ನೀರಿಲ್ಲದೆ ಭೀಮಾ ತೀರದ 12 ಗ್ರಾಮಗಳಲ್ಲಿ ಹಾಹಾಕಾರ!

| Published : Apr 02 2024, 01:01 AM IST

ಸಾರಾಂಶ

ಭೀಮಾ ತೀರದ ಈ ಹನ್ನೆರಡು ಗ್ರಾಮಗಳಿಗೆ ಇತ್ತ ಮಹಾರಾಷ್ಟ್ರದ ಉಜನಿ ನೀರೂ ಹರಿಯಲಿಲ್ಲ, ಅತ್ತ ನಾರಾಯಣಪುರದ ಕೃಷ್ಣೆಯ ನೀರೂ ಲಭ್ಯವಾಗದೆ ಪಕ್ಕದಲ್ಲೇ ನದಿ ಇದ್ದರೂ ಕೂಡಾ ಅಕ್ಷರಶಃ ಶಾಪಗ್ರಸ್ತ ಗ್ರಾಮಗಳಾಗಿ ಕಂಗಾಲಾಗಿವೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬರಗಿ

ನಾರಾಯಣಪುರ ಜಲಾಶಯದಿಂದ 1 ಟಿಎಂಸಿ ಕೃಷ್ಣಾ ನೀರನ್ನು ಹರಿಸಿದರೂ ಕೂಡಾ ಭೀಮಾ ನದಿ ತೀರದಲ್ಲಿರುವ ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಮಣ್ಣೂರು, ಶೇಷಗಿರಿವಾಡಿ, ಕುಡಿಗನೂರ್‌, ಶಿವೂರ್‌, ಉಡಚಾಣ, ಉಡಚಾಣ ಹಟ್ಟಿ ಹಾಗೂ ವಿಜಯಪುರ ಜಿಲ್ಲೆ ಇಂಡಿಯ ಸಾಲೂಟಗಿ, ಬೇನೂರ, ಚಿಕ್ಕಮಣ್ಣೂರ, ಭೂಯ್ಯಾರ, ರೊಡಗಿ, ಖ್ಯಾಡಗಿ, ನಾಗರಳ್ಳಿ ಸೇರಿದಂತೆ 12 ಊರುಗಳ ಭೀಮೆಯ ಒಡಲು ಹನಿ ನೀರೂ ಕಾಣದೆ ಬಣಗುಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಭೀಮಾ ತೀರದ ಈ ಹನ್ನೆರಡು ಗ್ರಾಮಗಳಿಗೆ ಇತ್ತ ಮಹಾರಾಷ್ಟ್ರದ ಉಜನಿ ನೀರೂ ಹರಿಯಲಿಲ್ಲ, ಅತ್ತ ನಾರಾಯಣಪುರದ ಕೃಷ್ಣೆಯ ನೀರೂ ಲಭ್ಯವಾಗದೆ ಪಕ್ಕದಲ್ಲೇ ನದಿ ಇದ್ದರೂ ಕೂಡಾ ಅಕ್ಷರಶಃ ಶಾಪಗ್ರಸ್ತ ಗ್ರಾಮಗಳಾಗಿ ಕಂಗಾಲಾಗಿವೆ.

ಬತ್ತಿದ ಭಈಮೆಗೆ 5 ಟಿಎಂಸಿ ನೀರು ಹರಿಸಿ ಎಂದು ರಾಜ್ಯದ ಸಿಎಂ ಸಿದ್ದರಾಮಯ್ಯ ಪತ್ರ ಬರೆದರು ಬದಿಗಿಟ್ಟ ಮಹಾರಾಷ್ಟ್ರ ಕಳೆದ ಮಾರ್ಚ್‌ 3 ನೇ ವಾರ ಸೊಲ್ಲಾಪುರ, ಅಕ್ಕಲಕೋಟೆ ಗಡಿಯಲ್ಲಿರುವ ತನ್ನ ಗ್ರಾಮಗಳ ನೀರಿನ ಹಾಹಾಕಾರ ನೀಗಿಸಲುನಿತ್ಯ 6 ಸಾವಿರ ಕ್ಯೂಸೆಕ್‌ ನೀರು 12 ದಿನ ಹರಿಬಿಟ್ಟಾಗಲೂ ಮೇಲೆ ನಮೂದಿಸಿದ 12 ಊರುಗಳಿಗೆ ಆ ನೀರು ಹರಿದು ಬರಲಿಲ್ಲ!

