ಸಾರಾಂಶ
ಶಹಾಪುರ ತಾಲೂಕಿನ ಮದ್ದರಿಕಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಶಹಾಪುರ
ಹೆಣ್ಣು ಮಕ್ಕಳು ಅಬಲೆಯಲ್ಲ ಹಾಗೂ ಕೇವಲ ಆಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಬದಲಾಗಿ ರಾಷ್ಟ್ರ ಮತ್ತು ಸಾರ್ವಜನಿಕರ ರಕ್ಷಣೆಗೂ ಸದಾ ಸಿದ್ಧಳಾಗಿರುತ್ತಾಳೆ ಎಂದು ಹಿರಿಯ ಅಂಗನವಾಡಿ ಕಾರ್ಯಕರ್ತೆ ಮಹಾನಂದ ಸಗರ ಹೇಳಿದರು. ತಾಲೂಕಿನ ಮದ್ದರಿಕಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾಲೂಕು ಅಂಗನವಾಡಿ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಸಿಐಟಿಯು ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಪುರುಷರಷ್ಟೇ ಸರಿಸಮಾನವಾಗಿ ಕಾರ್ಯ ನಿರ್ವಹಿಸುವ ಮೂಲಕ ಹೆಣ್ಣು ಅಬಲೆ ಅಲ್ಲ, ಸಬಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು. ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಬಸಲಿಂಗಮ್ಮ ನಾಟೇಕಾರ್ ಮಾತನಾಡಿ, ಹೆಣ್ಣು ಮಕ್ಕಳಿಲ್ಲದೆ ಜೀವನವಿಲ್ಲ. ಇದು ಎಲ್ಲರೂ ಒಪ್ಪಿಕೊಳ್ಳಬೇಕಾದ ವಿಚಾರ. ಹೆಣ್ಣು ಉದ್ಯೋಗದ ವಿಷಯಕ್ಕೆ ಬಂದಾಗ ಅಷ್ಟೇ ಪರಿಪೂರ್ಣವಾಗಿ ಕೆಲಸ ಮಾಡುತ್ತಾಳೆ. ತನಗೆ ಯಾವುದೇ ಸಮಸ್ಯೆಗಳಿದ್ದರೂ ಸ್ವಾವಲಂಬಿಯಾಗಿ ನಿಂತು ಕೆಲಸ ಮಾಡುತ್ತಾಳೆ ಎಂದರು.ಸಿಐಟಿಯು ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಮಾತನಾಡಿ, ವಿದ್ಯೆ ಎಂಬುದಕ್ಕೆ ದೇವಿಯೇ ಸರಸ್ವತಿಯಾಗಿರುವಾಗ ಹೆಣ್ಣುಮಕ್ಕಳಿಗೆ ಪಾಂಡಿತ್ಯ ಇರದಿದ್ದೀತೇ? ಇದನ್ನು ನಮ್ಮ ಸಮಾಜ ಅರ್ಥೈಸಿಕೊಳ್ಳಬೇಕು ಎಂದ ಅವರು, ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ್ದಿದರೂ ಪರಾವಲಂಬಿ ಎನ್ನುವ ಸಾಮಾಜಿಕ ಸಂಕೋಲೆಯಿಂದ ಆಕೆ ಮುಕ್ತಳಾಗಬೇಕು. ಪೋಕ್ಸೋ ಕಾಯ್ದೆ, ಹೆಣ್ಣು ಭ್ರೂಣ ಹತ್ಯೆ ನಿಷೇಧ, ಬಾಲ್ಯ ವಿವಾಹ ನಿಷೇಧ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆಗಳ ಬಗ್ಗೆ ಸರ್ಕಾರ ಮತ್ತು ಸಂಘ-ಸಂಸ್ಥೆಗಳಿಂದ ಜಾಗೃತಿ ಕೆಲಸವಾಗಬೇಕಿದೆ ಎಂದರು.
ಹಿರಿಯ ಅಂಗನವಾಡಿ ಕಾರ್ಯಕರ್ತೆ ಅನಸೂಯ ಮದ್ದರಿಕಿ, ನೌಕರರ ಸಂಘದ ಖಜಾಂಚಿ ಲಕ್ಷ್ಮೀ ಶಹಾಪುರ, ಮಹಾದೇವಿ ಕಾಡಮಗೇರಾ, ಕಾಳಮ್ಮ ಮುಡಬೂಳ, ಶೋಭಾ ಗೋಗಿಪೇಟ್, ಶಶಿಕಲಾ ಗೋಗಿ, ಮಾನಮ್ಮ ಮದ್ದರಿಕಿ ಸೇರಿದಂತೆ ಇತರರಿದ್ದರು.