ಫ್ಯಾನ್‌ ವಾರ್‌ಗಳಿಂದ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳಿಗೂ ರಕ್ಷಣೆ ಇಲ್ಲ । ಮಸೂದೆ ಸುಧಾರಣೆಯಾದರೆ ಮೃಗಗಳನ್ನು ಹೊರಗಟ್ಟಬಹುದು

- ಫ್ಯಾನ್‌ ವಾರ್‌ಗಳಿಂದ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳಿಗೂ ರಕ್ಷಣೆ ಇಲ್ಲ । ಮಸೂದೆ ಸುಧಾರಣೆಯಾದರೆ ಮೃಗಗಳನ್ನು ಹೊರಗಟ್ಟಬಹುದು

---

ಪವರ್ ಪಾಯಿಂಟ್‌

--

ಪ್ರಾಜ್ಞ ಕೆ.ಶರವೇಗವಾಗಿ ಮೊಬೈಲ್‌ ಫೋನ್‌ಗಳನ್ನು ಸ್ಕ್ರೋಲ್‌ ಮಾಡುವ ಇವತ್ತಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಎಂಬುದು ನಮ್ಮನ್ನು ಪರಸ್ಪರ ಬೆಸೆಯುವ ವೇದಿಕೆಯಾಗಬೇಕಿತ್ತು. ದುರ್ದೈವವೆಂದರೆ, ಅದು ಈಗ ವಿಷ ಉಗುಳುವ ಪೆಡಂಭೂತವಾಗಿಬಿಟ್ಟಿದೆ. ದ್ವೇಷದ ಕಮೆಂಟುಗಳು ಹಾಗೂ ಅಶ್ಲೀಲ, ಅಸಭ್ಯ ಮಾಹಿತಿಗಳು ದೊಡ್ಡ ಪಿಡುಗಾಗಿದ್ದು, ದಿನದಿಂದ ದಿನಕ್ಕೆ ಅವು ಮತ್ತಷ್ಟು ಕೊಳಕಾಗುತ್ತಲೇ ಸಾಗಿವೆ. ಪರದೆಯ ಹಿಂದೆ ಅವಿತು ಕೂರುವ ವ್ಯಕ್ತಿಗಳು ಊಹಿಸಿಕೊಳ್ಳಲೂ ಆಗದಂತಹ ವಿಕಾರಗಳಿಗೆ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಆರಂಭವಾಗಿರುವ ಇಬ್ಬರು ನಟರ ಅಭಿಮಾನಿಗಳ ನಡುವಣ ವಿಕೃತ ಸಮರವನ್ನೇ ನೋಡಿ. ಇದು ಮೇಲ್ನೋಟಕ್ಕೆ ಕಾಣುತ್ತಿರುವುದಕ್ಕಿಂತಲೂ ಆಳವಾದ ಸಮಸ್ಯೆ. ಕಳೆದ ವರ್ಷ ರೇಣುಕಾಸ್ವಾಮಿಯ ಭಯಾನಕ ಹತ್ಯೆ ಪ್ರಕರಣ ನೆನಪಿದೆಯೇ? ಆತ ಚಿತ್ರನಟ ದರ್ಶನ್‌ ಅವರ ಅಭಿಮಾನಿ. ಚಿತ್ರದುರ್ಗದವನು. ತನ್ನ ನೆಚ್ಚಿನ ನಟನ ಅತ್ಯಾಪ್ತ ಗೆಳತಿಯಾಗಿದ್ದ ಪವಿತ್ರಾಗೌಡಗೆ ಸಾಮಾಜಿಕ ಜಾಲತಾಣದ ಮೂಲಕ ತಿರುಚಿದ ಖಾಸಗಿ ಫೋಟೋಗಳನ್ನು ಕಳುಹಿಸಿ ಎಲ್ಲೆ ಮೀರಿದ್ದ. ಒಂದು ಅಸಭ್ಯ ಕಮೆಂಟ್‌ನಿಂದ ಆರಂಭವಾದ ಸಂಗತಿ ದುರಂತದಲ್ಲಿ ಅಂತ್ಯವಾಯಿತು. ದರ್ಶನ್ ಹಾಗೂ ಸಹಚರರು ರೇಣುಕಾಸ್ವಾಮಿಯನ್ನು ಅಪಹರಿಸಿದರು. ಸಿನಿಮೀಯ ಶೈಲಿಯಲ್ಲಿ ಭೀಕರ ಹಿಂಸೆ ನೀಡಿ ಆತನನ್ನು ಕೊಂದುಬಿಟ್ಟರು. ಅದು ಅಲ್ಲಿಗೇ ನಿಲ್ಲಿಲ್ಲ. ದರ್ಶನ್‌ ಫ್ಯಾನ್‌ಗಳು ನಟಿ ರಮ್ಯಾ ಮೇಲೆ ಕೋಪ ಉಗುಳಿದರು. ಬೈಗುಳಗಳ ಪ್ರವಾಹವನ್ನೇ ಹರಿಸಿದರು. ಈಗ ಆ ಸರಣಿ ತಿರುವುಮುರುವಾಗಿದೆ. ದರ್ಶನ್‌ ಅವರ ಎದುರಾಳಿ ನಟ ಕಿಚ್ಚ ಸುದೀಪ್‌ ಅವರ ಅಭಿಮಾನಿಗಳು ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಕೊನೆಗೆ ವಿಜಯಲಕ್ಷ್ಮಿ ಅವರು 15 ಇನ್‌ಸ್ಟಾಗ್ರಾಂ ಖಾತೆಗಳ ವಿರುದ್ಧ ಪೊಲೀಸ್‌ ದೂರು ಸಲ್ಲಿಸುವಂತಾಗಿದೆ. ಈ ಕೊಳಕಿನ ಹಿಂದೆ ಇರುವವರೆಲ್ಲಾ ಸುದೀಪ್‌ ಅವರ ಕಟ್ಟಾ ಅಭಿಮಾನಿಗಳು.