ಮಹಾರಾಷ್ಟ್ರ ಮೊಂಡುತನ ತೋರುತ್ತಿದೆ, ನಾವೇ ಕೃಷ್ಣಾ ನೀರನ್ನು ಹರಿಬಿಟ್ಟು ಭೀಮಾ ತೀರದ ಜನ- ಜಾನುವಾರುವಾರು ದಾಹ ಶಮನ ಮಾಡುತ್ತೇವೆಂದು ಬತ್ತಿದ ಭೀಮೆಯೊಡಲು ತುಂಬಲು ಇತ್ತ ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯದಿಂದ 1 ಟಿಎಂಸಿ ಕೃಷ್ಣಾನೀರು ಹರಿಸಿದರೂ ಕೂಡಾ ಅದು ಈ ಗ್ರಾಮಗಳತ್ತ ಹರಿಯಲೇ ಇಲ್ಲ.

ಮಹಾರಾಷ್ಟ್ರದವರು ಉಜನಿ ಜಲಾಶಯದಿಂದ ನೀರು ಹರಿಸಿ ಅದು ಅಕ್ಕಲಕೋಟೆ ತಾಲೂಕಿನ ಹಿಳ್ಳಿ ಬಾಂದಾರು ತಲುಪುತ್ತಿದ್ದಂತೆಯೇ ನೀರು ಹರಿಸೋದನ್ನೇ ನಿಲ್ಲಿಸಿಬ್ಬಿಟ್ಟಿದ್ದರಿಂದ ಭೀಮೆಗೆ ಉಜನಿ ನೀರು ಬರಲಿಲ್ಲ.

ಭೀಮಾ ನದಿಗೆ ನಾರಾಯಣಪುರ ಜಲಾಶಯದಿಂದ ಕೃಷ್ಣೆಯ ನೀರು ಹರಿಸೋ ವಿಚಾರವಾಗಿ ಬಸವಸಾಗರ ಅಣೆಕಟ್ಟೆ ಇಂಜಿನಿಯರಿಂಗ್‌ ವಿಭಾಗ, ಕಲಬುರಗಿ ಪ್ರಾದೇಶಿಕ ಆಯುಕ್ತರು, ಇಲ್ಲಿನ ಜಿಲ್ಲಾಧಿಕಾರಿಗಳು ಸ್ಥಳೀಯ ಮಾಹಿತಿ ಸಂಗ್ರಹಿಸದೆ ತರಾತುರಿಯಲ್ಲಿ ಕೈಗೊಂಡ ನಿಲುವಿನಿಂದಾಗಿ ಈ 12 ಗ್ರಾಮಗಳ ಭೀಮೆಯೊಡಲು ಕೃಷ್ಣೆಯ ನೀರಿನಿಂದ ಹಸಿಯಾಗಲೇ ಇಲ್ಲ!

ನೀರು ಹರಿಸಲು ಹಳೆ ಮಾರ್ಗ ಬಳಕೆ, ಸ್ಥಳೀಯ ಜ್ಞಾನದ ಕೊರತೆಯೇ 12 ಹಳ್ಳಿ ಗೋಳಿಗೆ ಕಾರಣ!

