ಸಾರಾಂಶ
ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ಕೈ ಜೋಡಿಸಿ ಕೆಲಸ ಮಾಡಲು ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ತರಬೇಕಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ತನಕವೂ ನಾನು ವಿರಮಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಮೈಸೂರು: ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ಕೈ ಜೋಡಿಸಿ ಕೆಲಸ ಮಾಡಲು ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ತರಬೇಕಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ತನಕವೂ ನಾನು ವಿರಮಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ನಗರದ ರಾಜೇಂದ್ರ ಕಲಾಮಂದಿರದಲ್ಲಿ ನಗರ ಮತ್ತು ಗ್ರಾಮಾಂತರ ಬಿಜೆಪಿ ಆಯೋಜಿಸಿದ್ದ ವಿಕಸಿತ ಭಾರತದ ಅಮೃತಕಾಲ ಸೇವೆ, ಬಡವರ ಕಲ್ಯಾಣದ ಮೋದಿ ಸರ್ಕಾರಕ್ಕೆ 11 ವರ್ಷ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಎರಡು ವರ್ಷದಿಂದ ಕಾಂಗ್ರೆಸ್ ನಾಯಕರ ದರ್ಪ ಸಹಿಸಿಕೊಂಡು ಬಂದಿದ್ದೇವೆ. ಇವರ ಅಹಂಕಾರದ ವರ್ತನೆ ದೂರವಾಗುವ ದಿನ ಹತ್ತಿರವಿದೆ. ರಾಜ್ಯದಲ್ಲಿ ಯಾವಾಗ ಚುನಾವಣೆ ನಡೆದರೂ ಬಿಜೆಪಿ 130 ಸ್ಥಾನ ಗೆದ್ದು ಅಧಿಕಾರಕ್ಕೆ ಬರುವ ಸಂಕಲ್ಪ ಮಾಡಿದ್ದೇವೆ. ಹಳೆಯ ಮೈಸೂರು ಭಾಗದಲ್ಲಿ ನಿರೀಕ್ಷಿತ ಸ್ಥಾನ ಗೆಲ್ಲುವುದಕ್ಕೆ ಸವಾಲು ಸ್ವೀಕರಿಸಬೇಕು ಎಂದರು.
ಬಿ.ಆರ್. ಪಾಟೀಲರೇ ಹೇಳಿದಂತೆ ಸಿದ್ದರಾಮಯ್ಯ ಲಾಟರಿ ಮುಖ್ಯಮಂತ್ರಿ. ಪಕ್ಷದ ವರಿಷ್ಠರು ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಎಲ್ಲರ ಸಲಹೆ ಪಡೆದು ಹೋಗಿದ್ದಾರೆ. ನಾವು ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷದ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ಕಾರ್ಯಕರ್ತರಿಗೆ ಶಕ್ತಿ ತುಂಬುತ್ತೇವೆ ಎಂದರು.
ಕರ್ನಾಟಕದಲ್ಲಿ ಆಧಿಕಾರಕ್ಕೆ ಬರಬೇಕು ಎಂಬ ಕಾರಣಕ್ಕೆ ಗ್ಯಾರಂಟಿ ಯೋಜನೆ ಜಾರಿಗೆ ತಂದು ಅಭಿವೃದ್ದಿಗೆ ದೊಡ್ಡ ಹೊಡೆತ ಬಿದ್ದಿದೆ. ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲದ ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದು ತಾನೊಬ್ಬ ಸತ್ಯ ಹರಿಶ್ಚಂದ್ರ ಎನ್ನುತ್ತಿದ್ದ ಸಿದ್ದರಾಮಯ್ಯ ಅವರ ಮುಖವಾಡ ಬಯಲಾಗಿದೆ.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕರ್ನಾಟಕದ ಮಟ್ಟಿಗೆ ನಾವು ಗಟ್ಟಿ ನಿರ್ಧಾರ ಮಾಡುವ ಅಮೃತಗಳಿಗೆ ಬಂದಿದೆ. ಸ್ಥಳೀಯ ಶಾಸಕರು ಬಿಟ್ಟರೆ ಮತ್ತೊಂದು ಶಾಸಕರನ್ನು ಹುಡುಕಲು ಸಾಧ್ಯವಿಲ್ಲ. ನಾಲ್ಕು ಜಿಲ್ಲೆಗಳ 28 ಕ್ಷೇತ್ರದಲ್ಲಿ ಹೆಚ್ಚು ಸ್ಥಾನವನ್ನು ಗೆಲ್ಲಬೇಕು. ನಮ್ಮಲ್ಲಿ ಇರುವ ಸಣ್ಣಪುಟ್ಟ ವ್ಯತ್ಯಾಸ, ಬದಿಗೊತ್ತಿ ಕೆಲಸ ಮಾಡಿದರೆ ಸಾಕು ಎಂದರು.
ಮಧ್ಯಂತರ ಚುನಾವಣೆ ಬಂದರೂ ಅಚ್ಚರಿ ಇಲ್ಲ. ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಗಮನಿಸಿದರೆ ಅಂತಹ ವಾತಾವರಣವಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ನಗರಾಧ್ಯಕ್ಷ ಎಲ್. ನಾಗೇಂದ್ರ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯ ಉಪಾಧ್ಯಕ್ಷರಾದ ಎಂ. ರಾಜೇಂದ್ರ, ಎನ್. ಮಹೇಶ್, ಮಾಜಿ ಶಾಸಕರಾದ ಎಸ್. ಬಾಲರಾಜು, ಬಿ. ಹರ್ಷವರ್ಧನ್, ಸಿ.ಎಸ್. ನಿರಂಜನಕುವಾರ್, ಚುನಾವಣಾ ಉಸ್ತುವಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಅಧ್ಯಕ್ಷ ಡಾ. ಅನಿಲ್ ಥಾಮಸ್, ಪ್ರಕೋಷ್ಟ ರಾಜ್ಯ ಸಂಚಾಲಕ ಎನ್.ವಿ. ಫಣೀಶ್, ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಎಸ್. ಮಹದೇವಯ್ಯ, ಹೇಮಂತ್ ಕುಮಾರ್ ಗೌಡ, ಎಸ್.ಡಿ. ಮಹೇಂದ್ರ, ಎನ್.ಆರ್. ಕೃಷ್ಣಪ್ಪಗೌಡ ಮೊದಲಾದವರು ಇದ್ದರು.