ಸಾರಾಂಶ
ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ಮೂರ್ನಾಡಿನ ವ್ಯಕ್ತಿಯೊಬ್ಬರಿಗೆ ಸೇರಿದ ಟ್ಯಾಕ್ಸಿಯಲ್ಲಿ ದುಬಾರೆ ಸಾಕಾನೆ ಶಿಬಿರಕ್ಕೆ ತೆರಳುತ್ತಿದ್ದ ವೇಳೆ ಪ್ರವಾಸಿಗರ ವಾಹನಕ್ಕೆ ರಸ್ತೆ ಮಧ್ಯೆ ಒಂಟಿ ಸಲಗ ಎದುರಾಗಿದೆ. ಈ ವೇಳೆ ಸಲಗ ಟ್ಯಾಕ್ಸಿ ಮೇಲೆ ಏಕಾಏಕಿ ದಾಳಿ ನಡೆಸಿದೆ. ದಾಳಿಯಿಂದ ಕಾರಿನ ಹಿಂಬದಿಗೆ ಹಾನಿ ಉಂಟಾಗಿದೆ. ಪ್ರಯಾಣಿಕರು ಪಾರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಪ್ರವಾಸಿಗರ ಕಾರಿನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಕುಶಾಲನಗರ ಸಮೀಪ ವಾಲ್ನೂರು ತ್ಯಾಗತ್ತೂರು ಬಳಿ ಗುರುವಾರ ನಡೆದಿದೆ. ಅದೃಷ್ಟವಶಾತ್ ಚಾಲಕ ಸೇರಿದಂತೆ ಇಬ್ಬರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ಮೂರ್ನಾಡಿನ ವ್ಯಕ್ತಿಯೊಬ್ಬರಿಗೆ ಸೇರಿದ ಟ್ಯಾಕ್ಸಿಯಲ್ಲಿ ದುಬಾರೆ ಸಾಕಾನೆ ಶಿಬಿರಕ್ಕೆ ತೆರಳುತ್ತಿದ್ದ ವೇಳೆ ಪ್ರವಾಸಿಗರ ವಾಹನಕ್ಕೆ ರಸ್ತೆ ಮಧ್ಯೆ ಒಂಟಿ ಸಲಗ ಎದುರಾಗಿದೆ. ಈ ವೇಳೆ ಸಲಗ ಟ್ಯಾಕ್ಸಿ ಮೇಲೆ ಏಕಾಏಕಿ ದಾಳಿ ನಡೆಸಿದೆ. ದಾಳಿಯಿಂದ ಕಾರಿನ ಹಿಂಬದಿಗೆ ಹಾನಿ ಉಂಟಾಗಿದೆ.
ಚಾಲಕ ಮತ್ತು ಇಬ್ಬರು ಪ್ರವಾಸಿಗರು ಈ ಘಟನೆಯಿಂದ ಹೆದರಿ ಸ್ಥಳದಿಂದ ಓಡಿ ಅಪಾಯದಿಂದ ಪಾರಾಗಿದ್ದಾರೆ.ಘಟನೆಯ ಮಾಹಿತಿ ದೊರೆತ ತಕ್ಷಣ ಮೀನುಕೊಲ್ಲಿ ಮೀಸಲು ಅರಣ್ಯ ಉಪವಲಯ ಅರಣ್ಯ ಅಧಿಕಾರಿ ಸುಬ್ರಾಯ ಮತ್ತು ಸಿಬ್ಬಂದಿ ಹಾಗೂ ರಾಪಿಡ್ ರೆಸ್ಪಾನ್ಸ್ ಟೀಂ (ಆರ್‌ಆರ್‌ಟಿ) ತಂಡದ ಸದಸ್ಯರು ಸ್ಥಳಕ್ಕೆ ತೆರಳಿ ಸಲಗವನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದರು.
ನಂತರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಸೇರಿ ಸಮೀಪದ ಎಸ್ಟೇಟ್ ಮೂಲಕ ಆನೆಕಾಡು ಮೀಸಲು ಅರಣ್ಯಕ್ಕೆ ಸೇರಿಸಲಾಯಿತು ಎಂದು ಉಪವಲಯ ಅರಣ್ಯ ಅಧಿಕಾರಿ ಸುಬ್ರಾಯ ತಿಳಿಸಿದ್ದಾರೆ.ಒಂಟಿಸಲಗ ಓಡಾಟ ಭೀತಿ:
ತಾಲೂಕಿನ ನೆಲ್ಲಿಹುದಿಕೇರಿ ಮೀನುಕೊಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಕೆಲವು ಒಂಟಿ ಸಲಗಗಳು ಓಡಾಡುತ್ತಿರುವುದನ್ನು ಗಮನಿಸಲಾಗಿದೆ. ಅವುಗಳನ್ನು ಆರ್‌ಆರ್‌ಟಿ ಮತ್ತು ಇಲಾಖಾ ಸಿಬ್ಬಂದಿ ಮೂಲಕ ಮೀಸಲು ಅರಣ್ಯಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.ಹಾಡಹಗಲೇ ರಸ್ತೆಯಲ್ಲಿ ಕಾಡಾನೆ ದಾಳಿ ನಡೆಸಿರುವುದು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.