ದಾಂಡೇಲಿ: ದಾಂಡೇಲಿ ಮತ್ತು ಜೋಯಿಡಾ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಎಸ್.ಐ.ಆರ್. ಜನ ಜಾಗೃತಿ ಸಮಾವೇಶ ಹಾಗೂ ಬಿಎಲ್‌ಎ 2 ತರಬೇತಿ ಕಾರ್ಯಾಗಾರವನ್ನು ನಗರದ ಕಾರ್ಮಿಕ ಭವನದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮತದಾರ ಪಟ್ಟಿ ಸಮಗ್ರ ಪರಿಷ್ಕರಣೆಯ ಜಿಲ್ಲಾ ಉಸ್ತುವಾರಿ ಹಾಗೂ ಶಾಸಕ ಭೀಮಣ್ಣ ನಾಯ್ಕ, ಯಾವುದೇ ವ್ಯಕ್ತಿ ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಮತದಾರ ಗುರುತಿನ ಚೀಟಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಯಾವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದ ಹುನ್ನಾರದಿಂದ ಹಿಂದುಳಿದ ವರ್ಗದವರು, ಕಾರ್ಮಿಕರು, ಕೂಲಿಕಾರರು ಸೇರಿದಂತೆ ಅನೇಕ ಮತದಾರರನ್ನು ಮತದಾರ ಪಟ್ಟಿಯಿಂದ ಕೈ ಬಿಡುವಂತಾಗಿದೆ. ಇವರೆಲ್ಲ ಕಾಂಗ್ರೆಸ್ ಪಕ್ಷದ ಮತದಾರರು. ಈ ನಿಟ್ಟಿನಲ್ಲಿ ಪಕ್ಷ ನೇಮಿಸಿದ ಬಿಎಲ್ಒಗಳು ವಿಶೇಷ ಕಾಳಜಿಯಿಂದ ಈ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ 18 ವಯಸ್ಸು ಮೀರಿದ ಎಲ್ಲರನ್ನು ಎಸ್ಐಆರ್‌ಗೆ ಒಳಪಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ ಮಾತನಾಡಿ, ಎಐಸಿಸಿ ಮತ್ತು ಕೆಪಿಸಿಸಿ ಹಾಗೂ ಮುಖ್ಯಮಂತ್ರಿಗಳು ಸಹ ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಸಕ್ರಿಯರಾಗಿ ಭಾಗವಹಿಸಿ ಅರ್ಹ ಮತದಾರರು ಮತದಾನದಿಂದ ವಂಚಿತವಾಗುವುದನ್ನು ತಪ್ಪಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕೆಂದು ಸಂದೇಶವನ್ನು ರವಾನಿಸಿದ್ದಾರೆ. ಮತ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಎಲ್ಲವೂ ವ್ಯತ್ಯಾಸವಾಗುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರದ ಯಾವುದೇ ಸೌಲಭ್ಯ ದೊರೆಯುವುದಿಲ್ಲ ಎಂದರು.

ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ‌ ಹಲವಾಯಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಮತಗಳು ಮತದಾರ ಪಟ್ಟಿಯಿಂದ ಡಿಲೀಟ್ ಮಾಡುವ ಹುನ್ನಾರ ಬಿಜೆಪಿಯವರಾಗಿದೆ. ನಮ್ಮ ಕಾರ್ಯಕರ್ತರಿಗೆ, ಮುಖಂಡರಿಗೆ ತರಬೇತಿ ನೀಡುವ ಮೂಲಕ ಮಾಹಿತಿ ತಿಳಿಸುವ ಕಾರ್ಯಮಾಡಲಾಗಿದೆ. ನಮ್ಮ ಪಕ್ಷದ ನಿಷ್ಠಾವಂತ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟುಹೋಗದಂತೆ ನೋಡಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷ ಪ್ರಸನ್ನ ಶೆಟ್ಟಿ ಮತದಾನ ಪರಿಷ್ಕರಣೆಯ ಕುರಿತು ತರಬೇತಿ ನೀಡಿದರು. ವೇದಿಕೆಯಲ್ಲಿ ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಪಾಟೀಲ್, ಕೆಪಿಸಿಸಿ ಸದಸ್ಯ ಸದಾನಂದ ದಬಗಾರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ, ಪಂಚ ಗ್ಯಾರಂಟಿ ಯೋಜನಾ ಪ್ರಾಧಿಕಾರದ ದಾಂಡೇಲಿ ಅಧ್ಯಕ್ಷ ರಿಯಾಜ್ ಬಾಬು ಸೈಯದ್, ಪಂಚ ಗ್ಯಾರಂಟಿ ಯೋಜನಾ ಪ್ರಾಧಿಕಾರ ಜೋಯಿಡಾ ಅಧ್ಯಕ್ಷ ಮಂಗೇಶ ಕಾಮತ್, ನಗರಸಭೆ ಮಾಜಿ ಅಧ್ಯಕ್ಷೆ ಯಾಸ್ಮಿನ್ ಕಿತ್ತೂರ್, ಜೋಯಿಡಾ ಬ್ಲಾಕ್ ಕಾಂಗ್ರೆಸ್ ಮಹಿಳಾ ಸಮಿತಿ ಅಧ್ಯಕ್ಷೆ ಸುಕನ್ಯಾ ದೇಸಾಯಿ ಉಪಸ್ಥಿತರಿದ್ದರು.


ಮೋಹನ ಹಲವಾಯಿ ಸ್ವಾಗತಿಸಿದರು. ಕೀರ್ತಿ ಗಾಂವಕರ ನಿರೂಪಿಸಿದರು.