ಮಹಿಳಾ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

| Published : Nov 24 2025, 03:15 AM IST

ಸಾರಾಂಶ

ಮಹಿಳೆಯರು, ಯುವತಿಯರು ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವುದು ನಾಡಿಗೆ ಮಾತ್ರ ಅಲ್ಲ ದೇಶಕ್ಕೆ ಹೆಮ್ಮೆಯ ಸಂಗತಿ ಎಂದು ಶಾಸಕ ಪೊನ್ನಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಮಹಿಳೆಯರು, ಯುವತಿಯರು ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವುದು ನಾಡಿಗೆ ಮಾತ್ರ ಅಲ್ಲ ದೇಶಕ್ಕೆ ಹೆಮ್ಮೆಯ ಸಂಗತಿ ಎಂದು ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಎ. ಎಸ್. ಪೊನ್ನಣ್ಣ ಹೇಳಿದರು.ಚೈಯಂಡಾಣೆಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶನಿವಾರ ಚೆಯ್ಯಂಡಾಣೆಯ, "ನೀಲಿಯತ್ ಲೇಡೀಸ್ ಕ್ಲಬ್, ಕೊಕೇರಿ " ಇವರು ಆಯೋಜಿಸಿದ ಮಹಿಳಾ ಕ್ರಿಕೆಟ್ ಪಂದ್ಯಾಟವನ್ನು ಬ್ಯಾಟಿನಿಂದ ಚೆಂಡನ್ನು ಹೊಡೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು .ಸಮಾಜದ ಎಲ್ಲಾ ಚಟುವಟಿಕೆಗಳಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿರುವುದು ಸಮಾಜದ ಏಳಿಗೆಗೆ ಉತ್ತಮವಾದ ಬೆಳವಣಿಗೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಎಲ್ಲಾ ರೀತಿಯ ಕ್ರೀಡೆಗಳಲ್ಲಿ ಮಹಿಳೆಯರ ಸಾಧನೆ ಅತ್ಯಂತ ಶ್ಲಾಘನೀಯವಾಗಿ ಮೂಡಿ ಬರುತ್ತಿದೆ. ವಿಶೇಷವಾಗಿ ಕ್ರೀಡೆಗೆ ಹೆಸರುವಾಸಿಯಾಗಿರುವ ನಮ್ಮ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಹಿಳೆಯರು/ಯುವತಿಯರು ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವುದು ನಾಡಿಗೆ ಮಾತ್ರ ಅಲ್ಲ ದೇಶಕ್ಕೆ ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು. ಇಂದಿನ ಈ ಮಹಿಳಾ ಕ್ರಿಕೆಟ್ ಪಂದ್ಯಾಟ ಇಂತಹದೇ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗಲಿ ಎಂದು ಶುಭ ಹಾರೈಸಿದರು.ಪಂಚಾಯಿತಿ ಅಧ್ಯಕ್ಷರು ಪೆಮ್ಮಂಡ ಕೌಶಿ ಕಾವೇರಮ್ಮ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ , ಉಪಾಧ್ಯಕ್ಷರು ಕೋಡಿರ ವಿನೋದ್ ನಾಣಯ್ಯ, ಬಿದ್ದಂಡ ರಾಜೇಶ್ ಅಚ್ಚಯ್ಯ, ಕಾಫಿ ಬೆಳೆಗಾರರಾದ ಚೆರಿಯಪಂಡ ಲಲಿತಾ ಪೂವಪ್ಪ, ಬೆಂಗಳೂರು ಹಾಕಿ ಅಕಾಡೆಮಿ ಉಪಾಧ್ಯಕ್ಷ ತುದಿಮಂಡ ಲೋಕೇಶ್ ಕುಟ್ಟಪ್ಪ, ಬೆಳೆಗಾರರಾದ ಮಚ್ಚಾಂಡ ಸೀಮಾ ಚಂಗಪ್ಪ, ಪೊನ್ನಚೆಂಡ ಮಂಜುಳಾ ಐಚೆಟ್ಟಿರ ಸುನೀತ, ಕೊಕೇರಿ ಮಹಿಳಾ ಸಮಾಜದ ಅಧ್ಯಕ್ಷ ಪೊನ್ನಚೆಂಡ ಮಂಜು, ಜಿಎಂಟಿ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ವಿಮಲಾ ಕೆ ಎಂ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.