ಕುಕನೂರು: ಬೆಳಗ್ಗೆ ಎದ್ದು ನಮ್ ಮಕ್ಕಳು ಚಾ ಕುಡಿಯೋಯಲ್ಲಾ ರೀ, ಅವ್ರೀಗೆ ಸಾರಾಯಿನೇ ಬೇಕು. ಊರಾಗ ಚಾ ಅಂಗಡಿಕ್ಕಿಂತ ಹೆಚ್ಚ ಸಾರಾಯಿ ಅಂಗಡಿ ಅದಾವ್ ರೀ, ಇದ್ಕ್ ಏನಾರ ನೀವಾ ಕ್ರಮ ತಗೋಳ್ರೀ, ಇಲ್ಲಂದ್ರ ಕುಡ್ದು ಕುಡ್ದು, ತಾವೂ ಸಾಯ್ತಾವು ಹಂಗಾ ನಮ್ಮನ್ನೂ ಸಾಯಿ ಬಡಿತ್ತಾವ್ ನೋಡ್ರೀ. ನಡು ಊರಾಗ್ನ ಸಾರಾಯಿ ಮಾರಿ, ಮನೆ ಹಾಳಾಗ್ತೀದ್ದಾವ್ ಎಂದು ಅಕ್ರಮ ಮದ್ಯ ಮಾರಾಟ ಮತ್ತು ಕುಡಿತದ ಹಾವಳಿ ವಿರುದ್ಧ ತಾಯಂದಿರು ಪಿಎಸ್ಐ ಅವರ ಮುಂದೆ ಅಳಲು ತೊಂಡಿಕೊಂಡರು.
ತಾಲೂಕಿನ ದ್ಯಾಂಪೂರು, ಚಿಕ್ಕಬಿಡ್ನಾಳ ಹಾಗೂ ಕದ್ರಳ್ಳಿ ಗ್ರಾಮಗಳ ಮಹಿಳೆಯರು ಬುಧವಾರ ಪಟ್ಟಣದ ಪೊಲೀಸ್ ಠಾಣೆ ಎದುರು ದಿಢೀರ್ ಪ್ರತಿಭಟನೆ ನಡೆಸಿ ಅಕ್ರಮ ಮದ್ಯ ಮಾರಾಟ ಮತ್ತು ಕುಡಿತದ ಹಾವಳಿ ತಕ್ಷಣ ನಿಲ್ಲಿಸಲು ಒತ್ತಾಯಿಸಿದ ಪರಿ ಇದು.ಈ ವೇಳೆ ಮಹಿಳೆಯರು ಮಾತನಾಡಿ, ದ್ಯಾಂಪೂರು ಗ್ರಾಮದಲ್ಲಿ ನಾಲ್ಕರಿಂದ ಆರು ಸ್ಥಳಗಳಲ್ಲಿ, ಚಿಕ್ಕಬಿಡ್ನಾಳದಲ್ಲಿ ಮೂರು ಕಡೆ ಹಾಗೂ ಕದ್ರಳ್ಳಿಯಲ್ಲಿ ಎರಡು ಸ್ಥಳಗಳಲ್ಲಿ ಅಕ್ರಮ ಮದ್ಯ ಮತ್ತು ಸಾರಾಯಿ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿದರು.
ಸಣ್ಣ ಹಳ್ಳಿಗಳಲ್ಲೇ ಬೆಳಗ್ಗೆ 5 ಗಂಟೆಯಿಂದ ಮಧ್ಯರಾತ್ರಿ ವರೆಗೆ ಮದ್ಯ ಲಭ್ಯವಿದ್ದು, ಕುಟುಂಬದ ಪುರುಷರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ನೋವು ತೊಂಡಿಕೊಂಡರು.ನಡು ಊರಾಗ್ನ ಸಾರಾಯಿ ಮಾರಿ, ಮನೆ ಹಾಳಾಗ್ತೀದ್ದಾವ್ರೀ ಅಕ್ರಮ ಮದ್ಯ ಮಾರಾಟದಿಂದ ಹಳ್ಳಿಗಳಲ್ಲಿ ಅಶಾಂತಿ ಉಂಟಾಗುತ್ತಿದ್ದು, ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಸರ್ಕಾರದ ನಿಯಮ ಲೆಕ್ಕಿಸದೆ ಪಾನ್ ಶಾಪ್, ಕಿರಾಣಿ ಅಂಗಡಿ, ಕೂಲ್ ಡ್ರಿಂಕ್ಸ್ ಮಳಿಗೆಗಳು ಹಾಗೂ ಗೂಡಂಗಡಿಗಳಲ್ಲಿಯೂ ನಿರ್ಭಯವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎಂದು ಮಹಿಳೆಯರು ದೂರಿದರು.ನೂತನವಾಗಿ ಅಧಿಕಾರ ಸ್ವೀಕರಿಸಿದ ಪಿಎಸ್‌ಐ ಎಸ್.ಪಿ.ನಾಯಕ್ ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿ, ನಾನು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿ ಸೂಚಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಅಕ್ರಮ ಮಾರಾಟಗಾರರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ದ್ಯಾಂಪುರ, ಚಿಕ್ಕಬಿಡ್ನಳ, ಹೊನ್ನುಣಸಿ ಕ್ರಾಸ್ ಮತ್ತು ಕದ್ರೊಳ್ಳಿ ಗ್ರಾಮಗಳ ಮಹಿಳೆಯರಾದ ಚೆನ್ನಮ್ಮ, ಮಲ್ಲಮ್ಮ, ಜ್ಯೋತೆವ್ವ, ಹನುಮವ್ವ, ಜಯಮ್ಮ, ಹುಲಿಗೆಮ್ಮ, ಗವಿಸಿದ್ದಮ್ಮ, ಸುಬ್ಬಮ್ಮ, ನಿಂಗಮ್ಮ, ರೇಖಾ, ವಿಜಯಲಕ್ಷ್ಮಿ, ಫಕೀರಮ್ಮ,ವಿದ್ಯಾಸಿರಿ, ನಿರ್ಮಲ, ರೇಣಮ್ಮ ಇತರರಿದ್ದರು.