಲ. ನೀಡಲು ಖಜಾನೆಯಲ್ಲಿ ಹಣವಿಲ್ಲ. ಚುನಾವಣೆ ಬಂದಾಗ ಮಾತ್ರ ವಿವಿಧ ಭಾಗ್ಯಗಳ ಫಲಾನುಭವಿಗಳ ಖಾತೆಗಳಿಗೆ ಹಣ ಹಾಕಿ, ಜನತೆಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ಕುಟುಕಿದರು.
ಮತದಾರರು ಅಭಿವೃದ್ಧಿ ಶೂನ್ಯ ರಾಜ್ಯ ಸರ್ಕಾರದ ವಿರುದ್ಧ ಮತ ನೀಡಬೇಕು. ಜನತೆ ಸ್ವಾಭಿಮಾನದಿಂದ ಮತ ಚಲಾಯಿಸಿ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರನ್ನು ಬಹುಮತದಿಂದ ಗೆಲ್ಲಿಸಬೇಕು. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದರು.ಪಕ್ಷದಲ್ಲಿನ ಬಂಡಾಯ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಪಕ್ಷದ ವರಿಷ್ಠರು ಬಂಡಾಯವನ್ನು ಶಮನ ಮಾಡಲಿದ್ದಾರೆ. ಉಪ ಚುನಾವಣೆ ಹೊಸ ಸರ್ಕಾರಕ್ಕೆ ಮುನ್ನುಡಿಯಾಗಿದೆ. ಬಿಜೆಪಿ ಕ್ಷೇತ್ರದಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಶ್ರಮಿಸಲಿದೆ ಎಂದರು.
ಪಕ್ಷದ ಒಬಿಸಿ ಮೋರ್ಚಾ ರಾಜ್ಯ ಸಮಿತಿ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಸೋಮಶೇಖರ್, ಅಶ್ವಿನಿ, ಕಾರ್ಯದರ್ಶಿ ವೆಂಕಟೇಶ್, ಜಿಲ್ಲಾಧ್ಯಕ್ಷ ರಾಘವೇಂದ್ರ, ಸಂಡೂರು ಮಂಡಲ ಅಧ್ಯಕ್ಷ ನಾನಾಸಾಹೇಬ್ ನಿಕ್ಕಂ, ಮುಖಂಡರಾದ ರಾಜಕುಮಾರ್, ರವಿನಾಯಕ, ಲಿಂಗರಾಜು, ತಿರುಮಲ, ಸಿದ್ದೇಶಪ್ಪ, ಅಂಬಣ್ಣ, ದರೋಜಿ ರಮೇಶ್, ರಮೇಶ್, ಪುಷ್ಪಾ ಮುಂತಾದವರು ಉಪಸ್ಥಿತರಿದ್ದರು.೨೩ಎಸ್.ಎನ್.ಡಿ೪
ಸಂಡೂರಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಮಾತನಾಡಿದರು.