ಸಾರಾಂಶ
ರಾಯಚೂರು: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಹೊಸ ಸಂಶೋಧನೆಗಳ ಮುಖಾಂತರ ರೈತರ ಪ್ರಗತಿಗೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಸಹಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಏಳಿಗೆ ಸಾಧಿಸಿ ಕೃಷಿ ಹಾಗೂ ರೈತರಿಗೆ ಸದಾ ಬೆನ್ನೆಲುಬಾಗಿ ವಿವಿಧ ಕೆಲಸ ಮಾಡಬೇಕು ಎಂದು ಹರಿಯಾಣದ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆ ಮುಖ್ಯಸ್ಥ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ವಿಶ್ರಾಂತ ಕುಲಪತಿ ಡಾ.ಸಿ.ವಾಸುದೇವಪ್ಪ ಹೇಳಿದರು.
ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ ವಿವಿಯ 15ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿವಿಯು ಆರಂಭದಿಂದಲೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಬಂದಿದೆ. ಇದರ ಜೊತೆಗೆ ರೈತರೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡು ಉತ್ತಮ ಕೃಷಿ ಪದ್ಧತಿಗಳ ಮಾರ್ಗದರ್ಶನವನ್ನು ನೀಡುತ್ತಾ ತನ್ನೊಂದಿಗೆ ಕೃಷಿ ವಲಯ, ವಿದ್ಯಾರ್ಥಿಗಳು ಹಾಗೂ ಅನ್ನದಾತರು ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.
ಈ ವಿವಿಯಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದಾಗ ವಿವಿಯ ರಾಯಭಾರಿಗಳಾಗಲಿದ್ದು, ಆ ಸ್ಥಾನಕ್ಕೆ ತಲುಪುವ ವಿದ್ಯಾರ್ಥಿಗಳು ವಿವಿಯ ಅಸ್ತಿತ್ವವನ್ನು ಎತ್ತಿ ತೋರಿಸುವ ಗುರುತರ ಜವಾಬ್ದಾರಿ ಹೊಂದಿರುತ್ತಾರೆ ಎಂದು ಹೇಳಿದರು.ಉತ್ತಮ ಆರೋಗ್ಯದಿಂದ ಮಾತ್ರ ಆರೋಗ್ಯಕರ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ. ಆದ್ದರಿಂದ ಉತ್ತಮ ಆರೋಗ್ಯಕ್ಕೆ ಪೂರಕವಾದ ಆಹಾರ ನೀಡುವುದು ಕೂಡ ಅಷ್ಟೆ ಮುಖ್ಯವಾಗಿರುತ್ತದೆ. ಉತ್ತಮ ಆಹಾರವನ್ನು ಉತ್ಪಾದಿಸಲು ಸಂಶೋಧನೆ ಹಾಗೂ ಗುಣಮಟ್ಟ ಶಿಕ್ಷಣ ನೀಡುವ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಆಹಾರ ವ್ಯರ್ಥವೆಂದರೇ ಕೇವಲ ಆಹಾರ ಬಿಸಾಡುವುದಷ್ಟೆ ಅಲ್ಲ, ಬೇಸಾಯದ ಸಮಯದಲ್ಲಿ ಆಗುವ ವ್ಯರ್ಥ, ಸಂಗ್ರಹಣೆ, ಸ್ಥಳಾಂತರದ ಸಮಯದಲ್ಲಿ ಆಗುವ ವ್ಯರ್ಥವನ್ನು ತಡೆಯಬೇಕಾಗಿದೆ. ಏಕೆಂದರೆ ಜನಸಂಖ್ಯಾ ಸ್ಫೋಟದಿಂದ ಪ್ರಸ್ತುತ ದಿನಗಳಲ್ಲಿ ಶೂನ್ಯ ಹಸಿವಿನ ಸವಾಲು ಎದುರಾಗಿದ್ದು, ಆಹಾರ ವ್ಯರ್ಥ ಮಾಡದೇ ಮುಂದಿನ ಪೀಳಿಗೆಗಾಗಿ ಆಹಾರ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.ಇದೇ ವೇಳೆ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಎಮ್.ಎಸ್ ದಿವಾಕರ ಮಾತನಾಡಿ, ಕಡಿಮೆ ಭೂ ಪ್ರದೇಶ ಹೊಂದಿರುವ ಭಾರತ ದೇಶವು ಇಂದು ಅನ್ಯ ದೇಶಗಳಿಗೆ ಅನ್ನವನ್ನು ನೀಡುತ್ತಿದ್ದು ಹೆಮ್ಮೆಯ ವಿಚಾರವಾಗಿದೆ. ಇದಕ್ಕೆ ಮುಖ್ಯ ಕಾರಣ ಈ ದೇಶದ ರೈತರು, ಕೃಷಿ ವಿಜ್ಞಾನಿಗಳು ಮತ್ತು ಕೃಷಿ ವಿಜ್ಞಾನಿಗಳನ್ನು ರೂಪಿಸುವ ಶಿಕ್ಷಕರು. ವಿಶ್ವವಿದ್ಯಾಲಯದಲ್ಲಿ ಉತ್ತಮ ರೀತಿಯ ಶಿಕ್ಷಣ ಪಡೆದು ಪ್ರತಿಯೊಬ್ಬರು ಉನ್ನತ ಸ್ಥಾನಕ್ಕೇರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ, ವ್ಯವಸ್ಥಾಪನಾ ಮಂಡಳಿ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ರೈತರು ಸೇರಿ ಇನ್ನಿತರರು ಉಪಸ್ಥಿತರಿದ್ದರು.