ನರಸಿಂಹರಾಜಪುರ: ತಾಲೂಕಿನ ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ಮಡಬೂರು, ಕೆ.ಕಣಬೂರು, ಸಾತ್ಕೋಳಿ, ದೊಡ್ಡಿನ ತಲೆ, ಕುಸುಬೂರು, ಚಿಬ್ಬಳ್ಳಿ, ಮುಂಡಗೋಡು ಭಾಗದ ಅರಣ್ಯದಲ್ಲಿ ಕಾಡಾನೆಗಳ ಸಂಚಾರ ತೀವ್ರವಾದ ಹಿನ್ನೆಲೆ ಸುತ್ತ ಮುತ್ತಲ ರೈತರು ಒಣ ಸೌದೆ ತರಲು ಕಾಡಿಗೆ ಹೋಗದಂತೆ ಅರಣ್ಯ ಇಲಾಖೆ ಹಾಗೂ ಆನೆ ಕಾರ್ಯಪಡೆ ಮೈಕ್‌ ಮೂಲಕ ಎಚ್ಚರಿಕೆ ನೀಡಿದೆ. ಈ ಭಾಗದಲ್ಲಿ 16 ಕಾಡಾನೆಗಳು ಮರಿಯೊಂದಿಗೆ ಸುತ್ತಾಡುತ್ತಿದ್ದು 10 ಕಾಡಾನೆಗಳ ಹಿಂಡು ಮುತ್ತಿನಕೊಪ್ಪದಲ್ಲಿ, 6 ಕಾಡಾನೆಗಳು ಮುದುಕುರು ಅರಣ್ಯದಲ್ಲಿ ಸೇರಿಕೊಂಡಿವೆ. ಈ ಹಿಂಡಿನಲ್ಲಿ ಮರಿ ಇರುವುದರಿಂದ ಆನೆಗಳು ಹೆಚ್ಚು ಅಪಾಯ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

-- ಬಾಕ್ಸ್‌--

ಭದ್ರೆ ಹಿನ್ನೀರು ದಾಟಿ ಬರುತ್ತಿರುವ ಕಾಡಾನೆಗಳು

ಭದ್ರಾ ಹುಲಿ ಅರಣ್ಯ ಪ್ರದೇಶದಲ್ಲಿದ್ದ ಕಾಡಾನೆಗಳು ಮುದುಕೂರು ಭಾಗದ ಭದ್ರಾ ಹಿನ್ನೀರು ಕಡಿಮೆಯಾದ ಕಾರಣ ನೀರು ದಾಟಿ ಆರಂಬಳ್ಳಿ ಅರಣ್ಯ ಪ್ರದೇಶಕ್ಕೆ ಬರುತ್ತಿವೆ. ಅರಣ್ಯ ಇಲಾಖೆ ಹಾಗೂ ಆನೆ ನಿಗ್ರಹ ಪಡೆ ಕಾಡಾನೆಗಳನ್ನು ಭದ್ರಾ ಹಿನ್ನೀರು ದಾಟಿಸಿ ಬಂದರೂ ಮತ್ತೆ ವಾಪಾಸಾಗುತ್ತಿವೆ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.

ಸೋಲಾರ್ ಟೆಂಟಿಕಲ್ ಬೇಲಿ ನಿರ್ಮಾಣ: ಭದ್ರಾ ಹಿನ್ನೀರಿನಿಂದ ಕಾಡಾನೆಗಳು ಬಾರದಂತೆ 20 ಕಿ.ಮೀ. ಸೋಲಾರ್ ಟೆಂಟಿಕಲ್ ಬೇಲಿಗೆ ಜಾಗ ಕ್ಲಿಯರ್ ಮಾಡುತ್ತಿದ್ದಾರೆ. ಟೆಂಡರ್ ಪಡೆದ ಕಂಪನಿಯವರು ಬೇಲಿಯನ್ನು ಸೂಸಲವಾನಿ,ಸಾತ್ಕೋಳಿ, ಹಾಗಲಮನೆ, ನೆಲಗದ್ದೆ ಬಾಗದಲ್ಲಿ ನಿರ್ಮಿಸಲಿದ್ದು.ಮುತ್ತಿನಕೊಪ್ಪ, ಮಡಬೂರು, ಕುಸುಬೂರು ಭಾಗದಲ್ಲಿ ಈಗಾಗಲೇ 5 ಕಿ.ಮೀ. ಆನೆ ಕಂದಕ ಮಾಡಲಾಗಿದೆ ಎಂದು ಅರಣ್ಯ ಇಲಾಖೆಯವರು ಮಾಹಿತಿ ನೀಡಿದ್ದಾರೆ.