ಶಿಕ್ಷಣದಲ್ಲಿ ಬದಲಾವಣೆಯಾಗದೇ, ಹೋರಾಟಗಳು ಯಶಸ್ವಿ ಆಗಲ್ಲ

| Published : Oct 01 2024, 01:18 AM IST

ಸಾರಾಂಶ

ಶಿಕ್ಷಣದಲ್ಲಿ ಬದಲಾವಣೆ ಆಗದ ಹೊರತು, ಯಾವ ಹೋರಾಟವೂ ಯಶಸ್ವಿ ಆಗುವುದಿಲ್ಲ. ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಪ್ರಜ್ಞೆ ಪ್ರತಿಯೊಬ್ಬರಲ್ಲಿಯೂ ಬರಬೇಕು. ಆಗ ಮಾತ್ರ ಸಮಾಜದಲ್ಲಿ ಸುಧಾರಣೆ ಸಾಧ್ಯ ಎಂದು ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಎಲ್ಲ ಪಕ್ಷದಲ್ಲೂ ಅಹಿಂದ, ಶೋಷಿತರು ಬೆಳೆಯದಂತೆ ಮಾಡಲಾಗುತ್ತಿದೆ: ಜಿ.ಬಿ.ವಿನಯಕುಮಾರ ಆರೋಪ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಶಿಕ್ಷಣದಲ್ಲಿ ಬದಲಾವಣೆ ಆಗದ ಹೊರತು, ಯಾವ ಹೋರಾಟವೂ ಯಶಸ್ವಿ ಆಗುವುದಿಲ್ಲ. ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಪ್ರಜ್ಞೆ ಪ್ರತಿಯೊಬ್ಬರಲ್ಲಿಯೂ ಬರಬೇಕು. ಆಗ ಮಾತ್ರ ಸಮಾಜದಲ್ಲಿ ಸುಧಾರಣೆ ಸಾಧ್ಯ ಎಂದು ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಹೇಳಿದರು.

ನಗರದ ರೋಟರಿ ಭವನದಲ್ಲಿ ಸೋಮವಾರ ಪೆರಿಯಾರ್ ರಾಮಸ್ವಾಮಿ ನಾಯಕರ ವಿಚಾರ ವೇದಿಕೆ ಆಯೋಜಿಸಿದ್ದ ದ್ರಾವಿಡ ಜನಾಂಗದ ಸ್ವಾಭಿಮಾನ ಸಂಕೇತ ಪೆರಿಯಾರ್ ರಾಮಸ್ವಾಮಿ ನಾಯಕರ ಜನ್ಮದಿನೋತ್ಸವದಲ್ಲಿ ಅವರು ಮಾತನಾಡಿದರು. ನಮ್ಮ ಮೌನವೇ, ಧೈರ್ಯ ತೋರದಿರುವುದು ಶಾಪವಾಗಿದೆ. ಸಾಮಾಜಿಕ ಬದಲಾವಣೆಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಪರಿಶಿಷ್ಟ ಜಾತಿ- ಪಂಗಡಗಳು ಸೇರಿದಂತೆ ಶೋಷಿತ ಸಮುದಾಯಗಳಿಗೆ ರಾಜಕಾರಣದಲ್ಲಿ ಅವಕಾಶ ಸಿಗದ ರೀತಿಯ ವಾತಾವರಣ ನಿರ್ಮಾಣವಾಗಿದೆ. ಪ್ರತಿಭೆ, ಜ್ಞಾನ. ನಿಭಾಯಿಸುವ ಸಾಮರ್ಥ್ಯವಿದ್ದರೂ ಕಣ್ಣಿಗೆ ಕಾಣದ ಕೈಗಳು ಪ್ರತಿಭೆಗಳು ಬೆಳೆಯದಂತಹ ವಾತಾವರಣವನ್ನೇ ಸೃಷ್ಟಿಸುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆಗೆ ದಾವಣಗೆರೆಯಲ್ಲಿ ಸ್ಪರ್ಧಿಸುವಂತೆ ಎಲ್ಲರೂ ಧೈರ್ಯ ತುಂಬಿದರು. ಕೊನೆ ಗಳಿಗೆಯಲ್ಲಿ ಹಿಂದಕ್ಕೆ ಸರಿದರು. ಜನರಿಗೆ ಕೊಟ್ಟ ಮಾತಿನಂತೆ ಚುನಾವಣೆಗೆ ಸ್ಪರ್ಧಿಸಿದೆ. ನನಗೂ ಹೊಸ ಅನುಭವ ಆಯಿತು. ಸಮಾಜದಲ್ಲಿ ಅಸಮಾನತೆ ಜಾಸ್ತಿಯಾಗುವ ಜೊತೆಗೆ ಆಳವಾಗಿ ಬೇರೂರಿದೆ. ಶೈಕ್ಷಣಿಕ ಅಸಮಾನತೆ ಹೋಗದ ಹೊರತು ಸಂಪನ್ಮೂಲ ಶಕ್ತಿ ಬರಲ್ಲ. ಶಿಕ್ಷಣ ಇಲ್ಲದೇ ಹೋರಾಟ ಮಾಡಲು ಆಗಲ್ಲ. 650 ಕಿ.ಮೀ. ಪಾದಯಾತ್ರೆ ಮಾಡಿದಾಗ ಹಳ್ಳಿಗಳ ಸರ್ಕಾರಿ ಶಾಲೆಗಳ ಸ್ಥಿತಿ ಕಣ್ಣಾರೆ ಕಂಡಿದ್ದೇನೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗದಂತೆ ಮಾಡಲಾಗಿದೆ. ಖಾಸಗಿ ಶಾಲೆ ಬಂದರೆ ಸರ್ಕಾರಿ ಶಾಲೆ ಮುಚ್ಚುವ ಸ್ಥಿತಿಗೆ ಬರುತ್ತಿದೆ ಎಂದು ಅವರು ವಿಷಾದಿಸಿದರು.

