ಮಹಿಳಾ ಸಂಘಗಳು ಮಹಿಳೆಯರ ಯಶಸ್ಸಿನ ಗುರಿ ಕಡೆಗೆ ದಾರಿ ತೋರುವ ದೀಪಗಳಾಗಬೇಕು. ನಮ್ಮ ಕುಟುಂಬದ ಅಭಿವೃದ್ಧಿಗೆ ಪೂರಕವಾದ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿ ಕಾರ್ಯೋನ್ಮಖರಾಗಬೇಕು .

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಹಿಳೆಯರು ಕುಟುಂಬದ ಜವಾಬ್ದಾರಿ ಜೊತೆ ಆರ್ಥಿಕ ಸ್ವಾವಲಂಬನೆ ಕಡೆಗೂ ಹೆಚ್ಚು ಗಮನ ಹರಿಸುವಂತೆ ಸ್ಫೂರ್ತಿ ಮಹಿಳಾ ಸಂಘದ ಮುಖಂಡರಾದ ಸರ್ವಮಂಗಳ ದೇವರಾಜು ಕರೆ ನೀಡಿದರು.

ಪಟ್ಟಣದ ಹೇಮಾವತಿ ಬಡಾವಣೆಯ ಸ್ಫೂರ್ತಿ ಮಹಿಳಾ ಬಳಗದ ವತಿಯಿಂದ ಸಂಕ್ರಾತಿ ಹಬ್ಬ ಹಾಗೂ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಸಂಘದ ಸಾಧಕರಿಗೆ ಶಾಲು ಹೊದಿಸಿ, ಪದಕ ನೀಡಿ ಗೌರವಿಸಿ ಮಾತನಾಡಿ, ಮಹಿಳಾ ಸಂಘಗಳು ಮಹಿಳೆಯರ ಯಶಸ್ಸಿನ ಗುರಿ ಕಡೆಗೆ ದಾರಿ ತೋರುವ ದೀಪಗಳಾಗಬೇಕು. ನಮ್ಮ ಕುಟುಂಬದ ಅಭಿವೃದ್ಧಿಗೆ ಪೂರಕವಾದ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿ ಕಾರ್ಯೋನ್ಮಖರಾಗಬೇಕು ಎಂದರು.

ಮಹಿಳೆ ಯಶಸ್ವಿ ಗೃಹಿಣಿಯಾಗಿ, ಉದ್ದಿಮೆದಾರಳಾಗಿ ಹೊರಹೊಮ್ಮಬೇಕು. ಮಹಿಳೆಯರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಇವುಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಕುಟುಂಬದ ಸಹಕಾರ ಪಡೆದು ಅಭಿವೃದ್ಧಿ ಪಥದಲ್ಲಿ ಸಾಗುವುದು ಪ್ರತಿಯೊಬ್ಬ ಮಹಿಳೆಯ ಗುರಿಯಾಗಿರಬೇಕೆಂದು ಕರೆ ನೀಡಿದರು.

ಈ ವೇಳೆ ಸಂಘದ ಸದಸ್ಯರಾದ ಭಾಗ್ಯಪ್ರಕಾಶ್, ಜಾನಕಿ, ವೇದಾವತಿ, ಸುಮ ರವಿಶಂಕರ್, ಸವಿತ, ಸುಲೋಚನ ಜಯರಾಮು, ಶಾರದ, ಸುಮಕೃಷ್ಣಕುಮಾರ್, ರೇಣುಕಮಾದೇಗೌಡ ಇದ್ದರು.