ಸಾರಾಂಶ
ಹೊಸಪೇಟೆ: ಬಹುತ್ವದ ಭಾರತಕ್ಕಾಗಿ ಹಾಗೂ ಸಂವಿಧಾನದ ಆಶಯಗಳ ಪಾಲನೆಗಾಗಿ ಈ ಬಾರಿ ಕಾಂಗ್ರೆಸ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ರಚನೆ ಮಾಡಬೇಕಾಗಿದೆ. ಹಾಗಾಗಿ ಕಾಂಗ್ರೆಸ್ ಗೆಲ್ಲಿಸಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೈ.ಎನ್. ಗೌಡರ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಇದನ್ನರಿತು ಪ್ರಧಾನಿ ಮೋದಿ ಮತ್ತೆ ಮಾತಿನಲ್ಲಿ ಮೋಡಿ ಮಾಡಲು ಹೊರಟಿದ್ದಾರೆ. ಆದರೆ, ಸಂವಿಧಾನದ ಆಶಯ ಗಾಳಿಗೆ ತೂರುವ ಕಾರ್ಯ ಮಾಡಲಾಗುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಕಾರ್ಪೊರೇಟ್ ಕಂಪನಿಗಳ ಸಾಲಮನ್ನಾ ಮಾಡಿರುವ ಕೇಂದ್ರ ಸರ್ಕಾರ, ರೈತರ ಸಾಲಮನ್ನಾ ಮಾಡಲು ದೇಶ ದಿವಾಳಿಯಾಗುತ್ತದೆ ಎಂದಿದ್ದಾರೆ. ರೈತರು ಬ್ಯಾಂಕ್‌ಗಳಲ್ಲಿ ಬರೀ ಒಂದು ಲಕ್ಷ ರುಪಾಯಿ ಸಾಲ ತೀರಿಸಲು ಆಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಕಾರ್ಪೊರೇಟ್ ಕಂಪನಿಗಳ ಲಕ್ಷಾಂತರ ಕೋಟಿ ರುಪಾಯಿ ಸಾಲಮನ್ನಾ ಮಾಡಿದೆ. ಈ ಸರ್ಕಾರಕ್ಕೆ ರೈತರ, ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ. ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿಗಳನ್ನು ವಿರೋಧಿಸುವ ಪ್ರಧಾನಿ ಮೋದಿ, ಈಗ ತಾವೇ ಗ್ಯಾರಂಟಿ ನೀಡಲು ಹೊರಟಿದ್ದಾರೆ. ಅವರು ಬರೀ ಮಾತಿನಲ್ಲಿ ಮೋಡಿ ಮಾಡಲು ಬಂದಿದ್ದಾರೆ, ಹೊರತು, ಈ ಹಿಂದೆ ತಾವೇ ನೀಡಿದ್ದ ಪ್ರತಿಯೊಬ್ಬರಿಗೂ ₹15 ಲಕ್ಷ ನೀಡುವ ಮತ್ತು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆಗಳನ್ನು ಮರೆತಿದ್ದಾರೆ ಎಂದು ದೂರಿದರು.ಸಾಮಾಜಿಕ ನ್ಯಾಯದಡಿ, ಸಂಪತ್ತು ಸಮಾನ ಹಂಚಿಕೆ ಆಗಬೇಕು. ಆದರೆ, ಈ ರೀತಿ ಆಗುತ್ತಿಲ್ಲ. ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯನಂತಹ ಉದ್ಯಮಿಗಳು ದೇಶದ ಹಣ ದೋಚಿ ಪರಾರಿಯಾಗಿದ್ದಾರೆ. ಚುನಾವಣಾ ಬಾಂಡ್ ಬಹಳ ಸೂಕ್ಷ್ಮ ವಿಚಾರವಾಗಿದೆ. ಕಪ್ಪು ಹಣದ ಬಗ್ಗೆ ಕೇಂದ್ರ ಸರ್ಕಾರ ಸುಮ್ಮನಾಗಿದೆ. ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹೊಸಪೇಟೆ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಲೋಪದೋಷ ಸರಿಪಡಿಸಲು ಹೋಗಿಲ್ಲ. ಅವರದೇ ಕೇಂದ್ರ ಸರ್ಕಾರ ಇದ್ದರೂ ಅವರು ವಿಜಯನಗರ, ಬಳ್ಳಾರಿ ಜನರ ಸಮಸ್ಯೆಗೆ ಸ್ಪಂದಿಸಿಲ್ಲ. ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ರೈತಪರ, ಜನಸಮುದಾಯ ಪರ ಕಾಳಜಿ ಹೊಂದಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು ಸಾಧಿಸುವ ಎಲ್ಲ ಲಕ್ಷಣ ಇದೆ ಎಂದರು.ನೇಹಾ ಹತ್ಯೆ ಪ್ರಕರಣ ಖಂಡಿಸುವೆ. ಈ ಕೃತ್ಯ ನಡೆಯಬಾರದಿತ್ತು. ಸಿಎಂ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ ಆರಂಭಿಕ ಹಂತದಲ್ಲಿ ಅವರಿಗೆ ಬಂದ ಮಾಹಿತಿ ಆಧಾರದ ಮೇಲೆ ಹೇಳಿಕೆ ನೀಡಿದ್ದರು. ಈಗ ಅವರು ಕೂಡ ಆ ಕುಟುಂಬದ ಜೊತೆಗೆ ನಿಂತಿದ್ದಾರೆ. ಕಾನೂನು ಪ್ರಕಾರ ಹಿರೇಮಠ ಕುಟುಂಬಕ್ಕೆ ನ್ಯಾಯ ದೊರೆಯಲಿದೆ ಎಂದರು.
ಮುಖಂಡರಾದ ಟಿ.ರತ್ನಾಕರ, ಗಂಟೆ ಸೋಮು, ಮದರಸಾಬ್, ಈರಣ್ಣ, ಗಂಟೆ ಉಮೇಶ್, ಎಚ್.ಸೋಮಶೇಖರ್ ಮತ್ತಿತರರಿದ್ದರು.;Resize=(128,128))
;Resize=(128,128))