ಪತ್ನಿ ಅಡುಗೆ ಕೆಲಸ ಮಾಡಬೇಕು, ಅನುಮತಿಯಿಲ್ಲದೆ ತವರು ಮನೆಗೆ ಹೋಗಬಾರದು ಎಂಬ ಪತಿಯ ಮನಸ್ಥಿತಿಯನ್ನು ಒಪ್ಪಲಾಗದು ಎಂದು ಖಾರವಾಗಿ ನುಡಿದಿರುವ ಹೈಕೋರ್ಟ್, ಮದುವೆ ಎಂದರೆ ಪತ್ನಿಯ ಸ್ವಾತಂತ್ರ್ಯ ಮತ್ತು ಇಚ್ಛೆ ನಿಯಂತ್ರಿಸುವ ಪರವಾನಗಿಯಲ್ಲ. ಪತಿಯ ಮನೆ ಕೆಲಸ ಮತ್ತು ಪೋಷಕರನ್ನು ನೋಡಿಕೊಳ್ಳುವ ಕೆಲಸಕ್ಕೆ ಪತ್ನಿ ನೇಮಕವಾದವರಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪತ್ನಿ ಅಡುಗೆ ಕೆಲಸ ಮಾಡಬೇಕು, ಅನುಮತಿಯಿಲ್ಲದೆ ತವರು ಮನೆಗೆ ಹೋಗಬಾರದು ಎಂಬ ಪತಿಯ ಮನಸ್ಥಿತಿಯನ್ನು ಒಪ್ಪಲಾಗದು ಎಂದು ಖಾರವಾಗಿ ನುಡಿದಿರುವ ಹೈಕೋರ್ಟ್, ಮದುವೆ ಎಂದರೆ ಪತ್ನಿಯ ಸ್ವಾತಂತ್ರ್ಯ ಮತ್ತು ಇಚ್ಛೆ ನಿಯಂತ್ರಿಸುವ ಪರವಾನಗಿಯಲ್ಲ. ಪತಿಯ ಮನೆ ಕೆಲಸ ಮತ್ತು ಪೋಷಕರನ್ನು ನೋಡಿಕೊಳ್ಳುವ ಕೆಲಸಕ್ಕೆ ಪತ್ನಿ ನೇಮಕವಾದವರಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಪತ್ನಿ ಮತ್ತು ಅಪ್ರಾಪ್ತ ಮಗುವಿಗೆ ಮಾಸಿಕ 9 ಸಾವಿರ ರು. ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದು ಕೋರಿ ನೆಲಮಂಗಲ ತಾಲೂಕಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಡಾ. ಚಿಲ್ಲಕೂರು ಸುಮಲತಾ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಹೆತ್ತವರನ್ನು ನೋಡಿಕೊಳ್ಳುವ ಪ್ರಾಥಮಿಕ ಕರ್ತವ್ಯ ಮಗ ಅಥವಾ ಮಗಳ ಮೇಲಿರುತ್ತದೆಯೇ ಹೊರತು, ಸೊಸೆ ಅಥವಾ ಅಳಿಯನ ಮೇಲಲ್ಲ. ಇದೆಲ್ಲವೂ ಸ್ವಯಂಪ್ರೇರಿತವಾಗಿ ಇರಬೇಕೇ ಹೊರತು ಬಲವಂತದಿಂದಲ್ಲ. ಮದುವೆ ಎಂಬುದು ಮಹಿಳೆ ಮತ್ತು ಪುರುಷನನ್ನು ಒಟ್ಟಿಗೆ ಸೇರಿಸುವ ಪವಿತ್ರ ಬಂಧವಾಗಿದೆ. ಆದರೆ ಪ್ರೀತಿ, ವಿಶ್ವಾಸ, ಗೌರವ, ಪರಸ್ಪರ ಬೆಂಬಲ ಹಾಗೂ ಇನ್ನೊಬ್ಬರ ಭಾವನೆ ಅರ್ಥ ಗುಣವು ದಾಂಪತ್ಯವನ್ನು ಗಟ್ಟಿ ಮಾಡುತ್ತದೆ ಎಂದು ಪೀಠ ಹೇಳಿದೆ.