ಮಾನವ ಬಂಧುತ್ವ ವೇದಿಕೆಯ ಪ್ರೊ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಸ್ಥಾಪಿತ ವ್ಯವಸ್ಥೆ ನಾಶಪಡಿಸಿ, ಹೊಸ ವ್ಯವಸ್ಥೆ ಕಟ್ಟಬೇಕು. ಬುದ್ಧ, ಬಸವಣ್ಣ, ಕನಕ, ಅಂಬೇಡ್ಕರ್, ಪೆರಿಯಾರ್ ಮಾಡಿದ ಕೆಲಸ ಇದೇ. ಸುಧಾರಣಾವಾದಿಗಳು, ಅರೆ ಸುಧಾರಣಾವಾದಿಗಳು ಸಣ್ಣಪುಟ್ಟ ಸುಧಾರಣೆ ಮಾಡಿ ಮುನ್ನಡೆಯುವ ವ್ಯವಸ್ಥೆ‌ ಇದೆ. ವೈದಿಕ ಪರಂಪರೆ ವಿರುದ್ಧ ಹೋರಾಡಿ ಪರಿವರ್ತನೆಯ ಕನಸು ಕಂಡಿದ್ದರು ಪೆರಿಯಾರ್. ಇಂದಿನ ಪರಿಸ್ಥಿತಿಯಲ್ಲಿ ಇದು ಸುಲಭವಲ್ಲ. ವೈದಿಕರ ಸೃಷ್ಟಿಸಿರುವ ವ್ಯವಸ್ಥೆ ಅಷ್ಟು ಪರಿಣಾಮ ಬೀರಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಆಗಬೇಕಿದೆ ಎಂದರು.

ಹಿರಿಯ ವಕೀಲರಾದ ಅನೀಸ್‌ ಪಾಷಾ. ಎಂ.ಹನುಮಂತಪ್ಪ ತುಪ್ಪದಹಳ್ಳಿ, ಡಿ.ತಿಪ್ಪಣ್ಣ ಕತ್ತಲಗೆರೆ, ಎಚ್.ಸಿ. ಗುಡ್ಡಪ್ಪ, ರಂಗನಾಥ ಸಿರಿಗೆರೆ, ಸಿದ್ದರಾಮಪ್ಪ ಬುಳಸಾಗರ, ರಂಗನಾಥ ಎಸ್. ಹಾಲುವರ್ತಿ, ಬಿ.ಎಂ. ಬಸವರಾಜಪ್ಪ, ಆರ್.ಬಿ. ರವಿಕುಮಾರ ಇತರರು ಇದ್ದರು.

- - - ಕೋಟ್‌ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಸಮಾಜದಲ್ಲಿ ತನ್ನ ಕೈಯಲ್ಲಾದಷ್ಟು ಬದಲಾವಣೆ ತರಬೇಕೆಂಬ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇನೆ. ಮಹಾತ್ಮರ ಕನಸು, ಆಶಯಗಳಿಗೆ ಜೀವ ಕೊಡಬೇಕಾದ ಕೆಲಸ ಇಂದು ತುರ್ತಾಗಿ ಆಗಬೇಕಿದೆ. ಸಮಾನ ಮನಸ್ಕರು ಒಂದಾಗಬೇಕು. ಸಂವಾದ, ಚರ್ಚಾ ಕಾರ್ಯಕ್ರಮ, ವಿಚಾರಗೋಷ್ಠಿಗಳು ಹೆಚ್ಚಾಗಿ ನಡೆಯುವಂತಾಗಬೇಕು

- ಜಿ.ಬಿ.ವಿನಯಕುಮಾರ, ರಾಜ್ಯಾಧ್ಯಕ್ಷ, ಸ್ವಾಭಿಮಾನಿ ಬಳಗ

- - - -30ಕೆಡಿವಿಜಿ6, 7:

ದಾವಣಗೆರೆಯಲ್ಲಿ ಸೋಮವಾರ ಪೆರಿಯಾರ್ ರಾಮಸ್ವಾಮಿ ನಾಯಕರ ಜನ್ಮದಿನೋತ್ಸವದಲ್ಲಿ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಮಾತನಾಡಿದರು.