ಬೆಳೆ ಸಮೀಕ್ಷೆ: ರೈತರೊಂದಿಗೆ ಸೌಜನ್ಯದಿಂದ ವರ್ತಿಸಿ

| Published : Nov 23 2023, 01:45 AM IST

ಸಾರಾಂಶ

ಕೃಷಿ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಚಲುವರಾಯಸ್ವಾಮಿ ಸೂಚನೆ । ಪರಿಹಾರ ವಿತರಣೆಗೆ ಶೇ.75 ನೋಂದಣಿ

ಕೃಷಿ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಚಲುವರಾಯಸ್ವಾಮಿ ಸೂಚನೆ । ಪರಿಹಾರ ವಿತರಣೆಗೆ ಶೇ.75 ನೋಂದಣಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ತೀವ್ರ ಬರ ಆವರಿಸಿದ ಪರಿಸ್ಥಿತಿಯಲ್ಲಿ ಬೆಳೆ ಸಮೀಕ್ಷೆ ವೇಳೆ ಅಧಿಕಾರಿಗಳು ಕಾಠಿಣ್ಯತೆ ತೋರದೆ, ರೈತರಿಗೆ ಅನುಕೂಲ ಕಲ್ಪಿಸಲು ಸರಳತೆ ಪ್ರದರ್ಶಿಸಿ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿ ವರ್ಗಕ್ಕೆ ಸೂಚಿಸಿದ್ದಾರೆ.

ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಕೃಷಿ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇಂದ್ರದಿಂದ ಅನುದಾನ ಬರುತ್ತಿದ್ದಂತೆ ರೈತರಿಗೆ ಬೆಳೆ ಹಾನಿ ಪರಿಹಾರದ ಹಣ ವಿತರಿಸಲಾಗುವುದು. ರಾಜ್ಯದ 223 ತಾಲೂಕನ್ನು ಬರ ಪೀಡಿತವೆಂದು ಘೋಷಿಸಿದ್ದು, ಎನ್.ಡಿ.ಆರ್‌.ಎಫ್‌. ಮಾನದಂಡದಡಿ 13 ಸಾವಿರ ಕೋಟಿ ರು. ಪರಿಹಾರ ಕೋರಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ನವೆಂಬರ್ ಅಂತ್ಯದೊಳಗೆ ಅನುಮೋದನೆ ನಿರೀಕ್ಷಿಸಿದ್ದು, ಅನುಮತಿ ಸಿಗುತ್ತಿದ್ದಂತೆ ಫ್ರೂಟ್ಸ್ ತಂತ್ರಾಂಶದ ಮೂಲಕ ರೈತರಿಗೆ ಪರಿಹಾರ ನೀಡಲಾಗುವುದು ಎಂದುಹೇಳಿದರು.

ಬೆಳೆ ಪರಿಹಾರ ವಿತರಣೆಗೆ ಶೇ.75 ನೋಂದಣಿಯಾಗಿದ್ದು ಸಿದ್ಧತೆ ಪೂರ್ಣಗೊಳಿಸಿದೆ. ಶೇ.95 ಬೆಳೆ ಸಮೀಕ್ಷೆ ಮಾಡಿದ್ದು ಇ- ಕೆವೈಸಿ ಶೇ.90 ಪೂರ್ಣಗೊಳಿಸಲಾಗಿದೆ. ಕೇಂದ್ರ ಹಣಕಾಸು ಸಚಿವರನ್ನು ಗುರುವಾರ ಭೇಟಿಯಾಗಲು ತಾವು, ಕಂದಾಯ, ಗ್ರಾಮೀಣಾಭಿವೃದ್ಧಿ ಸಚಿವರು ದೆಹಲಿಗೆ ತೆರಳುತ್ತಿದ್ದೇವೆ ಎಂದರು.

ಮಿತ ನೀರಿನ ಬಳಕೆಯಿಂದ ಉತ್ಪಾದನೆ; ಸಂಶೋಧನೆ ಅಗತ್ಯ:

ಭತ್ತ, ಮೆಕ್ಕೆ, ರಾಗಿ ಇನ್ನಿತರೆ ಬೆಳೆಗಳನ್ನು ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ತೇವಾಂಶ, ನೀರು ಬಳಕೆ ಮತ್ತು ಕನಿಷ್ಠ ನಿರ್ವಹಣೆ ಮಾಡುವ ಮೂಲಕ ವೆಚ್ಚ ಕಡಿಮೆ ಮಾಡುವುದು ಮತ್ತು ಬರಗಾಲದಲ್ಲಿ ಮಿತ ನೀರಿನ ಬಳಕೆ ಮೂಲಕ ಆಹಾರ ಧಾನ್ಯ ಉತ್ಪಾದನೆಗೆ ಸಂಶೋಧನೆ ಕೈಗೊಳ್ಳಲು ಕೃಷಿ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳ ಸೇವೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಕೃಷಿ ವಿಜ್ಞಾನಿಗಳನ್ನು ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕೆಲವು ರೈತರಿಗೆ ಹೆಚ್ಚು- ಕಡಿಮೆ ಪರಿಹಾರ:

ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ ಮಾತನಾಡಿ, ಪೂರ್ವ ಮುಂಗಾರಿನ ಭತ್ತದ ಬೆಳೆಯು ಅಧಿಕ ಮಳೆಗೆ ಹಾನಿಯಾಗಿದ್ದು ಹಾನಿಯಾದ ಬೆಳೆಗಳ ಸಮೀಕ್ಷೆ ವೇಳೆ ಚನ್ನಗಿರಿಯಲ್ಲಿ ನೀರಾವರಿ ಆಶ್ರಿತ ಇದ್ದರೂ ಮಳೆಯಾಶ್ರಿತ ಎಂದು. ಎಕರೆಗಟ್ಟಲೇ ನಷ್ಟವಾಗಿದ್ದರೂ 10 ಗುಂಟೆಯೆಂದು ಒಂದೇ ಪ್ಲಾಟಿನಲ್ಲಿ ಕೆಲವರಿಗೆ ಹೆಚ್ಚು ಪರಿಹಾರ, ಕೆಲವರಿಗೆ ಕಡಿಮೆ ಪರಿಹಾರ ಬಂದಿದೆ. ಇದನ್ನು ನೋಡಲ್ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸಿ. ಈ ತಾರತಮ್ಯ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸಲು ಕೃಷಿ ಆಯುಕ್ತರಿಗೆ ಸಚಿವ ಚಲುವರಾಯಸ್ವಾಮಿ ಆದೇಶಿಸಿದರು.

ಮಾಯಕೊಂಡ ಶಾಸಕ ಕೆ.ಎಸ್‌.ಬಸವಂತಪ್ಪ, ಕೃಷಿ ಇಲಾಖೆ ಅಪರ ನಿರ್ದೇಶಕ ವಿ.ಜಿ.ಪಾಟೀಲ್‌, ಅಪರ ಜಿಲ್ಲಾಧಿಕಾರಿ ಪಿ.ಎನ್‌.ಲೋಕೇಶ, ಮೂರು ಜಿಲ್ಲೆ ಕೃಷಿ ಅಧಿಕಾರಿಗಳಿದ್ದರು.

