ಸಾರಾಂಶ
ಶಿವಮೊಗ್ಗ: ಶಿವಮೊಗ್ಗ ಎಸಿ ಕಚೇರಿಯಿಂದ ಮುಳುಗಡೆ ಸಂತ್ರಸ್ತರಿಗೆ ನೀಡುತ್ತಿರುವ ನೋಟಿಸನ್ನು ಹಿಂಪಡೆಯಲು ಒತ್ತಾಯಿಸಿ ಮಂಗಳವಾರ ತುಂಗಾ-ಭದ್ರ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ರೈತರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.ರೊಚ್ಚಿಗೆದ್ದ ರೈತರು ಬ್ಯಾರಿಕೇಡ್‌ಗಳನ್ನು ದಾಟಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು. ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು.
ಶಿವಮೊಗ್ಗ ತಾಲೂಕು ನಿದಿಗೆ ಹೋಬಳಿ ಹಾಲಲಕ್ಕವಳ್ಳಿ ಗ್ರಾಮ, ಲಕ್ಕಿನಕೊಪ್ಪ, ತೋಟದಕೆರೆ, ಹುರಳಿಹಳ್ಳಿ ಗ್ರಾಮಗಳು ೧೯೫೧ರ ತುಂಗಾ ಹಾಗೂ ೧೯೫೬ರ ಭದ್ರಾ ಆಣೆಕಟ್ಟು ನಿರ್ಮಾಣ ಸಂದರ್ಭದಲ್ಲಿನ ಮುಳುಗಡೆ ಸಂತ್ರಸ್ತರಿಗೆ ಮತ್ತು ಭೂ ಹೀನರಿಗೆ ಪುನರ್ ವಸತಿ ಗ್ರಾಮ ಎಂದು ನಿರ್ಮಿಸಲಾಗಿದೆ. ಜಿಲ್ಲೆಯ ಹಳೆಯ ಆಣೆಕಟ್ಟು ಇದಾಗಿದ್ದು ಇಲ್ಲಿ ಸಂಗ್ರಹವಾದ ನೀರು ಆಂಧ್ರಪ್ರದೇಶದವರೆಗೂ ಹರಿಯುತ್ತಿದೆ. ಲಕ್ಷಾಂತರ ಎಕರೆ ಕೃಷಿ ಜಮೀನಿಗೆ ಹಾಗೂ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಸರಬರಾಜಾಗುತ್ತಿದೆ. ಆದರೆ ಇಲ್ಲೇ ಆಣೆಕಟ್ಟೆಯ ಹಿನ್ನೀರಿನಲ್ಲಿ ಸಂತ್ರಸ್ತರಾದ ಜನರ ಹಿತಾಸಕ್ತಿಯನ್ನು ಸರ್ಕಾರ ನಿರ್ಲಕ್ಷ್ಯಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ.ಶ್ರೀನಿವಾಸ್ ಮಾತನಾಡಿ, ಗಾಜನೂರು ಮತ್ತು ಭದ್ರಾ ಜಲಾಶಯ ನಿರ್ಮಾಣಕ್ಕೆ ಲಕ್ಕಿನಕೊಪ್ಪ ಮತ್ತು ಹಾಲಲಕ್ಕವಳ್ಳಿ ಹಾಗೂ ಇತರೆ ಗ್ರಾಮಗಳ ೯೦೦ಕ್ಕೂ ಹೆಚ್ಚು ರೈತರು ಭೂಮಿಯನ್ನು ತ್ಯಾಗ ಮಾಡಿದ್ದರು. ಸರ್ಕಾರವೇ ೧೯೬೨ರಲ್ಲಿ ಸುಮಾರು ೯೦೦ ಜನರಿಗೆ ಹಕ್ಕುಪತ್ರ ನೀಡಿ ಜಮೀನು ಮಂಜೂರು ಮಾಡಿತ್ತು. ಜಮೀನನ್ನು ಖಾತೆ ಪೋಡಿ ಮಾಡಿಕೊಂಡು ತೋಟ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಮುಳುಗಡೆ ಸಂತ್ರಸ್ತರಿಗೆ ಮಂಜೂರು ಮಾಡಲಾಗಿರುವ ಭೂಮಿ ಕಾನೂನು ಬಾಹಿರ ಎಂದು ಅರಣ್ಯ ಇಲಾಖೆಯವರು ನೋಟಿಸ್ ಕೊಟ್ಟು, ಎಸಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವೇ ಗಾಜನೂರು ಮತ್ತು ಭದ್ರಾ ಜಲಾಶಯ ಮುಳುಗಡೆ ಸಂತ್ರಸ್ತರಿಗೆ ಕೊಟ್ಟ ಭೂಮಿ ಕಾನೂನು ಬಾಹಿರ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ೧೦೦೦ ಸಾವಿರ ಜನ ರೈತರಿಗೆ ನೋಟಿಸ್ ನೀಡಲಾಗಿದೆ. ಇದಕ್ಕೆ ಮೂಲ ಏನೆಂದರೆ ೧೮೯೫-೧೯೩೦-೪೦ರವರೆಗೆ ಮಹರಾಜರು ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿ ೨ ಲಕ್ಷದ ೬೫ ಸಾವಿರ ಎಕರೆ ಜಾಗವನ್ನು ಅರಣ್ಯ ಎಂದು ಪ್ರಕಟಣೆ ಹೊರಡಿಸಿತ್ತು. ಇದು ಜಾರಿಯಾಗಿಲ್ಲ. ಜಾರಿಯಾಗಬೇಕು ಎಂದು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಸಮರ್ಥವಾಗಿ ವಾದಿಸದ ಪರಿಣಾಮ ಶರಾವತಿ, ಚಕ್ರಾ-ಸಾವೆಹಕ್ಲು, ಗಾಜನೂರು-ಭದ್ರ ಜಲಾಶಯ ಮುಳುಗಡೆ ಸಂತ್ರಸ್ತರು ಸಂಕಷ್ಟ ಎದುರಿಸುವಂತಾಗಿದೆ. ಜಿಲ್ಲೆಯಲ್ಲಿ ೩೫ ಸಾವಿರ ಕುಟುಂಬಗಳಿಗೆ ಕಂದಾಯ ಇಲಾಖೆ ನೋಟಿಸ್ ಕೊಟ್ಟು ಪ್ರಕರಣ ದಾಖಲಿಸಿದೆ ಎಂದು ತಿಳಿಸಿದರು.ಪಹಣಿಯಲ್ಲಿ ಅರಣ್ಯ ಎಂದು ನಮೂದಿಸಲು ಇಂಡೀಕರಣ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳು ರೈತರ ಪಾಲಿಗೆ ಸತ್ತು ಹೋಗಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಶಿವಮೊಗ್ಗ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವಿಲ್ಲ, ಕಾಳಜಿಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಹರೀಶ್, ಶ್ರೀಕಾಂತ್, ಜಗದೀಶ್, ಜಯವೇಲು, ಮುನಿಸ್ವಾಮಿ, ಮಂಜುನಾಥ್, ಚೆಲುವರಾಯ, ಮಂಜುಳಾ, ಚೆಲುವಮ್ಮ ಮೊದಲಾದವರು ಇದ್ದರು.ಸರ್ಕಾರವೇ ಸತ್ತು ಹೋಗಿದೆ