ಕೋಟ್ಯಂತರ ಮಂದಿಗೆ ಆರಾಧ್ಯ ದೈವದಂತೆಯೇ ಇದ್ದರೂ ಈ ಚಿತ್ರ ತಾರೆಯರು ಹಾಗೂ ಅವರ ಕುಟುಂಬಗಳು ಕೂಡ ಸುರಕ್ಷಿತವಲ್ಲ. ಈ ಹುಚ್ಚಾಟದಿಂದ ಸೆಲೆಬ್ರಿಟಿಗಳೇ ತಪ್ಪಿಸಿಕೊಳ್ಳಲು ಆಗುತ್ತಿಲ್ಲ ಎಂದಾದರೆ, ಶ್ರೀಸಾಮಾನ್ಯನಿಗೆ ಯಾವ ಅವಕಾಶ ಉಳಿದಿದೆ ಹೇಳಿ? ಮೈಸೂರಿನ ಒಬ್ಬ ಶಾಲಾ ಶಿಕ್ಷಕ ಅಥವಾ ಬೆಳಗಾವಿಯ ಒಬ್ಬ ರೈತನಿಗೆ ಇದೇ ರೀತಿ ಅಶ್ಲೀಲ ಪದಗಳನ್ನು ಬಳಸಿ ಟ್ರೋಲ್‌ ಮಾಡುವುದನ್ನು ಊಹಿಸಿಕೊಳ್ಳಿ. ಅವರ ಜೀವನವೇ ನುಚ್ಚು ನೂರಾಗುತ್ತದೆ. ಕೆಲಸ ಹೋಗುತ್ತದೆ, ಕುಟುಂಬಗಳು ಒಡೆಯುತ್ತವೆ, ಗೌರವ ಹಾಳಾಗುತ್ತದೆ. ಆನ್‌ಲೈನ್‌ ಮೂಲಕ ನಿರಂತರವಾಗಿ ದ್ವೇಷ ಕಾರಿಸಿಕೊಂಡು ಹಲವರು ತಮ್ಮ ಜೀವವನ್ನೇ ತ್ಯಾಗ ಮಾಡಿದ ನಿದರ್ಶನಗಳು ಇವೆ.

