ಮಹಿಳೆ ಕುಟುಂಬಕ್ಕಾಗಿ ಮೀಸಲಿರುವ ಶಕ್ತಿ: ಡಾ. ಮಂತರ್ ಗೌಡ

| Published : Mar 09 2025, 01:45 AM IST

ಸಾರಾಂಶ

ಪ್ರತಿಯೊಬ್ಬ ಮಹಿಳೆ ಜೀವನದಲ್ಲಿ ವಿವಿಧ ಹಂತಗಳನ್ನು ದಾಟಿ ಆತ್ಮವಿಶ್ವಾಸ ಗಳಿಸಿ ಶಕ್ತಿ ಹೊಂದುವ ಪ್ರತಿರೂಪವಾಗಿರುತ್ತಾರೆ ಎಂದು ಡಾ. ಮಂತರ್‌ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಪ್ರತಿಯೊಬ್ಬ ಮಹಿಳೆ ಜೀವನದಲ್ಲಿ ವಿವಿಧ ಹಂತಗಳನ್ನು ದಾಟಿ ಆತ್ಮವಿಶ್ವಾಸ ಗಳಿಸಿ ಶಕ್ತಿ ಹೊಂದುವ ಪ್ರತಿರೂಪವಾಗಿರುತ್ತಾರೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಂತರ್ ಗೌಡ ಅವರು ಪ್ರತಿಯೊಬ್ಬ ಮಹಿಳೆಯರು ತನ್ನ ಬದುಕನ್ನು ಕುಟುಂಬಕ್ಕಾಗಿ ಮೀಸಲಿರುವ ಶಕ್ತಿಯಾಗಿದ್ದು ಆಕೆಯ ಶ್ರಮ ನಿಜಕ್ಕೂ ಅದ್ಭುತವಾಗಿದೆ. ಇದೀಗ ಸಮಾಜದ ವಿವಿಧ ಮಜಲುಗಳಲ್ಲಿ ಬಹುತೇಕ ಜವಾಬ್ದಾರಿಯನ್ನು ನಿಭಾಯಿಸುವ ಹಾಗೂ ಮುನ್ನಡೆಸುವ ಶಕ್ತಿ ಮಹಿಳೆಯರಿಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ತ್ರೀ ಶಕ್ತಿ ಒಕ್ಕೂಟದ ರಾಜ್ಯಾಧ್ಯಕ್ಷೆ ರೆಹನಾ ಸುಲ್ತಾನ್, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಮರ್ಥವಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಎಂದರು.

ತಮ್ಮ ಜವಾಬ್ದಾರಿ ನಡುವೆ ಸಾಧನೆಗಳನ್ನು ಮಾಡಿರುವ ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡುವುದು ನಿಜಕ್ಕೂ ಸಂತಸದ ವಿಷಯ ಎಂದರು. ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಬೇಕು. ಆತ್ಮಸ್ಥೈರ್ಯ ತುಂಬ ಮೂಲಕ ಮಹಿಳೆಯರ ಶೋಷಣೆಯನ್ನು ತಪ್ಪಿಸಲು ಸಾಧ್ಯ ಎಂದರು. ಹುಟ್ಟು ಹಾಗೂ ಸಾವಿನ ನಡುವೆ ಸ್ವಾರ್ಥ ರಹಿತ ಬದುಕು ನಡೆಸುವುದು ಎಲ್ಲರ ಗುರಿಯಾಗಬೇಕು. ಹಿರಿಯರ ಮಾರ್ಗದರ್ಶನ ಮೂಲಕ ಪ್ರತಿಯೊಬ್ಬರು ಆರ್ಥಿಕ ಶೈಕ್ಷಣಿಕವಾಗಿ ಬೆಳವಣಿಗೆ ಕಾಣುವಂತಾಗಬೇಕು ಎಂದರು.

ಮುಖ್ಯ ಭಾಷಣಕಾರ ಉಪನ್ಯಾಸಕ ಜಯಕುಮಾರ್ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮ

ಛಾಪನ್ನು ಮೂಡಿಸುತ್ತಿದ್ದಾರೆ. ಸಮಾಜದ ಎಲ್ಲ ಸ್ಥರಗಳಲ್ಲಿ ಮಹಿಳೆಯರು ಬೆಳವಣಿಗೆ ಕಂಡಿದ್ದು ತನ್ನ ಜೀವನದಲ್ಲಿ ಎಲ್ಲಾ ಕಷ್ಟಗಳನ್ನು ಸಹನೆ ಮೂಲಕ ದಾಟಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಅಂಶವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ ಪಿ ಚಂದ್ರಕಲಾ ಮಾತನಾಡಿ, ಮಹಿಳೆಯರು ಕುಟುಂಬದ ಆಧಾರ ಸ್ತಂಭವಾಗಿ ಕಾರ್ಯನಿರ್ವಹಿಸುತ್ತಾರೆ.

ಆರ್ಥಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಬೆಳೆಯಲು ಪ್ರತಿಯೊಬ್ಬರ ಪ್ರೋತ್ಸಾಹದ ಅಗತ್ಯತೆ ಇದೆ ಎಂದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ.ಪಿ. ಶಶಿಧರ್‌ ಮಹಿಳಾ ದಿನಾಚರಣೆಯ ಶುಭಾಶಯ ಕೋರಿ ಮಾತನಾಡಿ, ಮಹಿಳೆಯರು ಧೈರ್ಯದಿಂದ ಜಗತ್ತನ್ನೇ ತಲುಪಬಲ್ಲ ಶಕ್ತಿ ಹೊಂದಿದ್ದಾರೆ ಎಂದರು.

ಸ್ತ್ರೀಶಕ್ತಿ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಹೇಮ ಎಚ್ ಎಂ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶ್ರೀದೇವಿ ಬಿ ಮುಧೋಳ ಕುಶಾಲನಗರ ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮಿ, ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರುಕ್ಮಿಣಿ, ಜಿಲ್ಲಾ ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ಶಾಂತಿ ಮತ್ತಿತರರು ಇದ್ದರು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಸೋಮವಾರಪೇಟೆ ಹಾಗೂ ಕುಶಾಲನಗರ ಸ್ತ್ರೀ ಶಕ್ತಿ ಒಕ್ಕೂಟ ಕಾರ್ಯಕರ್ತರು ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.