ಸಾರಾಂಶ
ಸಕಲೇಶಪುರ ಸುತ್ತಮುತ್ತ ಮತ್ತೆ ಕಾಡಾನೆಗಳ ಉಪಟಳ ಮಿತಿಮೀರಿದೆ.ಹಲಸುಲಿಗೆ ಗ್ರಾಮದ ದಯಾನಂದ್ ಎಂಬುವರ ಕಾಫಿ ತೋಟ ಹಾಗೂ ಮನೆಯ ಆವರಣಕ್ಕೆ ಬುಧವಾರ ಮಧ್ಯರಾತ್ರಿಯ ವೇಳೆ ಬಂದ ಕಾಡಾನೆಗಳು, ಮನೆಯ ಆವರಣದಲ್ಲಿರುವ ನಾಯಿಶೆಡ್ ಹಾಗೂ ಮನೆಯ ಮುಂದೆ ನಿಲ್ಲಿಸಲಾಗಿದ್ದ ಓಮಿನಿ ಕಾರಿನ ಮೇಲೆ ದಾಳಿ ನಡೆಸಿವೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಹಲಸುಲಿಗೆ ಸುತ್ತಮುತ್ತ ಕಾಡಾನೆಗಳ ಹಾವಳಿ ಮುಂದುವರಿದಿದ್ದು ಕಾಡಾನೆಗಳ ದಾಳಿಯಿಂದ ಕಾಫಿ ಬೆಳೆಗಾರರೋರ್ವರ ನಾಯಿಗೂಡು ಹಾಗೂ ಕಾರು ಹಾನಿಗೀಡಾಗಿರುತ್ತದೆ.ತಾಲೂಕಿನ ಹಲಸುಲಿಗೆ ಗ್ರಾಮದ ದಯಾನಂದ್ ಎಂಬುವರ ಕಾಫಿ ತೋಟ ಹಾಗೂ ಮನೆಯ ಆವರಣಕ್ಕೆ ಬುಧವಾರ ಮಧ್ಯರಾತ್ರಿಯ ವೇಳೆ ಬಂದ ಕಾಡಾನೆಗಳು, ಮನೆಯ ಆವರಣದಲ್ಲಿರುವ ನಾಯಿಶೆಡ್ ಹಾಗೂ ಮನೆಯ ಮುಂದೆ ನಿಲ್ಲಿಸಲಾಗಿದ್ದ ಓಮಿನಿ ಕಾರಿನ ಮೇಲೆ ದಾಳಿ ನಡೆಸಿವೆ. ಇದರಿಂದ ಕಾರಿಗೆ ತುಸು ಹಾನಿಯಾಗಿದ್ದು ನಾಯಿಶೆಡ್ ಬಹುತೇಕ ಜಖಂಗೊಂಡಿದೆ. ಇದೇ ಸಂದರ್ಭದಲ್ಲಿ ಗ್ರಾಮದ ರಮೇಶ್ ಎಂಬುವರ ಕಾರಿನ ಮೇಲೂ ಕಾಡಾನೆಗಳು ದಾಳಿ ನಡೆಸಿವೆ.
ರಾತ್ರಿಯಿಡೀ ಕಾಡಾನೆಗಳು ಮನೆಯ ಆವರಣದಲ್ಲೆ ಇದ್ದಿದ್ದರಿಂದ ಮನೆಯವರು ಭಯದಲ್ಲೆ ರಾತ್ರಿ ಕಳೆದಿದ್ದಾರೆ. ಹಲಸುಲಿಗೆ ಸುತ್ತಮುತ್ತ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು ಅಪಾರ ಪ್ರಮಾಣದ ಕಾಫಿ, ಮೆಣಸು, ಭತ್ತದ ಬೆಳೆಗಳು ಕಾಡಾನೆಗಳ ದಾಂಧಲೆಯಿಂದ ಹಾಳಾಗಿದೆ. ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮೀತಿಮೀರಿ ಹೋಗಿದ್ದು, ಕಾಫಿ ತೋಟಗಳ ಮಾಲೀಕರು ಹಾಗೂ ಕಾರ್ಮಿಕರು ಕಾಫಿ ತೋಟಗಳಿಗೆ ತೆರಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.೧೧ಎಸ್.ಕೆ.ಪಿ.ಪಿ ೩