ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕುಂದಾಪುರದ ಪ್ರಾಂಶುಪಾಲರೊಬ್ಬರಿಗೆ ಕೊನೆ ಗಳಿಗೆಯಲ್ಲಿ ಪ್ರಶಸ್ತಿ ತಡೆ ಹಿಡಿದಿರುವುದು ಶಿಕ್ಷಕ ವರ್ಗಕ್ಕೆ ಮಾಡಿದ ಅವಮಾನ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಶಕ್ತಿಗಳು ಇನ್ನೂ ಕೆಲಸ ಮಾಡುತ್ತಿವೆ. ಪ್ರಶಸ್ತಿ ತಡೆ ಹಿಂದೆ ದೇಶದ್ರೋಹಿ ಶಕ್ತಿಗಳು ಮತ್ತು ಓಲೈಕೆ ರಾಜಕಾರಣ ಕೆಲಸ ಮಾಡಿರುವುದು ಸ್ಪಷ್ಟ. ಮುಖ್ಯಮಂತ್ರಿ ಮಧ್ಯ ಪ್ರವೇಶಿಸಿ ಪ್ರಶಸ್ತಿ ಕೊಡಿಸಬೇಕು. ಇಲ್ಲದೆ ಇದ್ದರೆ ಜನ ತಿರುಗಿ ಬೀಳುತ್ತಾರೆ ಎಂದು ಹೇಳಿದರು.
ಅಂದು ಪ್ರಾಂಶುಪಾಲರು ತಮ್ಮ ಕರ್ತವ್ಯ ಮಾತ್ರ ಮಾಡಿದ್ದರು, ಹೈಕೋರ್ಟ್ ಕೂಡ ಮಾಡಿದ್ದು ಸರಿ ಅಂತ ಹೇಳಿದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಅವರೇ ಆಯ್ಕೆ ಮಾಡಿದವರನ್ನು ಅವರೇ ಕೊನೆ ಗಳಿಗೆಯಲ್ಲಿ ಪ್ರಶಸ್ತಿ ಹಿಂದೆ ಪಡೆದದ್ದು ಸರಿಯಲ್ಲ ಎಂದರು.ದಕ್ಷಿನ ಕನ್ನಡ- ಉಡುಪಿ ವಿಧಾನ ಪರಿಷತ್ ಸ್ಥಾನದ ಉಪಚುನಾವಣೆ ಹಿನ್ನೆಲೆ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಅಭಿಪ್ರಾಯ ಸಂಗ್ರಹದ ಬಗ್ಗೆ ಮಾತನಾಡಿದ ಅವರು, ಮುಂಬರುವ ಸ್ಥಳೀಯಾಡಳಿತದ ಪರಿಷತ್ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಇಂದು ಸಭೆ ನಡೆಸಲಾಗಿದೆ. ಮೂಲಭೂತ ತಳಹದಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನಾಯಕರು, ಹಿರಿಯರ ಜೊತೆ ಚರ್ಚಿಸಿ ಯಾವ ರೀತಿ ಚುನಾವಣೆ ಪ್ರಕ್ರಿಯೆ ಮಾಡಬೇಕು ಅಂತ ಚರ್ಚಿಸುತ್ತೇವೆ. ಈ ಬಗ್ಗೆ ವರದಿ ಕೊಡಲು ಕೋರ್ ಕಮಿಟಿಯಲ್ಲಿ ನಿರ್ಧಾರ ಆಗಿತ್ತು. ಅದರಂತೆ ಮಂಗಳೂರಿಗೆ ನನ್ನನ್ನು ಕಳುಹಿಸಿ ಕೊಟ್ಟಿದ್ದಾರೆ. ಎಲ್ಲರ ಬಳಿ ಚರ್ಚಿಸಿ ಅಭಿಪ್ರಾಯ ಸಂಗ್ರಹ ಮಾಡುವುದಾಗಿ ತಿಳಿಸಿದರು.