ಭ್ರಷ್ಟ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಅಧ್ಯಕ್ಷಗಿರಿಯಿಂದ ಇಳಿಸಿ, ಮನೆಯಲ್ಲಿ ಕೂಡಿಸುವ ವರೆಗೆ ನಾನು ಬಿಜೆಪಿಗೆ ಹೋಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.

ಶಿರಸಿ: ಭ್ರಷ್ಟ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಅಧ್ಯಕ್ಷಗಿರಿಯಿಂದ ಇಳಿಸಿ, ಮನೆಯಲ್ಲಿ ಕೂಡಿಸುವ ವರೆಗೆ ನಾನು ಬಿಜೆಪಿಗೆ ಹೋಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.

ಅವರು ಶನಿವಾರ ಮಾಧ್ಯಮದವರ ಜತೆ ಮಾತನಾಡಿ, ಯಡಿಯೂರಪ್ಪನ ಚೇಲಾಗಿರಿ ಮಾಡಿ ಅಪ್ಪಾಜಿ‌ ಎಂದು ಹೇಳುವುದಿಲ್ಲ. ನಾನು ಸ್ವಾಭಿಮಾನದಿಂದ ಇದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ಯೋಗಿ ಆದಿತ್ಯನಾಥ, ಆರ್‌ಎಸ್‌ಎಸ್‌ ನಮ್ಮ ಆದರ್ಶಗಳು. ಜೆಸಿಬಿ ಪಕ್ಷ ರೆಡಿ ಇದೆ. ಸ್ವತಃ ಪಕ್ಷ ಕಟ್ಟುತ್ತೇನೆ ಎಂದು ಹೇಳಿದರು.

ಯಡಿಯೂರಪ್ಪ ಕುಟುಂಬ ಖುಷಿಪಡಿಸಲು ಕೇಂದ್ರ‌ ಬಿಜೆಪಿಯ ನಾಯಕರು ಕೆಲಸ‌ ಮಾಡುತ್ತಿದ್ದಾರೆ. ಯಡಿಯೂರಪ್ಪ ಜಿರೋ ಆಗಿದ್ದು, ಅವನ ಮಗ ಡಬಲ್‌ ಜೀರೋ ಆಗಿದ್ದಾರೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ 40 ಸ್ಥಾನ ಬರುತ್ತದೆ. ನಾನು ಬಂದರೆ 140 ಸ್ಥಾನ ಬರುತ್ತದೆ. ಕಾಂಗ್ರೆಸ್‌ ಕೇವಲ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿಲ್ಲ. ಅದು ತಪ್ಪು ಕಲ್ಪನೆಯಾಗಿದ್ದು, ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯದಿಂದ ಹಿಂದೂ ಕಾರ್ಯಕರ್ತರ ಹತ್ಯೆಯಾಗಿರುವ ಕಾರಣಕ್ಕೆ ಕಾಂಗ್ರೆಸ್‌ ಗೆದ್ದಿದೆ. ಶಿವಮೊಗ್ಗದಲ್ಲಿ ಯಡಿಯೂರಪ್ಪನ ಜಿಲ್ಲೆಯೊಳಗೇ ಒಬ್ಬ ಹಿಂದೂ ಕಾರ್ಯಕರ್ತನ ಕೊಲೆಯಾಯಿತು. ಆಗ ಯಡಿಯೂರಪ್ಪ ಏನು ಮಾಡಿದ್ದಾರೆ? ಅವರ ಕ್ಷೇತ್ರದಲ್ಲಿಯೇ ಏನೂ ಮಾಡಲಿಲ್ಲ. ಹೀಗಾಗಿಯೇ ಹಿಂದೂ ಕಾರ್ಯಕರ್ತರು ಬೇಜಾರಾಗಿ ಬಿಜೆಪಿಯಿಂದ ದೂರ ಸರಿದರು. ಅದಕ್ಕೆ ಸಿದ್ದರಾಮಯ್ಯ ಸರ್ಕಾರ ಬಂತು ಎಂದರು.