ಪತ್ನಿ ಸಹ ತನ್ನ ವೃತ್ತಿ, ಹಣಕಾಸಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಹಾಗೂ ಜವಾಬ್ದಾರಿ ಹೊಂದಿರುತ್ತಾಳೆ. ಗಂಡನ ಇಚ್ಛೆ ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ಬದುಕಬೇಕು ಎಂದು ಪತ್ನಿಗೆ ಒತ್ತಾಯಿಸಲಾಗದು. ಕುಟುಂಬಕ್ಕಾಗಿ ಪತ್ನಿಯ ವಿಧೇಯತೆ ಮತ್ತು ಅರ್ಪಣೆಯನ್ನು ಎಂದಿಗೂ ಅಳೆಯಲಾಗದು. ಮದುವೆ ಅಸಮಾನರ ನಡುವಿನ ಸಂಬಂಧವಲ್ಲ. ಪ್ರಸ್ತುತದ ದಿನಗಳಲ್ಲಿ ಮಹಿಳೆಯೊಬ್ಬಳು ತನ್ನ ತಂದೆ-ತಾಯಿಯ ಮನೆಗೆ ಹೋಗಲು ಪತಿಯ ಅಥವಾ ಅತ್ತೆ-ಮಾವಂದಿರ ಅನುಮತಿ ಪಡೆಯಬೇಕು ಎನ್ನುವುದು ಪತಿಯ ಸರ್ವಾಧಿಕಾರಿ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಪೀಠ ಪೀಠ ತೀಕ್ಷ್ಣವಾಗಿ ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿವರ:

ನೆಲಮಂಗಲ ತಾಲೂಕಿನ ವ್ಯಕ್ತಿಯೊಬ್ಬ, ತುಮಕೂರು ತಾಲೂಕಿನ ಮಹಿಳೆಯೊಬ್ಬರನ್ನು ವಿವಾಹವಾಗಿದ್ದರು. ದಂಪತಿಗೆ ಹೆಣ್ಣು ಮಗು ಜನಿಸಿತ್ತು. ದಂಪತಿ ಎರಡು ವರ್ಷಗಳ ಕಾಲ ಜೀವನ ನಡೆಸಿದ್ದರು. ಆದರೆ, ನಂತರ ಪತಿಯ ಕುಟುಂಬದವರು ವಿನಾ ಕಾರಣ ತನ್ನನ್ನು ನಿಂದಿಸುತ್ತಿದ್ದಾರೆ. ಜೂಜಾಡುತ್ತಿದ್ದ ಪತಿ, ಹೆಚ್ಚಿನ ವರದಕ್ಷಿಣೆಗೆ ಒತ್ತಾಯಿಸುತ್ತಿದ್ದಾರೆ. ಇದೇ ವಿಚಾರವಾಗಿ ತನ್ನ ಮೇಲೆ ಹಲವು ಬಾರಿ ಹಲ್ಲೆ ಮಾಡಿದ್ದಾರೆ. ಪತಿ, ಅತ್ತೆ-ಮಾವನ ಗಮನಕ್ಕೆ ತಾರದೆ ತವರು ಮನೆಗೆ ಹೋಗುವಂತಿರಲಿಲ್ಲ ಎಂಬ ಕಾರಣಕ್ಕಾಗಿ ಪತ್ನಿಯು, ಪತಿಯ ಮನೆ ತೊರೆದು ಪ್ರತ್ಯೇಕವಾಗಿ ವಾಸವಿದ್ದರು. ನಂತರ ದಂಪತಿಗೆ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿತ್ತು. ಪತ್ನಿ ಮತ್ತು ಮಗಳ ಮಾಸಿಕ 9 ಸಾವಿರ ರು. ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.