ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನು 1915 ರಲ್ಲಿ ಸ್ಥಾಪನೆ ಮಾಡುವ ಮೂಲಕ ಕನ್ನಡ ನಾಡು-ನುಡಿ ಹಾಗೂ ನೆಲ-ಜಲ ಮತ್ತು ಕನ್ನಡ ನಾಡಿನ ಪರಂಪರೆ, ಸಾಹಿತ್ಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದವರು ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಕನ್ನಡ ಉಪನ್ಯಾಸಕ ಡಾ.ಚಂದ್ರಶೇಖರ ಕಾಳನ್ನವರ ಹೇಳಿದರು.ನವನಗರದ ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಸೋಮವಾರ ಜರುಗಿದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ, ಉಪನ್ಯಾಸ ನೀಡಿ ಮಾತನಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಮತ್ತು ಸಾಧನೆ ಕನ್ನಡಿಗರಿಗೆ ಸ್ಫೂತಿಯಾಗಿದೆ. ಅವರು ನೀರಾವರಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ಬ್ಯಾಂಕ್, ರಸ್ತೆ ಮತ್ತು ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ನಾಡಿನ ವಿವಿಧ ಕ್ಷೇತ್ರದಲ್ಲಿ ಗಣನೀಯವಾದ ಸೇವೆ ಮಾಡಿ, ಕನ್ನಡಿಗರ ಮಹಾರಾಜರಾಗಿದ್ದರು. ಅವರು ಸರ್ವಧರ್ಮ ಸಂಹಿಷ್ಣತೆ ಪಾಲನೆ ಮಾಡುವ ಮೂಲಕ ಕನ್ನಡ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಲೋಕ ಶ್ರೀಮಂತಗೊಳಿಸಿದ ಮಹಾರಾಜರಾಗಿದ್ದಾರೆ ಎಂದರು.
ಬಾಗಲಕೋಟೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ದಿನಾಚರಣೆ ಆಚರಿಸುವ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರ ಪರಿಷತ್ತಾಗಿಸುವಲ್ಲಿ ಕಾರ್ಯೋನ್ಮುಕರಾಗಿದ್ದೇವೆ ಎಂದು ಹೇಳಿದರು.ಹಿರಿಯ ಸಾಹಿತಿಗಳಾದ ಡಾ. ಮೈನುದ್ದೀನ್ ರೇವಡಿಗಾರ ಮತ್ತು ಜಾನಪದ ವಿದ್ವಾಂಸರಾದ ಡಾ.ಪ್ರಕಾಶ ಖಾಡೆ ಅವರು ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ರಾಜ ಮನೆತನದ ಕೀತರ್ಿ ಬೆಳಗಿಸಿ, ಸಾರ್ವಜನಿಕ ಪರವಾದ ಉತ್ತಮ ಸೇವೆಯನ್ನು ಮಾಡಿದ್ದಾರೆಂದು ಸ್ಮರಣೆ ಮಾಡಿದರು. ಹಿರಿಯ ಪತ್ರಕರ್ತರಾದ ಕಿರಣ ಬಾಳಗೋಳ ಅವರು ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ ಮೈಸೂರು ರಾಜ್ಯ ಸುವರ್ಣಯುಗವಾಗಿತ್ತು, ನೂರಾರು ಸಾಧನೆಗಳನ್ನು ಮಾಡಿದ ಹೆಗ್ಗಳಿಕೆ ಇವರದಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಿ.ಎನ್.ಬಾಳಕನ್ನವರ, ಕೃಷ್ಣಾ ಯಡಹಳ್ಳಿ, ಪ್ರೊ.ಸಂಗಮೇಶ ಬ್ಯಾಳಿ ಮತ್ತು ಕಸಾಪ ಬಾಗಲಕೋಟೆ ತಾಲೂಕ ಘಟಕದ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ಶಿಕ್ಷಕ ನೀಲಪ್ಪ ಗಾಣಿಗೇರ ವೇದಿಕೆ ಮೇಲೆ ಉಪಸ್ಥಿತರಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ಪಾಂಡುರಂಗ ಸಣ್ಣಪ್ಪನವರ ಸ್ವಾಗತಿಸಿದರು, ನೀಲಪ್ಪ ಗಾಣಿಗೇರ ವಂದಿಸಿದರು, ಪ್ರೊ.ಸಂಗಮೇಶ ಬ್ಯಾಳಿ ಕಾರ್ಯಕ್ರಮ ನಿರೂಪಿಸಿದರು.