ತಾಲೂಕು ಆಡಳಿತದ ಅಧಿಕಾರಿಗಳು ಖಾಸಗಿ ಕಂಪನಿಯವರ ಜತೆ ಕೈಜೋಡಿಸದೇ ರೈತರ ಹಿತ ಕಾಯಬೇಕು. ಯಾವುದೇ ಕಾರಣಕ್ಕೂ ಫ್ಯಾನ್ ಅಳವಡಿಕೆಗೆ ಪರವಾನಗಿ ನೀಡಬಾರದು.
ಶಿರಹಟ್ಟಿ: ಪಟ್ಟಣದ ಹೊರವಲಯದಲ್ಲಿ ರೈತ ಶಿವಾನಂದ ಕುಳಗೇರಿ ಸೇರಿದಂತೆ ಅನೇಕ ರೈತರ ಮಾಲೀಕತ್ವದ ಸರ್ವೆ ನಂ. ೮೭/೧, ೭೨/೧ ಹೊಂದಿಕೊಂಡು ಸೆರೆಂಟಿಕಾ ವಿಂಡ್ ಖಾಸಗಿ ಕಂಪನಿಯರು ಕಾನೂನು ಉಲ್ಲಂಘಿಸಿ ಅನಧಿಕೃತ ಗಾಳಿಯಂತ್ರ ಅಳವಡಿಸುತ್ತಿದ್ದಾರೆ ಎಂದು ರೈತ ಶಿವಾನಂದ ಕುಳಗೇರಿ ಆರೋಪಿಸಿದ್ದಾರೆ.ಈ ಕುರಿತು ರೈತರು ಗ್ರೇಡ್- ೨ ತಹಸೀಲ್ದಾರ್ ವಿ.ಎ. ಮುಳಗುಂದಮಠ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಶಿರಹಟ್ಟಿ ವ್ಯಾಪ್ತಿಯ ಭೂಪ್ರದೇಶ ಎತ್ತರವನ್ನು ಹೊಂದಿದೆ. ಇಲ್ಲಿ ಗಾಳಿ ಉತ್ತಮವಾಗಿ ಬೀಸುತ್ತಿದೆ ಎನ್ನುವ ಕಾರಣಕ್ಕೆ ಸೆರೆಂಟಿಕಾ ಪವನ ವಿದ್ಯುತ್ ಖಾಸಗಿ ಕಂಪನಿಯವರು ಫ್ಯಾನ್ ಅಳವಡಿಸುವ ಪ್ರಕ್ರಿಯೆಯನ್ನು ನಾಲ್ಕು ತಿಂಗಳಿಂದ ಆರಂಭಿಸಿದ್ದಾರೆ. ಇದರಿಂದಾಗಿ ರೈತರಿಗೆ ಮೋಸ ಮಾಡಿ ಕೃಷಿ ಭೂಮಿಯನ್ನು ಪರಿವರ್ತಿಸುವ ಕಾರ್ಯ ಭರದಿಂದ ನಡೆಯುತ್ತಿದೆ ಎಂದು ದೂರಿದರು.ಹಣದ ಆಸೆಗೆ ಫಲವತ್ತಾದ ಚೌಕಾಕಾರದ ಭೂಮಿಗಳನ್ನು ರೈತರು ನೀಡುತ್ತಿರುವ ಕಾರಣ ಅನ್ನ ನೀಡುವ ಭೂಮಿಗೆ ಗರಸು ಹಾಕಿ ಬಂಜರುಗೊಳಿಸುತ್ತಿರುವ ಪ್ರಮಾಣ ಎಗ್ಗಿಲ್ಲದೆ ಸಾಗಿದೆ. ಇದರಿಂದಾಗಿ ಮುಂದಿನ ಪೀಳಿಗೆಗೆ ಮಾರಕ ಪರಿಣಾಮ ಬೀಳಲಿದೆ. ಗಾಳಿಯಂತ್ರದ ಸಂಪೂರ್ಣ ನೆರಳು ನಮ್ಮ ಜಮೀನಿನ ಮೇಲೆ ಬೀಳುತ್ತಿದ್ದು, ರಸ್ತೆಯ ಧೂಳು ಫಸಲಿಗೆ ತಾಗಿ ಬೆಳೆಹಾನಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಗಾಳಿಯಂತ್ರ ವೇಗವಾಗಿ ತಿರುಗುವುದರಿಂದ ಭಾರಿ ಪ್ರಮಾಣದ ಸದ್ದಿಗೆ ಉಳುಮೆ ವೇಳೆ ದನ- ಕರುಗಳು ಭಯದಿಂದ ಜಮೀನಿನತ್ತ ಬಾರದಂತಾಗುತ್ತಿದೆ. ಭೂಮಿಯ ಅಂತರ್ಜಲ ಮಟ್ಟ ಕುಸಿತ, ತೇವಾಂಶ ಕಡಿಮೆಯಾಗುತ್ತಿದೆ. ಖಾಸಗಿ ಕಂಪನಿಯು ರೈತರಿಗೆ ಹಣದ ಆಮಿಷವೊಡ್ಡಿ ಜಮೀನು ಕಬಳಿಸುತ್ತಿದೆ. ತಲೆ ತಲಾಂತರದಿಂದ ಕೃಷಿ ನಂಬಿ ಬದುಕು ಸಾಗಿಸುತ್ತಿರುವ ಬಡ ರೈತರ ಕೃಷಿ ಭೂಮಿ ರಕ್ಷಣೆಗೆ ಈ ಕೂಡಲೇ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.