ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಬೊಮ್ಮಲಾಪುರ ಗ್ರಾಮದ ಬಳಿ ಹುಲಿ ಪತ್ತೆಗೆ ಹೋದ ಅರಣ್ಯ ಸಿಬ್ಬಂದಿಯನ್ನು ಬೋನಿಗೆ ರೈತರು ಕೂಡಿ ಹಾಕಿದ ಸಂಬಂಧ ಐವರು ರೈತರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಎಫ್‌ಐಆರ್ ದಾಖಲಾದ ಬಳಿಕ ಕಮಲಮ್ಮ ಎಂಬ ಮಹಿಳೆ ಅರಣ್ಯ ಇಲಾಖೆ ಎಸಿಎಫ್, ಆರ್‌ಎಫ್‌ಒ ಸೇರಿದಂತೆ 15 ಮಂದಿ ವಿರುದ್ಧ ದೂರು ಕೊಟ್ಟಿದ್ದಾರೆ.13 ಮಂದಿ ಅರಣ್ಯ ಸಿಬ್ಬಂದಿ ನನ್ನ ಮೇಲೆ ಹಲ್ಲೆ ಮಾಡಿ, ಕಪಾಳಕ್ಕೆ ಹೊಡೆದು, ಕೈ ಹಿಡಿದು ಎಳೆದಾಡಿ ತಳ್ಳಿದ್ದು ಅಲ್ಲದೆ ನನ್ನ ಮಗ ಗಂಗಾಧರಸ್ವಾಮಿ ಸೇರಿದಂತೆ ಐವರ ಮೇಲೂ ಕತ್ತು ಹಿಡಿದು ಹಿಸುಕಿ, ಕೊಲೆ ಮಾಡಲು ಯತ್ನಿಸಿ, ಜೀಪು ಹರಿಸಿ ಹತ್ಯೆಗಯಲು ಯತ್ನಿಸಿದ್ದಾರೆ. ಅಲ್ಲದೆ ಎಸಿಎಫ್ ಕೆ.ಸುರೇಶ್, ಆರ್‌ಎಫ್‌ಒ ಶಿವಕುಮಾರ್ ಬೈದು ಐವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಸಾಯಿಸ್ತೀನಿ ಎಂದಿದ್ದಾರೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಪೊಲೀಸರು ಕಮಲಮ್ಮ ನೀಡಿ ಅರ್ಜಿಯನ್ನು ನೋಂದಾಯಿಸಿಕೊಂಡಿದ್ದು, ವಿಚಾರಣೆಗೆ ಇಟ್ಟಿದ್ದಾರೆ.ಕೇಸು ದಾಖಲಿಸಿಲ್ಲ:
ಅರಣ್ಯ ಇಲಾಖೆ ನೀಡಿದ ದೂರು ಸ್ವೀಕರಿಸಿರುವ ಪೊಲೀಸರು ಐವರು ರೈತರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಮಹಿಳೆ ಕಮಲಮ್ಮ ನೀಡಿದ ದೂರನ್ನು ದಾಖಲಿಸಿಲ್ಲ ಎಂದು ರೈತ ಸಂಘದ ಮಹದೇವಪ್ಪ ಮಾಡ್ರಹಳ್ಳಿ, ಅರಿಶಿನ ಬೆಳಗಾರರ ಸಂಘದ ನಾಗಾರ್ಜನ್, ಬಿಜೆಪಿ ಮುಖಂಡ ಅಭಿಷೇಕ್ ಗುಡಿಮನೆ ಆರೋಪಿಸಿದ್ದಾರೆ.ಹುಲಿ ಪತ್ತೆಗೆ ಹೋದ ಅರಣ್ಯ ಸಿಬ್ಬಂದಿ ಬೋನಿನಲ್ಲಿ ಕೂಡಿಟ್ಟ ಮಾಹಿತಿ ಬಂದ ತಕ್ಷಣ ನಾನು ಸೇರಿದಂತೆ ಬಂಡೀಪುರ ಎಸಿಎಫ್ ನವೀನ್ ಕುಮಾರ್, ಗುಂಡ್ಲುಪೇಟೆ ಪೊಲೀಸ್ ಇನ್‌ಸ್ಪೆಕ್ಟರ್ ಜಯಕುಮಾರ್‌ಗೆ ಬೋನಿನಲ್ಲಿ ಸಿಬ್ಬಂದಿ ಕೂಡಿ ಹಾಕಿದ್ದಾರೆ ಎಂದು ಹೇಳಿದ್ದೆವು. ಬಳಿಕ ಪೊಲೀಸರು ಸ್ಥಳಕ್ಕೆ ನಮಗಿಂತ ಮೊದಲೇ ಹೋಗಿದ್ದರು. ನಾನು ಹೋದಾಗ ಯಾವುದೇ ಗಲಾಟೆ ನಡೆದಿಲ್ಲ. ಹಲ್ಲೆ, ಕೊಲೆ ಬೆದರಿಕೆ ಹಾಕಿಲ್ಲ. ಹುಲಿ ಸೆರೆಗೆ ಸಾಕಾನೆ ಕರೆತರಲು ಪೊಲೀಸರು ಇರುವಾಗಲೇ ಬೊಮ್ಮಲಾಪುರದಿಂದ ಹೊರಟು ಹೋಗಿದ್ದೇನೆ ಎಂದು ಎಸಿಎಫ್ ಕೆ.ಸುರೇಶ್ ಹೇಳಿದ್ದಾರೆ.