ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮಹಿಳೆ ಸೃಷ್ಟಿಯ ಕಣ್ಣು, ವಿವಿಧ ಕೃಷಿ ಚಟುವಟಿಕೆಗಳನ್ನು ಮಹಿಳೆಯರೇ ಹಮ್ಮಿಕೊಳ್ಳುವುದರಿಂದ ಅವರಿಂದಲೇ ಕೃಷಿ ಅಭಿವೃದ್ಧಿ ಸಾಧ್ಯ ಎಂದು ಆರ್ಟ ಆಫ್ ಲಿವಿಂಗ್ ನ ಡಾ.ಬಿ.ಎಂ.ಪಾಟೀಲ ಗುರೂಜಿ ಹೇಳಿದರು.ನಗರದ ಹೊರವಲಯದ ವಿಜಯಪುರ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯ ಸಹಯೋಗದೊಂದಿಗೆ ೬ ದಿನಗಳ ಕಾಲ ಹಮ್ಮಿಕೊಂಡ ಕೃಷಿಸಖಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭೂಮಿಯನ್ನು ಉತ್ತುವದರಿಂದ ಹಿಡಿದು ಬೆಳೆ ಕಟಾವಿನವರೆಗೆ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಇಳುವರಿ ಹೆಚ್ಚಿಸುವಲ್ಲಿ ಹೆಚ್ಚಿನ ಪಾತ್ರವನ್ನು ಮಹಿಳೆಯರೇ ವಹಿಸುತ್ತಿದ್ದಾರೆ. ಇದನ್ನು ನಾವು ನಾವಿಂದು ಮನಗಾಣಬೇಕಾಗಿದೆ. ಕೃಷಿ ಚಟುವಟಿಕೆಗಳಲ್ಲಿ ಮನೆ ಯಜಮಾನರ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಪ್ರತಿಯೊಂದು ನಿರ್ಧಾರವನ್ನು ಮಾಡುತ್ತಾರೆ ಹಾಗೂ ಕೃಷಿ ಉತ್ಪನ್ನಗಳ ಮೌಲವರ್ಧನೆ ಹಾಗೂ ಮಾರುಕಟ್ಟೆವರೆಗೆ ಮಹಿಳೆಯರೆ ನಿರ್ವಹಿಸುತ್ತಾರೆ ಎಂದು ಹೇಳಿದರು.ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ನಿರ್ದೇಶಕ ಡಾ.ಬಾಲರಾಜ ಬಿರಾದಾರ ಮಾತನಾಡಿ, ಕೃಷಿ ಸಖಿಯರು ನೈಸರ್ಗಿಕ ಕೃಷಿ, ಬೆಳೆ ಪರಿವರ್ತನೆ, ಕಡಿಮೆ ವೆಚ್ಚದ ಪರಿಕರ ತಯಾರಿಕೆ, ಎರೆಹುಳು ಕೃಷಿ, ಹೈನೋದ್ಯಮ ಮುಂತಾದ ಸುಸ್ಥಿರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಅನುವಾಗುವಂತೆ ತರಬೇತಿ ಹೊಂದಬೇಕೆಂದರು.
ಹಿರಿಯ ವಿಜ್ಞಾನಿ ಡಾ.ಎಸ್.ಎಂ.ವಸ್ತ್ರದ ಮಾತನಾಡಿ, ಎನ್.ಆರ್.ಎಲ್.ಎಮ್ ವಿದೇಯಕ ಸ್ವಸಹಾಯ ಗುಂಪಿನ ಮಹಿಳಾ ಸದಸ್ಯೆಯರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ ಪಶು ಸಂಗೋಪನೆ, ಮೀನುಗಾರಿಕೆ ಇಲಾಖಾ ಕಾರ್ಯಮಗಳ ವಿಸ್ತರಣಾ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಕೃಷಿ ಸಖಿಯರು ೬ ದಿನಗಳ ತರಬೇತಿ ನಂತರ ಸಂಪನ್ಮೂಲ ವ್ಯಕ್ತಿಗಳಾಗಿ ರೈತರ/ರೈತ ಮಹಿಳೆಯರಿಗೆ ತರಬೇತಿ ನೀಡಬೇಕು. ತಾವು ಪಡೆದ ತಾಂತ್ರಿಕ ಜ್ಞಾನದಿಂದ ಉದ್ಯಮಶೀಲರಾಗಿ, ಗ್ರಾಮದಲ್ಲಿ ಸ್ವಸಹಾಯ ಸಂಘಗಳಿಗೆ ಮಾರ್ಗದರ್ಶನ ಮಾಡಿ, ಬೆಳೆ ಬೆಳೆಯುವದರಿಂದ ಹಿಡಿದು ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಹಂತದವರೆಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರ ಆರ್ಥಿಕ ಅಭಿವೃದ್ಧಿಗೆ ಸಹಕರಿಸಬೇಕೆಂದರು. ಕಾರ್ಯಕ್ರಮದಲ್ಲಿ ಡಾ.ಶಿಲ್ಪಾ ಚೋಗಟಾಪೂರ, ಡಾ.ಕಿರಣ ಸಾಗರ, ಡಾ.ಶಿವರಾಜ ಕಾಂಬಳೆ, ಶ್ರೀಶೈಲ ರಾಠೋಡ, ನಿಂಗಣ್ಣ ಮಸೂತಿ, ಚಂದ್ರಶೇಖರ ಸಿಂಧೂರ, ಅನೀತ ಪಾಟೀಲ, ಕೃಷಿ ಸಖಿಯರಾದ ಚಾಂದಬೀ ಕಾಶಿಮ ಆಲಮೇಲ, ಗೀತಾ ಮೇಳಕುಂದಿ, ರೇಖಾ ಹಚ್ಯಾಳ, ರಾಜೇಶ್ವರಿ ಜಾದವ, ಜಯಶೀಲಾ ದಾಸರ, ಗೀತಾಂಜಲಿ ಹಿಪ್ಪರಗಿ, ಸುಮಂಗಲಾ ಕೋಟಾರಗಸ್ತಿ, ಲಕ್ಷ್ಮೀ ಮಾದರ, ಉಮಾಶ್ರೀ ಭಾವಿಮನಿ, ಜಯಶ್ರೀ ಕುಂಬಾರ, ರೂಬಿನಾ ಸೇರಿದಂತೆ ಮುಂತಾದವರು ಇದ್ದರು.