ಸಾರಾಂಶ
ನಗರದ ವಿವಿಧ ಮಹಿಳಾ ಸಂಘ ಸಂಸ್ಥೆಗಳ ನೂರಾರು ಮಹಿಳೆಯರು ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮೈಸೂರು : ಮತ್ತೊಮ್ಮೆ ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬರಲಿ ಹಾಗೂ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ಯದುವೀರ ಒಡೆಯರ್ ಅವರು ಜಯ ಸಾಧಿಸಲಿ ಎಂದು ಪ್ರಾರ್ಥಿಸಿ ನೂರಾರು ಮಹಿಳೆಯರು ಭಾನುವಾರ ಚಾಮುಂಡಿಬೆಟ್ಟ ಹತ್ತಿದರು.
ನಗರದ ವಿವಿಧ ಮಹಿಳಾ ಸಂಘ ಸಂಸ್ಥೆಗಳ ನೂರಾರು ಮಹಿಳೆಯರು ಚಾಮುಂಡೇಶ್ವರಿ ಪಾದದಿಂದ ಮೆಟ್ಟಲು ಮೂಲಕ ವರವ ಕೊಡೆ ಚಾಮುಂಡಿ ವರವ ಕೊಡೆ ಹಾಗೂ ನಮ್ಮ ನಡಿಗೆ ವಿಜಯದ ಕಡೆಗೆ ಇನ್ನಿತರ ಘೋಷಣೆ ಕೂಗುತ್ತಾ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಚಾಮುಂಡಿಬೆಟ್ಟದ ಪಾದದ ಬಳಿ ಬೆಟ್ಟ ಹತ್ತುವ ಕಾರ್ಯಕ್ರಮಕ್ಕೆ ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಸಚಿವ ಎಸ್.ಎ. ರಾಮದಾಸ್, ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಚಾಲನೆ ನೀಡಿದರು.
ಈ ವೇಳೆ ಮೈಸೂರು ಮತ್ತು ಕೊಡಗು ಲೋಕಸಭಾ ಮಹಿಳಾ ಕಾರ್ಯದ ಸಂಚಾಲಕಿ ಹೇಮಾ ನಂದೀಶ್ ಮಾತನಾಡಿ, ಮಹಿಳಾ ಸಬಲೀಕರಣ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದ್ಯತೆ ನೀಡಿದ್ದು, ಸುಕನ್ಯಾ ಸಮೃದ್ಧಿ ಯೋಜನೆ, ಸೇರಿದಂತೆ ಹಲವು ಯೋಜನೆಗಳನ್ನು ಸ್ತ್ರೀ ಸಂಕುಲಕ್ಕಾಗಿ ಪರಿಚಯಿಸಿದೆ. ಇದರಿಂದ ಮಹಿಳಾ ಸಬಲೀಕರಣವಾಗಿದೆ ಎಂದು ಹೇಳಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ, ಮೈಸೂರು ಮತ್ತು ಕೊಡಗು ಲೋಕಸಭೆಯಲ್ಲಿ ಯದುವೀರ ಒಡೆಯರು ಗೆಲ್ಲುವ ವಿಶ್ವಾಸ ಇದೆ. ಅತಿ ಹೆಚ್ಚು ಮಹಿಳಾ ಮತದಾರರು ಮೋದಿ ಸರ್ಕಾರವನ್ನು ಬೆಂಬಲಿಸಲು ಮುಂದಾಗಿದ್ದಾರೆ ಎಂದರು.
ಮಾಜಿ ಉಪ ಮೇಯರ್ ಡಾ.ಜಿ. ರೂಪಾ, ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್, ಬಿಜೆಪಿ ಮುಖಂಡರಾದ ಸುರೇಶ್ ಬಾಬು, ಕೇಬಲ್ ಮಹೇಶ್, ಎಚ್.ಜಿ. ಗಿರಿಧರ್, ರಶ್ಮಿ, ಕಾವೇರಿ, ಸವಿತಾ ಘಾಟ್ಕೆ, ಉಮಾ ಜಾದವ್, ನಳಿನಿ, ಮಮತಾ ಚಂದ್ರಶೇಖರ್, ಇಂದ್ರಾ ಮೊದಲಾದವರು ಇದ್ದರು.