ಯತ್ನಾಳ ಕೇಜ್ರಿವಾಲ್ ಆಗುತ್ತಾರೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕೇಜ್ರಿವಾಲ್ ಆಗ್ತಿನೋ ಯೋಗಿ ಆದಿತ್ಯನಾಥ ಆಗ್ತಿನೋ ನೀವೇ ನೋಡಿ. 2028ಕ್ಕೆ ನಾನೇ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿ, 11 ಜೆಸಿಬಿ ಮೂಲಕ ಪೂಜೆ ಮಾಡಿ ಯಾರು ಗಣಪತಿ ಮೇಲೆ ಕಲ್ಲು ಹೊಡೆಯುತ್ತಾರೋ ಅವರ ಮನೆ, ಮಸೀದಿನೂ ನೆಲಸಮ ಮಾಡುತ್ತೇನೆ ಎಂದರು.

ಸಿದ್ದರಾಮಯ್ಯ ನಾಟಿಕೋಳಿ ಪ್ರಿಯ. ಡಿ.ಕೆ. ಶಿವಕುಮಾರ ನೋಟು ಪ್ರಿಯ. ಇದೊಂದು ಲೂಟಿ ಸರ್ಕಾರವಾಗಿದ್ದು, ಸಿದ್ದರಾಮಯ್ಯ, ಡಿ.ಕೆ.ಶಿ. ಭ್ರಷ್ಟರು. ಇಬ್ಬರೂ ಸೇರಿ ಸರ್ಕಾರವನ್ನು ಲೂಟಿ ಮಾಡುತ್ತಿದ್ದಾರೆಯೇ ಹೊರತು ಜನಪರ ಅಭಿವೃದ್ಧಿ ಕಾಮಗಾರಿ ಆಗುತ್ತಿಲ್ಲ. ಮಾತೆತ್ತಿದರೆ ಗ್ಯಾರಂಟಿ ಯೋಜನೆ ಹೇಳುತ್ತಾರೆ, ನೀರಾವರಿ ಯೋಜನೆ, ಕೈಗಾರಿಕೆಗಳ ಬಗ್ಗೆ ಮಾತನಾಡುತ್ತಿಲ್ಲ. ಕುರುಬ ಸಮಾಜಕ್ಕೆ ಮುಖ್ಯಮಂತ್ರಿ ಏನು ಮಾಡಿದ್ದಾರೆ? ಈ ಸರ್ಕಾರದಲ್ಲಿ ಕೇವಲ ಮುಸ್ಲಿಂ ಓಲೈಕೆಯಾಗುತ್ತಿದೆಯೇ ಹೊರತು ಏನೂ ಕೆಲಸ ಆಗುತ್ತಿಲ್ಲ ಎಂದರು.

ಖರ್ಗೆ ವಿರುದ್ಧ ಛಲವಾದಿ ನಾರಾಯಣ ಸ್ವಾಮಿ ಸ್ವಲ್ಪ ಮಾತನಾಡುತ್ತಿದ್ದ. ಅವರನ್ನು ಯಡಿಯೂರಪ್ಪ ಮನೆಗೆ ಕರೆದು ಹುಷಾರ್‌ ಎಂದು ಎಚ್ಚರಿಸಿದ್ದಾರೆ. ಪಾಪ, ಅವರು ಮನೆ ಗಡಿಯಾರದಲ್ಲಿ ಸಿಲುಕಿಕೊಂಡಿದ್ದಾರೆ. ವಾಚ್‌ ನೀಡುವುದು, ನಾಟಿಕೋಳಿ ಸಾರು, ಇಡ್ಲಿ ತಿನ್ನುವುದಕ್ಕೆ ಜನರ ಗೆಲ್ಲಿಸಿ ಕಳುಹಿಸಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯನವರಿಗೆ ಕುಂಕುಮ, ಕೇಸರಿ ಬಣ್ಣ ಎಂದರೆ ಅಲರ್ಜಿ. ತನ್ನ ಜನಾಂಗಕ್ಕಾದರೂ ಮಾಡಿದ್ದು ಏನು? ಇಂತಹ ಮುಖ್ಯಮಂತ್ರಿ ರಾಜ್ಯದ ದೌರ್ಭಾಗ್ಯ. ಸರ್ಕಾರವನ್ನು ವಿರೋಧಿಸಲು ಬಿಜೆಪಿ ವಿಫಲವಾಗಿದೆ. ಹೊಂದಾಣಿಕೆ ರಾಜಕಾರಣದಲ್ಲಿ ಬಿಜೆಪಿ ಮಗ್ನವಾಗಿದೆ ಎಂದರು.