ಅತಿವೃಷ್ಟಿ, ಅನಾವೃಷ್ಟಿ, ಬರಗಾಲದ ಸುಳಿಗೆ ಸಿಲುಕಿ ರೈತರು ಕಂಗೆಟ್ಟಿದ್ದಾರೆ. ಅಲ್ಪಸ್ವಲ್ಪ ಭೂಮಿಯಲ್ಲಿ ಉಳುಮೆಯಿಂದ ಜೀವನ ನಡೆಸುತ್ತಿರುವ ಬಡ ರೈತರ ಮೇಲೆ ಖಾಸಗಿ ಕಂಪನಿಯವರು ದಬ್ಬಾಳಿಕೆ ನಡೆಸಿ ಒಕ್ಕಲೆಬ್ಬಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಪಟ್ಟಣದಿಂದ ಕೇವಲ ೭ ಕಿಮೀ ದೂರದಲ್ಲಿರುವ ಪ್ರಸಿದ್ಧ ಮಾಗಡಿ ಕೆರೆ ಪಕ್ಷಿಧಾಮಕ್ಕೆ ದೇಶ- ವಿದೇಶಗಳಿಂದ ಪ್ರತಿವರ್ಷ ವಲಸೆ ಹಕ್ಕಿಗಳು ಬರುತ್ತಿದ್ದು, ಈ ಹಕ್ಕಿಗಳಿಗೂ ಕಂಟಕವಿದೆ ಎಂದು ಅಸಮಾಧಾನ ಹೊರಹಾಕಿದರು.ತಾಲೂಕು ಆಡಳಿತದ ಅಧಿಕಾರಿಗಳು ಖಾಸಗಿ ಕಂಪನಿಯವರ ಜತೆ ಕೈಜೋಡಿಸದೇ ರೈತರ ಹಿತ ಕಾಯಬೇಕು. ಯಾವುದೇ ಕಾರಣಕ್ಕೂ ಫ್ಯಾನ್ ಅಳವಡಿಕೆಗೆ ಪರವಾನಗಿ ನೀಡಬಾರದು. ಫ್ಯಾನ್ ಪಾಯಿಂಟ್ ಬಂದಿರುವ ಹೊಲದ ಒಂದು ಎಕರೆ ಭೂಮಿಯನ್ನು ಖಾಸಗಿ ಕಂಪನಿಯವರು ರೈತರಿಂದ ಖರೀದಿ ಮಾಡುತ್ತಿದ್ದಾರೆ. ಅದರ ಸುತ್ತಲಿನ ಐದು ಎಕರೆ ಕೃಷಿ ಭೂಮಿಯನ್ನು ವರ್ಷಕ್ಕೆ ೧೫ ಸಾವಿರದಂತೆ ೩೦ ವರ್ಷಕ್ಕೆ ಲಾವಣಿ ಪಡೆಯುತ್ತಿದ್ದಾರೆ.ಪ್ರತಿ ಫ್ಯಾನ್ ಕಂಬಕ್ಕೂ ಸಂಪರ್ಕ ಕಲ್ಪಿಸಲು ೩೦ ಮೀಟರ್ ಅಗಲದ ಭೂಮಿಯನ್ನು ದಾರಿಗೆ ಪಡೆಯುತ್ತಿದ್ದಾರೆ. ಕಾರಣ ದೊಡ್ಡ ವಾಹನಗಳ ಓಡಾಟಕ್ಕೆ ಅನುಕೂಲವಾಗಲಿ ಎಂದು ರಸ್ತೆಯ ಜಾಗವನ್ನು ೧ ಲಕ್ಷಕ್ಕೆ(ಭೂಮಿ ಮೇಲೆ ಅವಲಂಬನೆ) ಖರೀದಿ ಮಾಡುತ್ತಿದ್ದಾರೆ. ಈ ಎಲ್ಲ ಪ್ರಕ್ರಿಯೆ ನಿಲ್ಲಬೇಕು. ಇಲ್ಲವಾದರೆ ತಾಲೂಕಿನ ಎಲ್ಲ ರೈತರನ್ನು ಸೇರಿಸಿ ತಹಸೀಲ್ದಾರ್ ಕಾರ್ಯಾಲಯದೆದುರು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.ಗ್ರೇಡ್- ೨ ತಹಸೀಲ್ದಾರ್ ವಿ.ಎ. ಮುಳಗುಂದಮಠ ಮನವಿ ಸ್ವೀಕರಿಸಿದರು. ಈ ವೇಳೆ ರೈತರಾದ ಯಲ್ಲಪ್ಪ ಕೊಡ್ಲಿ, ಸಿದ್ದಪ್ಪ ಕುಳಗೇರಿ, ಎನ್.ಎ. ತೇಲಿ, ಹಸನ ತಹಶೀಲ್ದಾರ, ಬಸವರಾಜ ಬೋರಣ್ಣವರ, ಅಶೋಕ ಹುಬ್ಬಳ್ಳಿ, ಪ್ರಶಾಂತ ಹುಬ್ಬಳ್ಳಿ, ಮಂಜುನಾಥ ಎರಿಮನಿ, ಮಂಜುನಾಥ ಲಮಾಣಿ, ಮಂಜುನಾಥ ಮೂರಶಿಳ್ಳಿ, ಕಿರಣ ಸೇರಿದಂತೆ ಅನೇಕರು ಮನವಿ ನೀಡುವಲ್ಲಿ ಇದ್ದರು.