ರಾಜ್ಯ ಸರ್ಕಾರವೇ ಕೊಟ್ಟ ಹಕ್ಕುಪತ್ರವನ್ನು ಅರಣ್ಯ ಇಲಾಖೆ ಕಾನೂನು ಬಾಹಿರ ಅಂದ್ರೆ ಕಂದಾಯ ಇಲಾಖೆ ಹಾಗೂ ಸರ್ಕಾರವೇ ಸತ್ತು ಹೋಗಿದೆ ಎಂದೇ ಅರ್ಥ. ಸರ್ಕಾರಕ್ಕೆ ಮಾನ ಮಾರ್ಯಾದೆ ಇದ್ದರೆ ಮುಳುಗಡೆ ಸಂತ್ರಸ್ತರ ಮೇಲೆ ಹಾಕಿರುವ ಎಲ್ಲಾ ಪ್ರಕರಣವನ್ನು ವಾಪಾಸ್ ಪಡೆಯಬೇಕು. ಜಿಲ್ಲೆಯಲ್ಲಿ ಕಳೆದ ೬೦ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ೩೫ ಸಾವಿರ ರೈತರಿಗೆ ನೋಟಿಸ್ ನೀಡಲಾಗಿದೆ. ಸಮರ್ಪಕ ಉತ್ತರ ಸಿಗದಿದ್ದರೆ ಡೀಸಿ ಕಚೇರಿಗೆ ಬೀಗ ಹಾಕಲಾಗುವುದು.- ತೀ.ನಾ ಶ್ರೀನಿವಾಸ್, ಸಂಚಾಲಕರು, ಮಲೆನಾಡು ಹೋರಾಟ ಸಮಿತಿ,
ಅಪರ ಜಿಲ್ಲಾಧಿಕಾರಿಗಳ ಉತ್ತರಕ್ಕೆ ಬಗ್ಗದ ಅನ್ನದಾತ.ಪ್ರತಿಭಟನಾನಿರತ ರೈತರ ಅಹವಾಲು ಆಲಿಸಲು ಬಂದ ಅಪರ ಜಿಲ್ಲಾಧಿಕಾರಿಗಳ ಉತ್ತರಕ್ಕೆ ರೈತರು ಸಿಡಿಮಿಡಿಗೊಂಡರು. ಕಳೆದ ಮೂರು ತಿಂಗಳ ಹಿಂದೆಯೇ ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ. ನೋಟಿಸ್ ನೀಡದಂತೆ ಅರಣ್ಯ ಇಲಾಖೆಗೆ ಕೂಡ ಸೂಚಿಸಲಾಗಿದೆ. ಆದರೆ ಸುಪ್ರೀಂ ಕೋರ್ಟ್ ಆದೇಶ ಮೇರೆಗೆ ಅರಣ್ಯ ಇಲಾಖಾ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳು ರೈತರ ಗಮನಕ್ಕೆ ತಂದರು.ಕೇಂದ್ರ ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಯತ್ನ ಪಡುತ್ತಿದ್ದು, ಅಲ್ಲಿಯವರೆಗೆ ತಾಳ್ಮೆಯಿಂದ ಇರುವಂತೆ ಸೂಚಿಸಿದ ಅವರು, ಈ ಬಗ್ಗೆ ರಾಜ್ಯ ಸರ್ಕಾರದ ಮಟ್ಟದಲ್ಲೂ ಪ್ರಯತ್ನಗಳು ಮುಂದುವರೆದಿದೆ. ವಿಧಾನಸಭೆಯಲ್ಲೂ ಚರ್ಚೆಯಾಗಿದೆ ಎಂದು ಸಮಜಾಯಿಷಿ ನೀಡಿದರು. ಪ್ರತಿಭಟನೆ ವಾಪಾಸ್ಸು ಪಡೆಯುವಂತೆ ಎಷ್ಟೇ ಮನವಿ ಮಾಡಿದರೂ ಪ್ರತಿಭಟನಕಾರರು ಒಪ್ಪದೇ ಧರಣಿ ಕೂತರು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಜಾಯಿಸಿ ನೀಡಬೇಕು. ಅಲ್ಲಿಯವರೆಗೆ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕೂತರು. ಆಗ ಉಪವಿಭಾಗಾಧಿಕಾರಿ ಸ್ಥಳಕ್ಕೆ ಬಂದು ರೈತರಿಗೆ ಸಮಧಾನ ಪಡಿಸಿ ವಸ್ತುಸ್ಥಿತಿಯನ್ನು ವಿವರಿಸಿದರು.