ಮಹಿಳಾ ದಸರಾಗೆ ಹೆಚ್ಚಿನ ಭಾಗವಹಿಸುವಿಕೆ ಅಗತ್ಯ: ರಾಣಿ ಮಾಚಯ್ಯ

| Published : Sep 29 2025, 03:02 AM IST

ಮಹಿಳಾ ದಸರಾಗೆ ಹೆಚ್ಚಿನ ಭಾಗವಹಿಸುವಿಕೆ ಅಗತ್ಯ: ರಾಣಿ ಮಾಚಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪದ್ಮಶ್ರೀ ಪುರಸ್ಕೃತೆ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಉದ್ಘಾಟನೆ ಮಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ನಗರ ದಸರಾ ಸಮಿತಿ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ನಗರದಲ್ಲಿ ಭಾನುವಾರ ಮಹಿಳಾ ದಸರಾ ಸಂಭ್ರಮದಿಂದ ಜರುಗಿತು.ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಉದ್ಘಾಟನೆ ಮಾಡಿದರು.

ನಂತರ ಮಾತನಾಡಿದ ಅವರು, ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಬೇಸರ ತಂದಿದೆ. ಮಳೆ ಇದ್ದರೂ ವರ್ಷಕ್ಕೆ ಒಮ್ಮೆ ಬರುವ ದಸರಾವನ್ನು ಎಲ್ಲರೂ ಪಾಲ್ಗೊಂಡು ಆಚರಿಸುವಂತಾಗಬೇಕು. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪಾಲ್ಗೊಳ್ಳುವಂತಾಗಬೇಕು ಎಂದರು.

ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಹಿಂದೆ ಮಹಿಳೆ ದಸರಾ ಆಚರಣೆಯಾಗುತ್ತಿರಲಿಲ್ಲ. ಹಿಂದೆ ಮಹಿಳಾ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ಸಂಭ್ರಮದಿಂದ ಆಚರಿಸಿದ್ದೆವು. ಆದರೆ ಈಗ ಮಹಿಳಾ ದಸರಾದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿದೆ. ಮಹಿಳಾ ದಸರಾವನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಹೋಗಬೇಕಾಗಿದೆ. ಮಹಿಳೆಯರಿಗಾಗಿಯೇ ಮೀಸಲಿಡುವ ದಿನವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಅಗತ್ಯ ಸಿದ್ಧತೆಯೊಂದಿಗೆ ಮುಂದಿನ ದಿನಗಳಲ್ಲಿ ಸಂಭ್ರಮದ ಮಹಿಳಾ ದಸರಾ ಆಚರಣೆಗೆ ಪ್ರಯತ್ನಿಸುವಂತಾಗಬೇಕು ಎಂದು ಹೇಳಿದರು. ಮಡಿಕೇರಿ ಶಾಸಕರು ದಸರಾ ಆಚರಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿ ಸರ್ಕಾರದಿಂದ ಅನುದಾನ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ನಿಟ್ಟಿನಲ್ಲಿ ಮಹಿಳೆಯರಿಗಾಗಿ ಆಚರಿಸುವ ಮಹಿಳಾ ದಸರಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವಂತಾಗಬೇಕು ಎಂದರು.ನಿವೃತ್ತ ಪ್ರಾಂಶುಪಾಲರದ ಕುಂತಿ ಬೋಪಯ್ಯ ಮಾತನಾಡಿ, ದಸರಾ ಎಂಬುದು ಒಂದು ವಿಶಿಷ್ಟ ಹಬ್ಬವಾಗಿದ್ದು, ಇದರ ಅವಿಭಾಜ್ಯ ಅಂಗ ಮಹಿಳಾ ದಸರಾವಾಗಿದೆ. ಇದು ಮಹಿಳೆಯರ ಶಕ್ತಿ, ಸಾಮಾರ್ಥ್ಯ, ಕೌಶಲ್ಯವನ್ನು ಗೌರವಿಸುವ ದಿನವಾಗಿದೆ. ದಸರಾ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗಾಗಿಯೇ ಒಂದು ದಿನವನ್ನು ಮೀಸಲಿಟ್ಟಿರುವುದು ಶ್ಲಾಘನೀಯ ಎಂದು ತಿಳಿಸಿದರು.ಮಹಿಳೆ ೧೦ ಹಲವು ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮೆಚ್ಚುಗೆಗೆ ಪಾತ್ರವಾಗುತ್ತಿದ್ದಾಳೆ. ಒಬ್ಬ ಪುರುಷ ಓದಿದರೆ ಆತನಲ್ಲಿ ಮಾತ್ರ ಬದಲಾವಣೆ ಸಾಧ್ಯ. ಆದರೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಹೇಳುವಂತೆ ಹೆಣ್ಣು ಕಲಿತರೆ ಒಂದು ಪೀಳಿಗೆಯನ್ನೇ ಬದಲಾಯಿಸಬಹುದು. ಮಹಿಳೆಯರ ಪ್ರತಿಭೆಯನ್ನು ಗುರುತಿಸುವುದು, ಶ್ರಮಕ್ಕೆ ಸ್ಥಾನಮಾನ ನೀಡುವಂತಹ ಇಂತಹ ಕಾರ್ಯಕ್ರಮಗಳಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಪಿ. ಸವಿತಾ, ನಗರಸಭಾ ಸದಸ್ಯೆ ಸವಿತಾ ರಾಕೇಶ್ ಮಾತನಾಡಿದರು.ಇದೇ ಸಂದರ್ಭ ಉತ್ತಮ ಸೇವೆ ಸಲ್ಲಿಸುವುದರೊಂದಿಗೆ ಸಾಧನೆ ಮಾಡಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ, ಪೌರಸೇವಾ ನೌಕರರನ್ನು ಸನ್ಮಾನಿಸಲಾಯಿತು.ನಗರಸಭೆ ಅಧ್ಯಕ್ಷೆ ಹಾಗೂ ದಸರಾ ಸಮಿತಿ ಅಧ್ಯಕ್ಷೆ ಪಿ. ಕಲಾವತಿ ಅಧ್ಯಕ್ಷತೆ ವಹಿಸಿದ್ದರು.ದಸರಾ ಸಮಿತಿ ಖಜಾಂಚಿ ಸಬಿತಾ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಮೀನಾಜ್ ಪ್ರವೀಣ್, ಒಡಿಪಿ ಸಂಸ್ಥೆಯ ಮುಖ್ಯಸ್ಥೆ ಜಾಯ್ಸ್ ಮೆನೆಜಸ್, ನಗರಸಭೆ ಸದಸ್ಯರಾದ ಚಿತ್ರಾವತಿ, ಮೇರಿ ವೇಗಸ್, ಸಿ.ಕೆ. ಮಂಜುಳಾ, ಉಷಾ ಕೆ., ಪ್ರಮುಖರಾದ ಪುಷ್ಪಾವತಿ, ಜುಲೇಕಾಬಿ, ಪುಷ್ಪಾ ಮತ್ತಿತರರು ಈ ಸಂದರ್ಭ ಹಾಜರಿದ್ದರು.

ಮನರಂಜನಾ ಸ್ಪರ್ಧೆಗಳು:

ಮಹಿಳಾ ದಸರಾ ಅಂಗವಾಗಿ ಮಹಿಳೆಯರಿಗಾಗಿ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸೀರೆಗೆ ನಿಖರ ಬೆಲೆ ಹೇಳುವುದು, ಬಾಂಬ್ ಇನ್‌ ದ ಸಿಟಿ, ಕೆರೆ ದಡ ಆಟ, ಮೆಹಂದಿ ಹಾಕುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್, ಭಾರತೀಯ ಸಾಂಪ್ರದಾಯಿಕ ಉಡುಗೆ ಪ್ರದರ್ಶನ, ಕೇಶ ವಿನ್ಯಾಸ ಸ್ಪರ್ಧೆ, ಬಲೂನ್ ಮತ್ತು ಕಪ್ಪು, ಹಣೆಯಲ್ಲಿ ಇಟ್ಟು ಬಿಸ್ಕೆಟ್ ತಿನ್ನುವುದು, ಜಾನಪದ ನೃತ್ಯ ಸ್ಪರ್ಧೆ, ಬಲೂನ್ ಕಾಲಲ್ಲಿ ಹಿಡಿದು ಓಡುವುದು, ದಸರಾ ಸಂಬಂಧಿತ ರಸಪ್ರಶ್ನೆ ಸ್ಪರ್ಧೆ, ವಾಲಗ ಕುಣಿತ ಸ್ಪರ್ಧೆ ನಡೆಯಿತು.