ರಾಜ್ಯದಲ್ಲಿ ಹೊಸದಾಗಿ 100 ಕಡೆ ಕಬ್ಬು ಮತ್ತು ಭತ್ತದ ಹಾರ್ವೆಸ್ಟಿಂಗ್ ಹಬ್‍ ಡಿಸೆಂಬರ್ ಒಳಗಾಗಿ ಪ್ರಾರಂಭಿಸಲಾಗುತ್ತಿದೆ. ಇದರಿಂದ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುವ ಜೊತೆಗೆ ಸಮಯ, ಗುಣಮಟ್ಟ ಕಾಪಾಡಲು ಅನುಕೂಲವಾಗಲಿದೆ. ಕನಿಷ್ಠ ಅವಧಿ, ನಿರ್ವಹಣೆ ತಳಿಗಳ ಸಂಶೋಧನೆಗೆ ಒತ್ತು ನೀಡಲಾಗಿದೆ. ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ...............................................ಖರೀದಿದಾರರಿಂದ ವಂಚನೆ ತಪ್ಪಿಸಲು ಕೇಂದ್ರ ಸ್ಥಾಪಿಸಿ

* ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯ

ದಾವಣಗೆರೆ: ಭತ್ತ, ಮೆಕ್ಕೆಜೋಳ ಈಗಾಗಲೇ ಕಟಾವಿಗೆ ಬಂದಿದ್ದು, ರೈತರ ಮನೆ ಬಾಗಿಲಿಗೆ ಬಂದು ಖರೀದಿದಾರರು ಖರೀದಿಸುತ್ತಿದ್ದು, ಇದರಿಂದ ರೈತರಿಗೆ ಆಗುವ ಅನ್ಯಾಯ ತಪ್ಪಿಸಲು ತಕ್ಷಣದಿಂದಲೇ ಖರೀದಿ ಕೇಂದ್ರಗಳ ಸ್ಥಾಪಿಸಲು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಕೃಷಿ ಸಚಿವ ಚಲುವರಾಯಸ್ವಾಮಿಗೆ ಒತ್ತಾಯಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಕೃಷಿ ಸಚಿವ ಅಧ್ಯಕ್ಷತೆಯ ಸಭೆಯಲ್ಲಿ ಮಾತನಾಡಿ, ಖರೀದಿದಾರರು ರೈತರ ಮನೆ ಬಾಗಿಲಿಗೆ ಹೋಗಿ ಖರೀದಿಸುವುದರಿಂದ ರೈತರಿಗೆ ತೀವ್ರ ಆರ್ಥಿಕ ನಷ್ಟವಾಗುತ್ತದೆ. ಹೀಗೆ ಖರೀದಿಸಿದ ಖರೀದಿದಾರರೂ ರೈತರಿಗೆ ಹಣ ಕೊಡದೇ ಮೋಸ ಮಾಡಿರುವ ಪ್ರಕರಣಗಳೂ ಇದ್ದು, ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕು. ರಾಗಿ, ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು ಎಂದರು.

ಸಚಿವ ಚಲುವರಾಯಸ್ವಾಮಿ ಮಾತನಾಡಿ, ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಪೈಕಿ ದಾವಣಗೆರೆಯಲ್ಲಿ ನೀರಾವರಿ ಸೌಲಭ್ಯವಿದೆ. ಇಲ್ಲಿನ ಭತ್ತದ ಇಳುವರಿ ರಾಜ್ಯದಲ್ಲೇ ಹೆಚ್ಚು. ಇನ್ನೂ ಹೆಚ್ಚಿನ ತಾಂತ್ರಿಕತೆ ಅಳವಡಿಸಿಕೊಂಡು, ರೈತರಿಗೆ ಅನುಕೂಲವಾಗಲು ಹೊಸ ಹೊಸ ಸಂಶೋಧನೆಗಳಿಗೆ ಮುಂದಾಗಬೇಕು. ಕೃಷಿ ಅಧಿಕಾರಿಗಳು ಕಚೇರಿಯಲ್ಲೇ ಕಾಲಹರಣ ಮಾಡದೇ, ರೈತರ ತಾಕುಗಳಿಗೆ ಭೇಟಿ ನೀಡುವ ಮೂಲಕ ತಾಂತ್ರಿಕ ಸಲಹೆಗಳನ್ನು ರೈತರಿಗೆ ಮುಟ್ಟಿಸಬೇಕೆಂದು ಸೂಚನೆ ನೀಡಿದರು.