ಸಾರಾಂಶ
ಉಗಮ ಶ್ರೀನಿವಾಸ್
ಕನ್ನಡಪ್ರಭ ವಾರ್ತೆ ತುಮಕೂರುಬಹು ನಿರೀಕ್ಷಿತ ರಾಜ್ಯ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರಿನ ಜನತೆ ಭರ್ಜರಿ ಕೊಡುಗೆಯನ್ನು ನಿರೀಕ್ಷಿಸಿದ್ದಾರೆ.
11 ವಿಧಾನಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಜಯಗಳಿಸಿರುವ ಕಾಂಗ್ರೆಸ್ ಸಹಜವಾಗಿ ಜಿಲ್ಲೆಗೆ ಏನಾದರೂ ಕೊಡುಗೆ ಕೊಡಬಹುದು ಎಂಬ ದೊಡ್ಡ ನಿರೀಕ್ಷೆಯಲ್ಲಿ ಕಲ್ಪತರು ಜಿಲ್ಲೆಯ ಜನತೆ ಇದ್ದಾರೆ. ಈಗಾಗಲೇ ಮೆಟ್ರೋ ರೈಲನ್ನು ತುಮಕೂರಿನವರೆಗೂ ವಿಸ್ತರಿಸುವುದಾಗಿ ಗೃಹ ಸಚಿವರೇ ಹೇಳುತ್ತಾ ಬಂದಿದ್ದರು. ತುಮಕೂರಿನ ಸಮೀಪದಲ್ಲೇ ವಸಂತನರಸಾಪುರ ಕೈಗಾರಿಕಾ ಹಬ್ ಇದ್ದು ಮೆಟ್ರೋವನ್ನು ತುಮಕೂರಿಗೆ ನೀಡಿದರೆ ಸಾಕಷ್ಟು ಅನುಕೂಲವಾಗುತ್ತದೆ ಎಂಬುದು ಜನರು ಹಾಗೂ ಕೈಗಾರಿಕೋದ್ಯಮಿಗಳ ಒಲವಾಗಿದೆ.ಮೊದಲ ಹಂತದಲ್ಲಿ ತುಮಕೂರಿನವರೆಗೂ ವಿಸ್ತರಣೆ ಮಾಡಿ ಬಳಿಕ ವಸಂತನರಸಾಪುರದವರೆಗೂ ಮೆಟ್ರೋ ತೆಗೆದುಕೊಂಡು ಹೋಗಬಹುದು ಎಂಬ ನಿರೀಕ್ಷೆಯನ್ನು ಹೊಂದಲಾಗಿದೆ.
ಇನ್ನು ತುಮಕೂರು-ದಾವಣಗೆರೆ ಹಾಗೂ ತುಮಕೂರು-ರಾಯದುರ್ಗ ರೈಲ್ವೆ ಲೈನ್ ಬಗ್ಗೆ ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಯಾವ ಘೋಷಣೆಯನ್ನು ಮಾಡಿಲ್ಲ. ಆದರೆ ಜನಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂಬುದು ಜನರ ಅಪೇಕ್ಷೆಯಾಗಿದೆ.ತುಮಕೂರು-ದಾವಣಗೆರೆ ರೈಲು ಮಾರ್ಗಕ್ಕೆ ಸುಮಾರು 4 ದಶಕಗಳ ಹೋರಾಟವಿದೆ. ಉತ್ತರ ಕರ್ನಾಟಕವನ್ನು ಸುಲಭವಾಗಿ ಸಂಪರ್ಕಿಸುವ ಈ ರೈಲು ಮಾರ್ಗಕ್ಕೆ ರೈಲ್ವೆ ನಿಲ್ದಾಣಗಳನ್ನು ಗುರುತಿಸಲಾಗಿದೆ. ಆದರೆ ಅದ್ಯಾಕೋ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ರೈಲು ಮಾರ್ಗದ ಬಗ್ಗೆ ಉತ್ಸಾಹ ತೋರುತ್ತಿಲ್ಲ. ಹಾಗೆಯೇ ತುಮಕೂರು-ರಾಯದುರ್ಗ ರೈಲು ಮಾರ್ಗಕ್ಕೂ ಎರಡೂ ಸರ್ಕಾರಗಳು ಬಜೆಟ್‌ನಲ್ಲಿ ಮಲತಾಯಿ ಧೋರಣೆ ತೋರುತ್ತಿದ್ದು, ಈ ಬಾರಿ ಬಜೆಟ್‌ನಲ್ಲಿ ಹಣ ಮೀಸಲಿಡಬಹುದೇ ಎಂಬುದು ಪ್ರಶ್ನೆಯಾಗಿದೆ.
