ಸಾರಾಂಶ
ರಾಮನಗರ: ಅಕ್ಕಪಕ್ಕದ ಮನೆಯ ಹೆಂಗಸರ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ಹೊಸಬೈರೋಹಳ್ಳಿಯ ಸ್ವಾಮಿ ಇಟ್ಟಿಗೆ ಫ್ಯಾಕ್ಟರಿಯಲ್ಲಿ ನಡೆದಿದೆ. ಹನುಮಂತ ಪೂಜಾರಿ ಪತ್ನಿ ನಿಂಗಮ್ಮ (40)ಮೃತರು. ಮೌನೇಶ್ ಪತ್ನಿ ರತ್ನಮ್ಮ ಕೃತ್ಯ ಎಸಗಿದವರು. ಇಟ್ಟಿಗೆ ಫ್ಯಾಕ್ಟರಿಯಲ್ಲಿ ಹನುಮಂತ ಪೂಜಾರಿ, ಮೌನೇಶ್ ಸೇರಿದಂತೆ ಮೂರು ಕುಟುಂಬಗಳು ಕೆಲಸ ಮಾಡಿಕೊಂಡು ಲೇಬರ್ ಶೆಡ್‌ನಲ್ಲಿ ವಾಸವಾಗಿವೆ. ಮೌನೇಶ್ ಪತ್ನಿ ರತ್ನಮ್ಮ ನೀರು ಹಿಡಿಯುವ ಮತ್ತು ಓಡಾಡುವ ವಿಚಾರವಾಗಿ ಹನುಮಂತನ ಪತ್ನಿ ನಿಂಗಮ್ಮ ಅವರೊಂದಿಗೆ ಜಗಳ ಆಡುತ್ತಿದ್ದರು. ಕಳೆದ ನ.16ರಂದು ಜಗಳ ವಿಕೋಪಕ್ಕೆ ತಿರುಗಿ, ರತ್ನಮ್ಮ ಬಿಸಿಬಿಸಿ ನೀರನ್ನು ನಿಂಗಮ್ಮರ ಮೇಲೆ ಎರಚಿದ್ದಾಳೆ. ತಕ್ಷಣ ಆಕೆಯನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ನಿಂಗಮ್ಮ ಪತಿ ಹನುಮಂತ ಪೂಜಾರಿ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.