ಸಾರಾಂಶ
ಕೊಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರಾದ ಒಡೆಯರು ಸ್ವಂತ ಕವಿಗಳು ಆಗಿದ್ದರು ಎಂದು ಪ್ರಬೋಧಿನಿ ಗರುಕುಲದ ಶ್ರೀಧರ ಆಚಾರ್ಯ ಹೇಳಿದರು.
- ಹರಿಹರಪುರದಲ್ಲಿ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಶ್ರೀಧರ ಆಚಾರ್ಯ
ಕನ್ನಡಪ್ರಭ ವಾರ್ತೆ, ಕೊಪ್ಪಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರಾದ ಒಡೆಯರು ಸ್ವಂತ ಕವಿಗಳು ಆಗಿದ್ದರು ಎಂದು ಪ್ರಬೋಧಿನಿ ಗರುಕುಲದ ಶ್ರೀಧರ ಆಚಾರ್ಯ ಹೇಳಿದರು.ಹರಿಹರಪುರ ಹೋಬಳಿ ಕಸಾಪ ಘಟಕದಿಂದ ಭಾನುವಾರ ಮಲ್ಲೇಶಯ್ಯನವರ ಛತ್ರದಲ್ಲಿ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ ಜನ್ಮ ದಿನ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ನಾಡಿನ ಹಾಗೂ ಜನತೆಯ ಬಗ್ಗೆ ಅಪಾರ ಅಭಿಮಾನ, ದೂರ ದೃಷ್ಟಿ ಹೊಂದಿದ್ದ ಒಡೆಯರ್ ಹಲವಾರು ಹೊಸ ಹೊಸ ಯೋಜನೆಗಳನ್ನು ಜನರ ಅನುಕೂಲಕ್ಕಾಗಿ ಜಾರಿ ಮಾಡಿದರು.
ಪ್ರಪ್ರಥಮ ಬಾರಿಗೆ ೮ ಸಾವಿರ ಶಾಲೆಗಳ ಪ್ರಾರಂಭ ಎಲ್ಲಾ ವರ್ಗದ ಜನರಿಗೂ ಶಿಕ್ಷಣದ ಹಕ್ಕು, ವಯಸ್ಕರ ಶಿಕ್ಷಣ ಮಾನಸಗಂಗೋತ್ರಿ ವಿಶ್ವವಿದ್ಯಾಲಯ ಹಾಗೂ ಪ್ರಜೆಗಳ ಆರೋಗ್ಯ ರಕ್ಷಣೆಗೆ ಕಣ್ಣಿನ ಆಸ್ಪತ್ರೆ, ಕ್ಷಯ ರೋಗ ನಿವಾರಣ ಆಸ್ಪತ್ರೆ ವಾಣಿವಿಲಾಸ ಅಣೆಕಟ್ಟು, ಕೆಆರ್‌ಎಸ್ ಅಣೆಕಟ್ಟು ಹಲವಾರು ಕಾರ್ಖಾನೆಗಳ ಸ್ಥಾಪನೆ, ಪ್ರಥಮ ಕಾಫಿ ಮಂಡಳಿ, ರಸ್ತೆ ಮಾರ್ಗದ ಅಭಿವೃದ್ಧಿ ಹಾಗೂ ದೇವದಾಸಿ ಪದ್ಧತಿ, ಬಸವ ಪದ್ಧತಿ, ಗೆಜ್ಜೆಪೂಜೆ ಮುಂತಾದ ಸಾಮಾಜಿಕ ಪಿಡುಗುಗಳ ನಿವಾರಣೆಗೆ ಕಾನೂನು ತಂದರು. ಪ್ರಪ್ರಥಮ ಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕು ತಂದರು ಹಾಗೂ ನ್ಯಾಯ ವಿಧೇಯಕ ಮಂಡಳಿ ಪ್ರಜಾ ಪ್ರತಿನಿಧಿ ಸಭೆ ಮೂಲಕ ತಮ್ಮ ಆಡಳಿತದಲ್ಲಿ ಪ್ರಜೆಗಳ ಭಾಗವಹಿಸುವಿಕೆಗೂ ಅವಕಾಶ ನೀಡಿದ್ದರು. ಜನರ ಹಿತದೃಷ್ಟಿ ಯಿಂದ ಹಲವಾರು ಕಾರ್ಯಕ್ರಮ ಅನುಷ್ಠಾನ ಮಾಡಿದಂತಹ ಹಿರಿಮೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದ್ದು ಎಂದರು.ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಶ ಭಂಡಿಗಡಿ ಮಾತನಾಡಿ ಕಸಾಪದಿಂದ ಹಳ್ಳಿಗಳಲ್ಲಿರುವ ಹಲವಾರು ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಹೊಸ ಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದರ ಜೊತೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ, ಜನಪದ, ನಾಡು, ನುಡಿ, ಭಾಷೆ ಕುರಿತು ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸ್ವಾಗತಾರ್ಹ ಎಂದರು.ಕಸಾಪ ಕೊಪ್ಪ ತಾಲೂಕು ಘಟಕದ ಸಂಚಾಲಕ ಜಿನೇಶ್ ಇರ್ವತ್ತೂರು ಮಗುವಿನ ಭಾವನೆ ಅಭಿವ್ಯಕ್ತ ಗೊಳಿಸಲು ಭಾಷೆ ಅತಿಮುಖ್ಯ. ಎರಡು ಸಾವಿರ ವರ್ಷಗಳ ಇತಿಹಾಸವಿರುವ ನಮ್ಮ ಕನ್ನಡ ಭಾಷೆ ನಮ್ಮ ಹೆಮ್ಮೆ. ಕನ್ನಡ ಸಾಹಿತ್ಯಕ್ಕೆ ಹಲವಾರು ಕವಿಗಳ ಸಾಹಿತಿಗಳ ಕೊಡುಗೆ ಅಪಾರ ಎಂದರು.ಕಸಾಪ ಹೋಬಳಿ ಘಟಕ ಹರಿಹರಪುರ ಕೋಶಾಧ್ಯಕ್ಷ ಎ.ಓ ವೆಂಕಟೇಶ್ ಮಾತನಾಡಿದರು. ಪ್ರಪ್ರಥಮ ಬಾರಿಗೆ ಆಯೋಜಿಸಿದ್ದ ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮವನ್ನು ಭಂಡಿಗಡಿ ಶ್ರೀ ದುರ್ಗಾಪರ ಮೇಶ್ವರಿ ಪ್ರೌಢ ಶಾಲೆ ಶಿಕ್ಷಕ ರಮೇಶ್ ಮತ್ತು ಹರಿಹರಪುರ ಹಿ.ಪ್ರಾ. ಶಾಲೆ ಶಿಕ್ಷಕಿ ಅಸ್ಮಾ ನಡೆಸಿಕೊಟ್ಟರು.