ಚಿತ್ರೋದ್ಯಮಕ್ಕಷ್ಟೇ ಇದು ಸೀಮಿತವಲ್ಲ

ಕೆಲ ತಿಂಗಳ ಹಿಂದಿನ ಧರ್ಮಸ್ಥಳ ವಿವಾದವನ್ನೇ ನೋಡಿ. ಅನ್ಯಾಯದ ವಿರುದ್ಧ ಹೋರಾಡಲು ಜನರಿಗೆ ಮಾರ್ಗ ಇತ್ತು. ಆದಾಗ್ಯೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ। ವೀರೇಂದ್ರ ಹೆಗ್ಗಡೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಅಸಂಸದೀಯ ನಿಂದನೆಯನ್ನು ಎದುರಿಸಬೇಕಾಯಿತು. ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಮುಚ್ಚಿ ಹಾಕಲು ಧರ್ಮಸ್ಥಳ ಗ್ರಾಮದಲ್ಲಿ ಹೆಣಗಳನ್ನು ಸಾಮೂಹಿಕವಾಗಿ ಹೂಳಲಾಗಿದೆ ಎಂಬ ಆರೋಪ ಬೆಂಕಿ- ಬಿರುಗಾಳಿಗೆ ಕಾರಣವಾಯಿತು. ಯೂಟ್ಯೂಬ್‌ ಚಾನಲ್‌ಗಳು ಹಾಗೂ ಟ್ವೀಟರ್‌ ಹ್ಯಾಂಡಲ್‌ಗಳಲ್ಲಿ ಮಾನನಷ್ಟ ಪದಗಳು, ಸುಳ್ಳುಗಳನ್ನು ಉಗುಳಲಾಯಿತು. ಭ್ರಷ್ಟ, ಕ್ರಿಮಿನಲ್‌, ಚಿಟ್‌ಫಂಡ್‌ ವಂಚಕ ಪದಗಳಿಂದ ಕಾಮಾಂಧವರೆಗೆ ಎಲ್ಲ ಪದಗಳ ಪ್ರಯೋಗವನ್ನೂ ನಡೆಸಲಾಯಿತು. ಕೊನೆಗೆ ಕೋರ್ಟ್‌ಗಳು ಮಧ್ಯಪ್ರವೇಶಿಸಿ, ಅದಕ್ಕೆ ತಡೆಯೊಡ್ಡಬೇಕಾಯಿತು. ಅಷ್ಟರಲ್ಲಿ ಆಗಬೇಕಾಗಿದ್ದ ಹಾನಿ ಆಗಿ ಹೋಗಿತ್ತು. ಮತ್ತೊಂದು ಕಡೆ ಧರ್ಮಸ್ಥಳ ಭಕ್ತರು ಕೂಡ ಸೌಜನ್ಯ ಪರ ಹೋರಾಟಗಾರರ ಕುರಿತು ಅಸಂಸದೀಯ ಪದಗಳನ್ನು ಬಳಸಿ ಯುದ್ಧ ಸಾರಿದರು. ಸಂವಾದಕ್ಕೆ ಬಳಸಬೇಕಾಗಿದ್ದ ವೇದಿಕೆಯನ್ನು ಉಪಯೋಗಿಸಿ ನಿಂದನೆಗಳ ಸುರಿಮಳೆ ಸುರಿಸುವ ಹಾಗೂ ಒಳ್ಳೆಯ ಹೆಸರುಗಳಿಗೆ ಮಸಿ ಬಳಿಯುವ ಕೃತ್ಯದ ಮೂಲಕ ಕರ್ನಾಟಕದ ನಾಗರಿಕ ಸಮಾಜವನ್ನು ತೀರಾ ಕೆಳಮಟ್ಟಕ್ಕೆ ಇಳಿಸಲಾಯಿತು.

