ಸಾರಾಂಶ
ಪಟ್ಟಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಲವಾರು ಮಹಿಳೆಯರು ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ, ಹನೂರು
ಪಟ್ಟಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಲವಾರು ಮಹಿಳೆಯರು ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿಗೆ ಮನವಿ ಪತ್ರ ಸಲ್ಲಿಸಿದರು.ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಂತರ ಮಹಿಳೆ ಹಲವು ಸಮಸ್ಯೆಗಳ ಮನವಿ ಪತ್ರ ಸ್ವೀಕರಿದರು.
ಇಲ್ಲಿನ ವಯೋವೃದ್ಧ ಮಹಿಳೆ ಚಂದ್ರಮ್ಮ ಮಾತನಾಡಿ, ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಸಬ್ ಇನ್ಸ್ಪೆಕ್ಟರ್ ಮಾದಪ್ಪ ಹಾಗೂ ಆತನ ಪತ್ನಿ ಮಮತಾ ಕಳೆದ ಐದು ವರ್ಷಗಳ ಹಿಂದೆ ಪಟ್ಟಣದಲ್ಲಿ ವಾಸವಿದ್ದಾಗ ಆಸ್ಪತ್ರೆ ಖರ್ಚಿಗೆ ಬೇಕೆಂದು ಒಂದೂವರೆ ಲಕ್ಷ ರು. ಹಾಗೂ 25 ಗ್ರಾಂ ಚಿನ್ನ ಪಡೆದು ಕಳೆದ ಐದು ವರ್ಷಗಳಿಂದ ಹಣ ನೀಡದೆ ಸತಾಯಿಸುತ್ತಿದ್ದಾರೆ. ನನಗೆ ಕಣ್ಣು ಕಾಣುವುದಿಲ್ಲ. ಪಾತ್ರೆ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದೇನೆ. ಪೊಲೀಸ್ ಹಾಗೂ ಆತನ ಪತ್ನಿಯಿಂದ ಹಣ ಬರಬೇಕಾಗಿರುವುದನ್ನು ಸೂಕ್ತ ಕ್ರಮ ಕೈಗೊಂಡು ಹಣ ಕೊಡಿಸುವಂತೆ ಮನವಿ ಸಲ್ಲಿಸಿದರು.ರೌಡಿಶೀಟರ್ ನಿಂದ ಕುಟುಂಬ ರಕ್ಷಿಸಿ:ಹನೂರಿನ ರಾಯರು ತೋಟದ ಮನೆಯಲ್ಲಿ ವಾಸವಿರುವ ವಿದ್ಯಾಶ್ರೀ ಮಾತನಾಡಿ, ಮಂಗಲ ಗ್ರಾಮದ ವಿಶ್ವೇಶ್ವರ ಪ್ರಸಾದ್ ಹಾಗೂ ಆತನ ಪುತ್ರ ದಿನನಿತ್ಯ ನನಗೆ ಮತ್ತೆ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ರಾತ್ರಿ ವೇಳೆ ಮನೆಯಲ್ಲಿ ಒಬ್ಬರೇ ಇದ್ದಾಗ ಗಲಾಟೆ ಮಾಡುತ್ತಾರೆ. ನನಗೆ ಭಯವಾಗುತ್ತಿದೆ. ನಮ್ಮ ಮನೆಯವರು ಹೊರಗಡೆ ಹೋದಾಗ ಮನೆ ಹತ್ತಿರ ಬಂದು ವಿಶ್ವೇಶ್ವರ ಪ್ರಸಾದ್ ಪುತ್ರ ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಇವರ ಮೇಲೆ ಹನೂರು ಪೊಲೀಸ್ ಠಾಣೆಯಲ್ಲಿ ಹಲವಾರು ದೂರುಗಳು ದಾಖಲಾಗಿದೆ. ಇವರಿಂದ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ನಮ್ಮನ್ನು ರಕ್ಷಿಸುವಂತೆ ಮನವಿ ಸಲ್ಲಿಸಿದರು.
ಇದೇ ವೇಳೆಯಲ್ಲಿ ಸ್ಥಳದಲ್ಲಿದ್ದ ಪಟ್ಟಣದ ಪೊಲೀಸರಿಗೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಇವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸೂಕ್ತ ಭದ್ರತೆ ನೀಡಿ ಕುಟುಂಬದವರಿಗೆ ಎಂದು ಆಯೋಗದ ಅಧ್ಯಕ್ಷೆ ಸೂಚನೆ ನೀಡಿದರು. ಮಹಿಳೆಯರು ವಿವಿಧ ಸಮಸ್ಯೆಗಳನ್ನು ಹೊತ್ತು ನೂರಾರು ಅರ್ಜಿಗಳನ್ನು ಸಲ್ಲಿಸಿದರು. ವೃದ್ಧಾಪ್ಯ ವೇತನ ಹಾಗೂ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳ ಬಗ್ಗೆ ಬಗೆಹರಿಸದೆ ಇರುವ ಬಗ್ಗೆ ಹಲವಾರು ಸಮಸ್ಯೆಗಳನ್ನು ಹೊತ್ತು ಸಭೆಯಲ್ಲಿ ಮನವಿ ಸಲ್ಲಿಸಿದರು.ನಂತರ ಮಾತನಾಡಿದ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಮಹಿಳೆಯರು ನೀಡಿರುವ ದೂರುಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳೆಯರಿಗೆ ಭರವಸೆ ನೀಡಿದರು.