ಭೀಮೆಗೆ ನಾರಾಯಣಪುರ ಜಲಾಶದಿಂದ ನೀರು ಹರಿಸುವಾಗ ಹಳೇ ಮಾರ್ಗವನ್ನೇ ಅನುಸರಿಸಿದ ಕಲಬುರಗಿ ಪ್ರಾ ಆಯುಕ್ತರು, ಜಿಲ್ಲಾಡಳಿತದ ಆತುರದ ಹಾಗೂ ಸ್ಥಳೀಯ ಪರಿಜ್ಞಾನದ ಕೊರತೆಯ ನಿಲುವೇ 12 ಹಳ್ಳಿಗಳ ಹಾಹಾಕಾರಕ್ಕೆ ಕಾರಣ ಎನ್ನಬಹುದಾಗಿದೆ. ಕಲಬುರಗಿ ನಗರಕ್ಕೆ ಕುಡಿಯುವ ನೀರು ಪೂರೈಸಲು ಭೀಮಾ ನದಿಗೇ ಅಡ್ಡಲಾಗಿ ಸರಡಗಿ ಬಳಿ ಬಾಂದಾರಿದೆ. ಈ ಬಾಂದಾರಿಗೆ ನೀರಿನ ಕೊರತೆ ಕಾಡಿದಾಗೆಲ್ಲಾ ನಾರಾಯಣಪುರದಿಂದ ನೀರು ಹರಿಸಲಾಗುತ್ತಿರುವ ಶಾರ್ಟ್‌ ಕಟ್‌ ದಾರಿಯನ್ನೇ ಈಗಲೂ ಬಳಸಿದ್ದೇ 12 ಗ್ರಾಮಗಳ ಭೀಮೆ ಬಣಗುಡುವಂತಾಗಿದೆ.

ಹೋರಾಟಗಾರರ ಬೇಡಿಕೆಯಂತೆ ತಕ್ಷಣವೇ ಮಹಾರಾಷ್ಟ್ರದ ಉಜನಿಯಿಂದ ನೀರು ಹರಿದು ಬಾರದೆ ಹೋದರೂ ಪಕ್ಕದ ನಾರಾಯಣಪುರದಿಂದಲಾದರೂ 1 ಟಿಎಂಸಿ ನೀರು ಅಫಜಲ್ಪುರದಲ್ಲಿ ಪ್ರವಹಿಸುವ ಭೀಮೆಗೆ ಹರಿಸೋಣವೆಂದು ಕಲಬುರಗಿ ಪ್ರಾ. ಆಯುಕ್ತ ಕೃಷ್ಣ ಬಾಜಪೇಯಿ ಮಾ.27ರಂದೇ ಆದೇಶ ಹೊರಡಿಸಿ, 1 ಟಿಎ₹ಸಿ ನೀರು ಜಲಾಶಯದಿಂದ ಕೆಬಿಜೆಎನ್‌ಎಲ್ ಕಾಲುವೆ ನಂಬರ್‌ 84 ಬಳಗಾನೂರ, ನಂ-11 ಕುಳಕಮಡಿ, ಎಸ್ಕೇಪ್‌ ಗೇಟ್‌ 50 ಅಥವಾ ಇಂಡಿ ಶಾಖಾ ಕಾಲುವೆಯಿಂದ 13, 14ನೇ ವಿತರಣೆ ಕಾಲುವೆಯಿಂದ ಸದರಿ ನೀರನ್ನು ಭೀಮಾ ನದಿಗೆ ಹರಿಸುವಂತೆ ಸೂಚಿಸಿದ್ದರು. ಹೀಗೆ ಸೂಚಿತ ಮಾರ್ಗದಲ್ಲಿ ನೀರು ಹರಿದಿದ್ದರಿಂದಲೇ 12 ಗ್ರಾಮಗಳ ಭೀಮಾ ತೀರ ನೀರಿಲ್ಲದೆ ಬಣಗುಟ್ಟಲು ಕಾರಣವಾಗಿದೆ.

ಶೇಷಗಿರಿವಾಡಿ, ಮಣ್ಣೂರಿನಿಂದೇ ಭೀಮಾ ನದಿ ಕಲಬುರಗಿ ಜಿಲ್ಲೆಗೆ ಪ್ರವಹಿಸೋದು. ಇಂಡಿ ಶಾಖಾ ಕಾಲುವೆಯಿಂದ ಹಿರೇ ಬೇವನೂರ ಎಸ್ಕೇಪ್ ನಂಬರ 118, ಬೇನೂರ ಕಾಲುವೆ ನಂಬರ್‌ 23- 24 ಮುಖಾಂತರ ಕೃಷ್ಣೆಯ ನೀರು ಹರಿಸಿದ್ದರೆ ಇಂಡಿ ತಾಲೂಕಿನ ಸಾಲೂಟಗಿ, ಬೇನೂರ, ಚಿಕ್ಕಮಣ್ಣೂರ, ಭೂಯ್ಯಾರಗುಂಟ ಹರಿದು ಬಂದು ಸಂಗಮ ಬಳಿ ಭೀಮಾ ನದಿ ತಲುಪುತ್ತಿತ್ತು. ಇದರಿಂದ ಅಫಜಲ್ಪುರ ತಾಲೂಕಿನ ಉಡಚಾಣ, ಶಿವೂರ, ಕೂಡಿಗನೂರ, ಮಣ್ಣೂರ, ಶೇಷಗಿರಿ. ಶಿವೂರ್‌, ಉಡಚಾಣ ಹಟ್ಟಿ ಹಾಗೂ ಇಂಡಿ ತಾಲೂಕಿನ ರೊಡಗಿ, ಖಾಡಗಿ, ನಾಗರಳ್ಳಿ, ಭೂಯ್ಯಾರ, ಚಿಕ್ಕಮಣ್ಣೂರ ನದಿ ಒಡಲಿಗೆ ಭರಪೂರ್‌ ನೀರು ಲಭ್ಯವಾಗುತ್ತಿತ್ತು.

ಮೇಲೆ ತಿಳಿಸಿದಂತೆ ಈ ಮಾರ್ಗದಲ್ಲಿ ಭೀಮೆಗೆ ನೀರು ಹರಿಸಲು ಅವಕಾಶವಿದ್ದರೂ ಕೂಡಾ ಪ್ರಾ. ಆಯುಕ್ತರು, ಜಿಲ್ಲಾಧಿಕಾರಿಗಳು, ಕೆಬಿಜೆಎನ್‌ಎಲ್‌ ಅದ್ಯಾಕೆ ಈ ಮಾರ್ಗವನ್ನೇ ಅನುಸರಿಸುತೋ? ಈ ಹೊಸ ದಾರಿಯಿಂದ ನೀರು ಹರಿದಿದ್ದರೆ 18 ರಿಂದ 20 ಕಿಮೀ ಭೀಮಾ ನದಿ ತೀರಕ್ಕೂ ನೀರು ಲಭ್ಯವಾಗುತ್ತಿತ್ತು. ಸುಲಭದ ಈ ದಾರಿ ಜಿಲ್ಲಾಡಳಿತ ಬದಿಗೊತ್ತಿದ್ದರಿಂದಲೇ 12 ಗ್ರಾಮಗಳಲ್ಲಿ ನೀರಿನ ಹಾಹಾಕಾರ ಮುಗಿಲು ಮುಟ್ಟಿದೆ.