ಇದು ನಾಗರಿಕ ಸಮಾಜ, ಪದಗಳ ಬಗ್ಗೆ ಎಚ್ಚರಡಾ। ಹೆಗ್ಗಡೆ ವಿರುದ್ಧ ಹೋರಾಡಲು, ಸೌಜನ್ಯಗೆ ನ್ಯಾಯ ಕೇಳಲು ಅವರು ಬಯಸಿದ್ದರೆ, ಅದು ಅವರ ಹಕ್ಕು. ಅದನ್ನು ಸಾಮಾಜಿಕ ಜಾಲತಾಣದಲ್ಲೂ ಕಾನೂನು ಮಾರ್ಗದಲ್ಲೇ ಮಾಡಬಹುದಿತ್ತು.

ಮತ್ತೆ ಕಾನೂನು? ಅದು ಕುಂಭಕರ್ಣನಿದ್ದಂತೆ. ಅಧಿಕಾರದಲ್ಲಿದ್ದವರಿಗೆ ಸಮಸ್ಯೆಯಾದಾಗ ಮಾತ್ರ ಎಚ್ಚರಗೊಳ್ಳುತ್ತದೆ. ಪ್ರಧಾನಿ ನರೇಂದ್ರ ಮೋದಿ ಅಥವಾ ಸೋನಿಯಾ ಗಾಂಧಿ ಟ್ರೋಲ್‌ಗಳಿಗೆ ಆಹಾರವಾದಾಗ ಅಥವಾ ನಮ್ಮ ಮುಖ್ಯಮಂತ್ರಿಗಳು ಟಾರ್ಗೆಟ್‌ ಆದಾಗ ಪೊಲೀಸರು ತ್ವರಿತವಾಗಿ ಕಾರ್ಯಪ್ರವೃತ್ತವಾಗುತ್ತಾರೆ. ಬಂಧನಗಳನ್ನು ಮಾಡುತ್ತಾರೆ. ಹೆಡ್‌ಲೈನ್‌ಗಳಲ್ಲಿ ಸ್ಥಾನ ಪಡೆಯುತ್ತಾರೆ. ತಪ್ಪಿತಸ್ಥರು ಕೆಲವು ದಿನಗಳ ಬಳಿಕ ಬಿಡುಗಡೆಯಾಗುತ್ತಾರೆಂಬುದು ಬೇರೆ ಮಾತು. ಆದರೆ ಶ್ರೀಸಾಮಾನ್ಯರಿಗೆ ಇಂತಹ ಪ್ರಕರಣಗಳಿಂದ ಕೊನೆಯೇ ಇರುವುದಿಲ್ಲ. ಜಾತಿ ನಿಂದನೆ ಮಾಡಿದರು ಎಂದು ಹುಬ್ಬಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು, ಧಿರಿಸಿನ ಕಾರಣಕ್ಕೆ ಮಂಗಳೂರಿನಲ್ಲಿ ಬಾಲಕಿಯರ ಮೇಲೆ ದೌರ್ಜನ್ಯ ಮಾಡುವಂತಹ ಕೃತ್ಯಗಳು ಮುಂದುವರಿಯುತ್ತಲೇ ಇರುತ್ತವೆ. ಭಿನ್ನದನಿ, ಪ್ರತಿಭಟನೆ ಹಾಗೂ ಟೀಕೆಗಳು ನಮ್ಮ ಪ್ರಜಾಪ್ರಭುತ್ವದಲ್ಲಿ ಜನರಿಗೆ ಸಿಕ್ಕಿರುವ ಹಕ್ಕುಗಳು. ಆದರೆ ಅವರು ನಾಗರಿಕವಾಗಿರಬೇಕು. ನಾಗರಿಕ ಸಮಾಜದಲ್ಲಿ ಸಂಸದೀಯ ಪದಗಳನ್ನು ಬಳಸಬೇಕೆ ಹೊರತು ಸಭ್ಯತೆಯ ಎಲ್ಲ ಮಿತಿಯನ್ನೂ ದಾಟಿದ ಗಟಾರದ ರೀತಿಯ ಕೊಳಕನ್ನಲ್ಲ.ಫೇಸ್‌ಬುಕ್‌, ವಾಟ್ಸಾಪ್‌ ಹಾಗೂ ಎಕ್ಸ್‌ನಂತಹ ದೈತ್ಯ ಸಾಮಾಜಿಕ ಜಾಲತಾಣ ಸಂಸ್ಥೆಗಳು ವಾಕ್‌ ಸ್ವಾತಂತ್ರ್ಯವನ್ನು ತಮ್ಮ ರಕ್ಷಣಾ ಕವಚವನ್ನಾಗಿ ಮಾಡಿಕೊಂಡಿವೆ. ದ್ವೇಷವನ್ನೇ ಸರಕಾಗಿಸಿಕೊಂಡಿವೆ. ಹೆಚ್ಚು ಹೆಚ್ಚು ಕ್ಲಿಕ್‌ಗಳನ್ನು ಗಿಟ್ಟಿಸಿಕೊಳ್ಳಲು, ತನ್ಮೂಲಕ ಜಾಹೀರಾತು, ಹಣ ಗಳಿಸಲು ‘ಆಲ್ಗರಿದಂ’ಗಳು ವಿವಾದಾತ್ಮಕ ಪೋಸ್ಟ್‌ಗಳನ್ನು ಬಳಕೆದಾರರಿಗೆ ದಬ್ಬುತ್ತವೆ. ಇದು ಅವರ ವ್ಯವಹಾರದ ಸ್ವಭಾವ. ಇದು ತಂತ್ರಜ್ಞಾನದ ಅಡ್ಡಪರಿಣಾಮ ಎಂದು ಆ ಕಂಪನಿಗಳು ಹೇಳಿಕೊಳ್ಳುತ್ತವೆ. ಆದರೆ ಹೊಣೆಗಾರಿಕೆ ಎಲ್ಲಿದೆ? 5 ಕೋಟಿ ಇಂಟರ್ನೆಟ್‌ ಬಳಕೆದಾರರು ಇರುವಂತಹ ಕರ್ನಾಟಕದಂತಹ ರಾಜ್ಯದಲ್ಲಿ ನಿಯಂತ್ರಣವಿಲ್ಲದ ಈ ಸ್ವಾತಂತ್ರ್ಯ ಯುವಕರಿಗೆ ವಿಷವುಣ್ಣಿಸಿ, ಜಾತಿ, ಧರ್ಮ ಹಾಗೂ ಭಾಷೆಯ ಆಧಾರದಲ್ಲಿ ಸಮುದಾಯಗಳನ್ನು ವಿಭಜಿಸುತ್ತಿದೆ.