ಕಳೆದ ಕೆಲ ದಶಕಗಳಿಂದ ತುಮಕೂರು ಜಿಲ್ಲೆಯನ್ನು ವಿಭಜಿಸಿ ಮತ್ತೊಂದು ಜಿಲ್ಲೆ ಮಾಡಬೇಕೆಂಬ ಪ್ರಸ್ತಾವನೆ ನಡೆಯುತ್ತಲೇ ಇದೆ. ಮಧುಗಿರಿ ಹಾಗೂ ತಿಪಟೂರಿನ ಜನತೆ ನಮ್ಮ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ರೂಪಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಈ ಮಧ್ಯೆ ಶಿರಾ ಜನತೆ ಕೂಡ ಜಿಲ್ಲಾ ಕೇಂದ್ರ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಮಧುಗಿರಿ ಹಾಗೂ ತಿಪಟೂರು ಉಪವಿಭಾಗ ಕೇಂದ್ರವಿರುವುದರಿಂದ ಈ ಎರಡು ಪೈಕಿ ಒಂದನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬಹುದು. ಆದರೆ ಸರ್ಕಾರ ಈ ಬಜೆಟ್‌ನಲ್ಲಿ ಈ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ.ಇನ್ನು ತುಮಕೂರು ನಗರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಪ್ರಸ್ತಾವನೆ ಇಂದು ಮೊನ್ನೆಯದಲ್ಲ. ಆದರೆ ಅದ್ಯಾಕೋ ಎಲ್ಲಾ ಸರ್ಕಾರಗಳು ಈ ಬಗ್ಗೆ ನಿರುತ್ಸಾಹ ತೋರುತ್ತಿದೆ. ಬೆಂಗಳೂರಿಗೆ 18 ಜಿಲ್ಲೆಗಳನ್ನು ಸಂಪರ್ಕಿಸುವ ಹೆಬ್ಬಾಗಿಲು ಎಂದೇ ಖ್ಯಾತಿ ಗಳಿಸಿರುವ ತುಮಕೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾದರೆ ಅಕ್ಕಪಕ್ಕದ ಜಿಲ್ಲೆಗಳಿಗೂ ಅನುಕೂಲವಾಗುತ್ತದೆ. ಹೀಗಾಗಿ ಈ ಬಾರಿಯಾದರೂ ಬಜೆಟ್ ನಲ್ಲಿ ಮೆಡಿಕಲ್ ಕಾಲೇಜು ಘೋಷಣೆಯಾಗುತ್ತದೆಯೇ ಎಂಬ ನಿರೀಕ್ಷೆ ಜಿಲ್ಲೆಯ ಜನತೆಯಲ್ಲಿ ದೊಡ್ಡ ಮಟ್ಟದಲ್ಲಿದೆ.
ಪ್ರವಾಸಿ ಕೇಂದ್ರವನ್ನಾಗಿ ರೂಪಿಸುವ ಮೂಲಕ ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿತ್ತು. ಹೀಗಾಗಿ ತುಮಕೂರು ನಗರದಲ್ಲಿರುವ ಅಮಾನಿಕೆರೆ ಸೌಂದರ್ಯೀಕರಣಕ್ಕೆ ವಿಶೇಷ ಅನುದಾನವನ್ನು ಸರ್ಕಾರ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಉಳಿದಂತೆ ಪಾವಗಡ ಸೋಲಾರ್ ಪಾರ್ಕ್ ಮತ್ತಷ್ಟು ವಿಸ್ತರಿಸುವ ಇರಾದೆ ರಾಜ್ಯ ಸರ್ಕಾರ ಹೊಂದಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಸೋಲಾರ್ ಪಾರ್ಕ್ ಅಭಿವೃದ್ಧಿಪಡಿಸಲು ಶ್ರಮಿಸಿದ್ದರು. ಈಗ ಉಪಮುಖ್ಯಮಂತ್ರಿಯೂ ಆಗಿರುವ ಶಿವಕುರ್ರ್‌ರ್ ಅವರು ಸೋಲಾರ್ ಪಾರ್ಕ್ ಬಗ್ಗೆ ವಿಶೇಷ ಒಲವು ತೋರುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.ಒಟ್ಟಾರೆಯಾಗಿ ಕಲ್ಪತರು ಜಿಲ್ಲೆ ತುಮಕೂರು ಬೆಳಗಾವಿ ನಂತರ ವ್ಯಾಪ್ತಿಯಲ್ಲಿ ಅತಿ ದೊಡ್ಡ ಜಿಲ್ಲೆಯಾಗಿದ್ದು 10 ತಾಲೂಕುಗಳನ್ನು ಒಳಗೊಂಡಿರುವ ಜಿಲ್ಲೆಗೆ ಈ ಬಾರಿ ಭರ್ಜರಿ ಪ್ಯಾಕೇಜ್ ಅನ್ನು ರಾಜ್ಯ ಸರ್ಕಾರ ಘೋಷಿಸಬಹುದು ಎಂದು ಅಂದಾಜಿಸಲಾಗಿದೆ.