ಇನ್ನೂ ಕಾಲ ಮಿಂಚಿಲ್ಲ, ಮರು ಆದೇಶ ಮಾಡಲಿ

ಇತ್ತ ಉಜನಿ ನೀರು, ಅತ್ತ ಕೃಷ್ಣಾ ನೀರು ಎರಡೂ ದೊರಕದೆ ಕಂಗಾಲಾಗಿರುವ ನದಿ ತೀರದ ಜನತೆ ಹೌಹಾರಿದ್ದಾರೆ. ಇದು ಸರಿಯಾದ ಕ್ರಮವಲ್ಲ, ನದಿ ಬತ್ತಿ ಬರಿದಾಗಿ 3 ತಿಂಗಳಾಗಿತ್ತು. ಈಗ ಕೃಷ್ಣಾನದಿ ನೀರು ಹರಿಸಿದ್ದು ಸಂತಸ ತಂದಿತ್ತು. ಆದರೆ ಬೇವನೂರ್‌, ಹಿಂಗಣಿ ಬಾಂದಾರು ಮೂಲಕ ನೀರು ಹರಿಸದೆ ಬೇರೆ ದಾರಿ ಬಳಸಿದ್ದೇ ನಾವು ನೀರಿಲ್ಲದೆ ಪರದಾಡುವಂತಾಗಿದೆ. ಪ್ರಾ. ಆಯುಕ್ತರು ತಮ್ಮ ಮಾ. 27 ರ ಆದೇಶ ಮಾರ್ಪಾಟು ಮಾಡಿ ಮರು ಆದೇಶ ಮಾಡಲಿ, ನಮ್ಮೂರುಗಳಿಗೂ ನೀರು ಹರಿದು ಬರುವಂತೆ ತುರ್ತು ಕ್ರಮಕ್ಕೆ ಮುಂದಾಗಲಿ ಎಂದು ಆಗ್ರಹಿಸುತ್ತಿದ್ದಾರೆ.ನಮ್ಮೂರು ಮಣ್ಣೂರು ಮೇಲೆಯೇ ಮಹಾರಾಷ್ಟ್ರದ ಗಡಿ ಇದೆ, ಅಲ್ಲಿರೋ ಅಕ್ಕಲಕೋಟೆ ತಾಲೂಕಿನ ಹಿಳ್ಳಿ ಬಾಂದಾರುವರೆಗೂ ಭರಪೂರ್‌ ಉಜನಿ ನೀರು ನಿಂತಿದೆ. ಕೆಳಗಡೆ ಉಡಚಾಣದ ಮಿರಗಿಯಿಂದ ಕೃಷ್ಣೆಯ ನೀರು ಭೀಮೆಯಲ್ಲಿ ಹರಿಯುತ್ತಿದೆ. ಆದರೆ ಇವೆರಡರ ನಡುವಿರುವ ಮಣ್ಣೂರು, ಶೇಷಗಿರಿ ಸೇರಿದಂತಿರುವ 12 ಊರುಗಳಲ್ಲಿ ನೀರಿಲ್ಲದೆ ಹಾಹಾಕಾರ ಶುರುವಾಗಿದೆ. ಬೇವನೂರು ಕಾಲುವೆ ಮೂಲಕ ಹಿಂಗಣಿ ಬಾಂದಾರಿನಿಂದ ನೀರು ಹರಿದಿದ್ದರೆ ಎಲ್ಲರಿಗೂ ಅನುಕೂಲವಗುತ್ತಿತ್ತು. ಜಿಲ್ಲಾಡಳಿತ ಯಾಕೆ ಹೀಗೆ ಮಾಡಿದೆಯೋ? ಅದಾಗಲೇ ಉಜನಿ ನೀರು ಗಡಿಯವರೆಗೂ ಇರೋದರಿಂದ ಹೆಚ್ಚಿನ ಪ್ರಮಾಣದ ನೀರು ಸಹ ವ್ಯರ್ಥವಾಗೋದಿಲ್ಲ. ಈಗಲಾದರೂ ಈ ದಾರಿಯಲ್ಲಿ ನೀರು ಹರಿಸಿ ನಮ್ಮ ಗೋಳಿಗೂ ಪರಿಹಾರ ಕೊಡಲಿ.

- ಚಂದ್ರಶೇಖರ ಹೊಸೂರಕರ್‌, ಹಿರಿಯ ರಂಗಕರ್ಮಿ, ರೈತ, ಮಣ್ಣೂರು