ಕರ್ನಾಟಕದಲ್ಲಿ ದ್ವೇಷ ಭಾಷಣ ಮಸೂದೆ

ಈ ಹಿನ್ನೆಲೆಯಲ್ಲಿ ನೋಡಿದರೆ, ಕರ್ನಾಟಕ ಸರ್ಕಾರ ಡಿ.18ರಂದು ಅಂಗೀಕರಿಸಿರುವ ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧಗಳ (ತಡೆ) ವಿಧೇಯಕ-2025 ಒಂದು ಆಶಾಕಿರಣವಾಗಿ ಕಾಣುತ್ತದೆ. ಜಾತಿ, ಧರ್ಮ, ಲಿಂಗ ಅಥವಾ ಸಮುದಾಯಗಳ ಆಧಾರದಲ್ಲಿ ಸೌಹಾರ್ದತೆಗೆ ಭಂಗ ತರುವುದು, ವೈರತ್ವದ ಮೂಲಕ ದ್ವೇಷ ಸಾರುವ ಬುಡಕ್ಕೇ ಕೈ ಹಾಕುತ್ತದೆ. ಇಂತಹದ್ದು ಇದೇ ಮೊದಲು. ತಪ್ಪು ಮಾಡಿದವರು ಏಳು ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರು. ದಂಡಕ್ಕೆ ಗುರಿಯಾಗಬೇಕಾಗುತ್ತದೆ. ಗಂಭೀರ ಪ್ರಕರಣಗಳಲ್ಲಿ ಇದು ಜಾಮೀನುರಹಿತವಾಗಿದೆ.ಓಹೋ ಎಂದು ನೀವು ಸಂತಸಪಡಬಹುದು! ಕೊನೆಗೂ ಕೊಳೆ ತೆಗೆಯಲು ಒಂದು ಸಾಧನ ಸಿಕ್ಕಿದೆ ಎಂದುಕೊಳ್ಳಬಹುದು. ಆದರೆ ಈ ಮಸೂದೆಯಲ್ಲಿ ಮುಳ್ಳುಗಳು ಕೂಡ ಇವೆ. ಅವು ಅಮಾಯಕರನ್ನೂ ಚುಚ್ಚಬಲ್ಲವು. ಅದೇ ನಿಜವಾದ ಚಿಂತೆ. ಆರಂಭಿಕ ಹಂತಗಳಲ್ಲಿ ನ್ಯಾಯಾಲಯಗಳನ್ನೂ ಬದಿಗೆ ಸರಿಸಿ ಸರ್ಕಾರಿ ಅಧಿಕಾರಿಗಳಿಗೆ ಭರಪೂರ ವಿವೇಚನಾಧಿಕಾರ ದಯಪಾಲಿಸಲಾಗಿದೆ. ಜಿದ್ದಾಜಿದ್ದಿ ರಾಜಕೀಯ ಇರುವಂತಹ ಕರ್ನಾಟಕದಂತಹ ಸ್ಥಳಗಳಲ್ಲಿ ಇದು ದುರ್ಬಳಕೆಗೆ ಅವಕಾಶ ಕೊಟ್ಟಂತೆ. ಸಚಿವರು, ಶಾಸಕರು ಹಾಗೂ ದೊಡ್ಡ ದೊಡ್ಡ ವ್ಯಕ್ತಿಗಳಂತಹ ಶ್ರೀಮಂತರು, ಪ್ರಭಾವಿಗಳು ತಮ್ಮನ್ನು ಟೀಕಿಸುವವರ ವಿರುದ್ಧ ಈ ಮಸೂದೆಯನ್ನು ಅಸ್ತ್ರ ಮಾಡಿಕೊಳ್ಳಬಹುದು. ದೂರು ಕೊಟ್ಟು, ಎಫ್‌ಐಆರ್‌ ದಾಖಲಾಗುವಂತೆ ಮಾಡಿ ತಮ್ಮ ವಿರೋಧಿಗಳು ಅವರ ಅಮಾಯಕತೆ ಸಾಬೀತುಪಡಿಸುವ ಮುನ್ನವೇ ಜೈಲಿನಲ್ಲಿ ಕೊಳೆಯುವುದನ್ನು ನೋಡಬಹುದು.

ದ್ವೇಷ ಹತ್ತಿಕ್ಕಬೇಕು, ಭಿನ್ನದನಿಯನ್ನಲ್ಲ

ಏಳು ವರ್ಷಗಳ ಕಾಲ ಜೈಲು, ಜಾಮೀನುರಹಿತ ಕೇಸುಗಳು ಕೊಲೆಯಂತಹ ಹೇಯ ಅಪರಾಧಗಳಿಗೇ ಹೊರತು ನೋವುಂಟು ಮಾಡುವ ಪದಗಳಿಗೆ ಅಲ್ಲ.

ಇದೊಂದು ಕರಾಳ ಕಾನೂನು, ವಾಕ್‌ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ ಎಂದು ಬಿಜೆಪಿ ಹರಿಹಾಯ್ದಿದೆ. ಆ ವಾದದಲ್ಲಿ ತಪ್ಪಿಲ್ಲ. ಏಕೆಂದರೆ, ಭಿನ್ನ ದನಿಯನ್ನೂ ಧ್ವಂಸಗೊಳಿಸುವ ದೊಡ್ಡ ಸುತ್ತಿಗೆಯ ಮೂಲಕ ನಾವು ದ್ವೇಷದ ವಿರುದ್ಧ ಹೋರಾಡಲಾಗದು.ಏನನ್ನೋ ತಡೆಯಲು ಹೋಗಿ ಮೌಲ್ಯಯುತವಾಗಿರುವುದನ್ನು ನಾವು ಕಳೆದುಕೊಳ್ಳುವುದು ಬೇಡ. ಸಾಮಾಜಿಕ ಜಾಲತಾಣದ ಪಿಡುಗಿನ ವಿರುದ್ಧ ಬಲಿಷ್ಠ ಶಕ್ತಿ ತುರ್ತಾಗಿ ಬೇಕು. ನಮ್ಮ ವೈವಿಧ್ಯಮಯ ರಾಜ್ಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾಡುವ ಒಂದೇ ಒಂದು ತಪ್ಪು ಪೋಸ್ಟ್‌ ಕೂಡ ಕೊಡಗಿನ ಬೆಟ್ಟಗಳಿಂದ ಕಲ್ಯಾಣ ಕರ್ನಾಟಕದ ಬಯಲಿನವರೆಗೂ ಗಲಭೆಗಳನ್ನು ಸೃಷ್ಟಿಸಬಹುದು. ಹೀಗಾಗಿ ಈ ಮಸೂದೆಯನ್ನು ಸರಿಪಡಿಸಬೇಕು. ದುರ್ಬಳಕೆಯಾಗದಂತೆ ಸುರಕ್ಷತೆ ಒದಗಿಸಬೇಕು. ಮೊದಲ ಬಾರಿ ತಪ್ಪು ಮಾಡಿದವರಿಗೆ ಜಾಮೀನು ಸಿಗುವಂತೆ ಇರಬೇಕು. ದೂರುಗಳ ಪರಿಶೀಲನೆಗೆ ಸ್ವತಂತ್ರ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಬೇಕು. ದೂರುಗಳ ವಿರುದ್ಧ ತ್ವರಿತವಾಗಿ ಕ್ರಮ ತೆಗೆದುಕೊಳ್ಳುವಂತೆ ಸಾಮಾಜಿಕ ಜಾಲತಾಣ ವೇದಿಕೆಗಳಿಗೂ ಒತ್ತಡ ಹೇರಬೇಕು. ದ್ವೇಷ ಕಂಡುಬಂದ ತಕ್ಷಣ ಡಿಲೀಟ್‌ ಮಾಡುವಂತಿರಬೇಕು. ವೈರಲ್‌ ಆದ ಬಳಿಕವಲ್ಲ.

ವಿಧಾನಸೌಧದ ಮಾದರಿಗಳನ್ನು ಹೊಂದಿರುವ ಕರ್ನಾಟಕ ಇದಕ್ಕೆ ದಾರಿ ತೋರಿಸಬಹುದು. ಸಾಮಾಜಿಕ ಜಾಲತಾಣ ವಿವೇಕಯುತ ದನಿಗಳಿಗೆ ಜಾಗ ಕಲ್ಪಿಸಬೇಕೇ ಹೊರತು ಮೃಗಗಳಿಗೆ ಯುದ್ಧಭೂಮಿಯಾಗಬಾರದು. ದ್ವೇಷ ಭಾಷಣ ತಡೆ ಮಸೂದೆ ಕಾಯ್ದೆಯಾಗುವ ಮುನ್ನವೇ ಶಾಸಕರು ವಿಧೇಯಕವನ್ನು ಸರಿಪಡಿಸಬೇಕು. ಪಾರದರ್ಶಕತೆ ಹಾಗೂ ಸಮಾನತೆಯ ಮೂಲಕ ಶಿಸ್ತು ತರಬೇಕು. ಹಾಗಾದಾಗ ಮಾತ್ರವೇ ನಾವು ಭಯವಿಲ್ಲದೆ ಸಾಮಾಜಿಕ ಜಾಲತಾಣಗಳನ್ನು ಸ್ಕ್ರೋಲ್‌ ಮಾಡಬಹುದು. ಮುಜುಗರಪಡದೆ ಅಭಿಪ್ರಾಯ ವ್ಯಕ್ತಪಡಿಸಬಹುದು.