ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ತುಮುಲ್ ಅಧ್ಯಕ್ಷನಾಗಿ ನನ್ನ ಅವಧಿಯಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲದಂತೆ ಸಮರ್ಥವಾಗಿ ಹಾಲು ಉತ್ಪಾದಕ ರೈತರ ಪರ ಕೆಲಸ ಮಾಡಿದ್ದೇನೆ. ಇದು ಜಿಲ್ಲೆಯ ಹಾಲು ಉತ್ಪಾದಕ ನೌಕರರಿಗೆ ಗೊತ್ತಿದೆ. ಆದರೆ ನನ್ನ ವಿರುದ್ಧ ಮನಸ್ಸಿಗೆ ನೋವಾಗುವಂತೆ ಇಲ್ಲಸಲ್ಲದ ಆರೋಪ ಮಾಡಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಒಕ್ಕೂಟದಲ್ಲಿ ಇದ್ದಷ್ಟು ದಿವಸ ಒಕ್ಕೂಟಕ್ಕೆ ಲಾಭ ಮಾಡಿದ್ದೇನೆ. ಅವರ ಅವಧಿಯಲ್ಲಿ ಬಟವಾಡೆ ಕೊಡಲೂ ಹಣವಿರಲಿಲ್ಲ, ಹಾಲಿನ ಟ್ಯಾಂಕರ್‌ಗೆ ಉಪ್ಪು, ನೀರು, ಸಕ್ಕರೆ ಬೆರಸಿದ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ನಾಗೇಶ ಬಾಬು ನನ್ನ ವಿರುದ್ಧ ಹಗುರವಾಗಿ ಮಾತನಾಡಬಾರದು. ನನಗಾದ ನೋವನ್ನು ತಾಲೂಕಿನ ಜನತೆಗೆ ತಿಳಿಸಿದ್ದೇನೆ ಅಷ್ಟೇ, ಸಚಿವರ ಬಗ್ಗೆ ನಾನು ಒಂದು ಮಾತೂ ಆಡಿಲ್ಲ, ಶಾಸಕರ ಪರ ಮಾತನಾಡಿದರೆ ಕಿರೀಟ ಇಡುತ್ತಾರೆ ಎಂಬ ಭ್ರಮೆಯಲ್ಲಿ ಹಾಲಿನ ಕಳ್ಳ ಎಂದು ನನ್ನನ್ನು ಜರಿದಿರುವುದು ಸರಿಯಲ್ಲ, ಇವರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು ,ಇವರು ಪ್ರಾರಂಭಿಸಿದ ನಂದಿನಿ ಪತ್ತಿನ ಸಹಕಾರ ಸಂಘ ಇಂದು ಏನಾಗಿದೆ? ಬಡವರು ಲಕ್ಷಾಂತರ ರು. ಡಿಪಾಸಿಟ್ ಇಟ್ಟಿದ್ದರೂ ಭೂತದ ಬಾಯಲ್ಲಿ ಭಗವದ್ಗೀತೆ ಎಂದು ಅವರು ಹೇಳಿದ್ದು, ಅವರೇ ದೊಡ್ಡ ಭೂತ ಎಂದು ತಿರುಗೇಟು ನೀಡಿದರು.
ಕೆ.ಎನ್. ರಾಜಣ್ಣ ಅವರೇ ನನ್ನ ರಾಜಕೀಯ ಗುರು ಎಂದು ಹೇಳಿದ್ದರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಹೌದು! ರಾಜಣ್ಣನವರೇ ನನ್ನ ರಾಜಕೀಯ ಗುರುಗಳು, ನಾಗೇಶ್ ಬಾಬು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರಿಂದ ನಾನು ಹೊರಗೆ ಬಂದೆ, ನಾನು ಯಾರ ಬೆನ್ನಿಗೂ ಚೂರಿ ಹಾಕಿಲ್ಲ ಎಂದರು.ಇನ್ನೂ ಕೆಎಂಎಫ್ ನಾಮಿನಿ ನಿರ್ದೇಶಕನನ್ನಾಗಿ ಏನೂ ಗೊತ್ತಿಲ್ಲದ ಕಾಂತರಾಜುನನ್ನು ರಾಜ್ಯಕ್ಕೆ ಕಳುಹಿಸಲಾಗಿದೆ. ಈತ ಸಂಘಕ್ಕೆ ಎಂದು ಹಾಲು ಹಾಕಿಲ್ಲ, ರಾತ್ರೋರಾತ್ರಿ ಮರಳು ಕದ್ದು ಮಾರಾಟ ಮಾಡಿ ಜೀವನ ಮಾಡಿದವರು ಇಂದು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ, ಇವರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಮೈದನಹಳ್ಳಿ ಕಾಂತರಾಜು ವಿರುದ್ಧ ಕಿಡಿಕಾರಿದರು.
ಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜು, ಪುರಸಭೆ ಸದಸ್ಯ ಎಂ.ಆರ್.ಜಗನ್ನಾಥ್, ಮುಖಂಡರಾದ ಎಸ್.ಡಿ.ಕೃಷ್ಣಪ್ಪ, ಸಿದ್ದಪ್ಪ, ದೊಡ್ಡಯ್ಯ, ನಾರಾಯಣ್, ಸಿಡದರಗಲ್ಲು ಶ್ರೀನಿವಾಸ್, ನಾಗಭೂಷಣ್ ಅನೇಕರಿದ್ದರು.